ಮೈಸೂರು

ಇಂದಿನ ತಲೆಮಾರಿನ ದುಃಖ-ದುಮ್ಮಾನಗಳಿಗೆ ಡಾ. ಸಿದ್ದಲಿಂಗಯ್ಯ ಕವಿತೆಗಳೇ ಆಸರೆ : ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಸೆ.2:- ಇಂದಿನ ತಲೆಮಾರಿನ ದುಃಖ-ದುಮ್ಮಾನಗಳಿಗೆ ಡಾ. ಸಿದ್ದಲಿಂಗಯ್ಯ ಅವರ ಕವಿತೆಗಳೇ ಆಸರೆಯಾಗಿವೆ. ‘ಗುಡಿಸಲುಗಳು ಗುಡುಗುತ್ತಿವೆ’, ‘ಬಂಗಲೆಗಳು ನಡುಗುತ್ತಿವೆ’ ಎನ್ನುವ ಅವರ ಸಾಲುಗಳು ಸಮಸಮಾಜದ ಸಾಲುಗಳಾಗಿ ನಿಂತಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವಿಶ್ವಜ್ಞಾನಿ ಸಭಾಂಗಣದಲ್ಲಿ ನಡೆದ ‘ಹೋರಾಟದ ಸಾಗರಕ್ಕೆ ಸಾವಿಲ್ಲದ ನದಿ ಡಾ.ಸಿದ್ದಲಿಂಗಯ್ಯ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಿದ್ದಲಿಂಗಯ್ಯನವರ ಕವಿತೆಗಳು ದಲಿತ ಚಳವಳಿಯ ಹೋರಾಟದ ದಿಕ್ಕನ್ನು ಕಟ್ಟುತ್ತಾ ಕರ್ನಾಟಕ ರಾಜಕಾರಣಕ್ಕೆ ಹೊಸ ಅಲೆಯನ್ನು ಸೃಷ್ಟಿಸಿತು. ಇದರೊಂದಿಗೆ ಪ್ರಗತಿಪರ ನೆಲೆಗಟ್ಟುಗಳು ಒಂದುಗೂಡದ ಸ್ವರೂಪವನ್ನು ಬೆಸೆಯಿತು. ಕೂಲಿಕಾರ್ಮಿಕರು, ಮಹಿಳೆಯರು, ರೈತರು, ಸಾಹಿತಿಗಳು, ವಿದ್ಯಾರ್ಥಿಗಳು, ರಾಜಕಾರಣಿಗಳು, ಆಡಳಿತಗಾರರು ಸೇರಿದಂತೆ ಸಿದ್ದಲಿಂಗಯ್ಯನವರು ಎಲ್ಲರ ಕವಿಯಾಗಿದ್ದರು ಅಂದರೆ ನೆಲದ ಕವಿಯಾಗಿದ್ದರು. ಕವಿಯಾಗಿ ವಿಧಾನ ಪರಿಷತ್ತಿಗೆ ನಾಮಕರಣಗೊಂಡ ಚಾರಿತ್ರಿಕ ಪುರುಷ ಸಿದ್ದಲಿಂಗಯ್ಯನವರು. ಕುಲಪತಿಯಾಗದೆ ಕುಲಪತಿಗಳನ್ನು ಸೃಷ್ಟಿಸಿದರು.

ಸಿದ್ದಲಿಂಗಯ್ಯ ಅವರಿಗೆ ದಲಿತ ಕವಿ ಎಂದು ಕರೆದರೆ ಇಷ್ಟವಾಗುತ್ತಿರಲಿಲ್ಲ. ಏಕೆಂದರೆ ಕವಿತೆಗೆ ಜಾತಿ ಇಲ್ಲ. ಇದನ್ನು ಅನೇಕ ಕಡೆ ಅವರೇ ಉಚ್ಛರಿಸಿದ್ದಾರೆ. ಅವರದು ಮಾನವತ್ವದ ಸಮಾಜದ ಧ್ವನಿ. ಬಾಲ್ಯದಲ್ಲಿ ಅನುಭವಿಸಿದ ಬಡತನ, ಅಸ್ಪೃಶ್ಯತೆ ಅವರನ್ನ ಕ್ರಾಂತಿಕವಿಯಾಗಿ ರೂಪಿಸಿತು. ಇದೇ ಸಭಾಂಗಣದಲ್ಲಿ ಊರುಕೇರಿಗೆ ಮಿಡಿದ ಜೀವಧ್ವನಿ ಎಂಬ ಕಾರ್ಯಕ್ರಮದಲ್ಲಿ ನೃಪತುಂಗ ಪ್ರಶಸ್ತಿ ಭಾಜನರಾಗಿದ್ದ ಸಿದ್ದಲಿಂಗಯ್ಯ ಅವರನ್ನು ಸನ್ಮಾನಿಸುವ ಅವಕಾಶ ನನಗೆ ಲಭಿಸಿತ್ತು. ನಂತರ ಕುಲಪತಿಗಳ ಅಧಿಕೃತ ನಿವಾಸಕ್ಕೆ ಆಗಮಿಸಿ ಮಾತನಾಡಿದ ಕ್ಷಣಗಳು ನನಗೆ ಅವಿಸ್ಮರಣೀಯವಾಗಿದೆ ಎಂದರು.

ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್, ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ಡಾ.ಮಾನಸ ಸಿದ್ದಲಿಂಗಯ್ಯ, ರಂಗಾಯಣದ ಮಾಜಿ ನಿರ್ದೇಶಕ ಜರ್ನಾದನ್ (ಜನ್ನಿ) ಸೇರಿದಂತೆ ಇತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: