ಮೈಸೂರು

ಹೆಡ್ ಕಾನ್ಸಟೇಬಲ್ ಸರ ಅಪಹರಿಸಿದ ಕಳ್ಳರು; ಸಾರ್ವಜನಿಕರು ಕಳ್ಳರನ್ನು ಹಿಡಿದರೂ ದೂರು ನೀಡದ ಹೆಡ್ ಕಾನ್ಸಟೇಬಲ್

ಮೈಸೂರು, ಸೆ.2:- ಮೈಸೂರಿನಲ್ಲಿ ಸರ ಅಪಹರಣ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳ್ಳರು ಹೆಡ್ ಕಾನ್ಸಟೇಬಲ್ ಕೂಡ ಬಿಟ್ಟಿಲ್ಲ.  ವಿದ್ಯಾರಣ್ಯಪುರಂ ಠಾಣೆಯ ಹೆಡ್ ಕಾನ್ಸಟೇಬಲ್ ಓರ್ವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಎಗರಿಸಿದ ಘಟನೆ ನಗರದ  ಸೆಂಟ್ ಫಿಲೋಮಿನಾ ಚರ್ಚ್ ಮುಂಭಾಗ ನಿನ್ನೆ  ರಾತ್ರಿ ನಡೆದಿದೆ.

ಚರ್ಚ್ ಹಿಂಭಾಗದ ರಸ್ತೆಯಲ್ಲಿ ವಾಸವಿರುವ  ವಿದ್ಯಾರಣ್ಯಪುರಂ ಠಾಣೆಯ ಹೆಡ್‌ ಕಾನ್ಸ್‌ಟೇಬಲ್ ಇಲಿಯಾಸ್ ಎಂಬವರೇ ಸರ ಕಳೆದುಕೊಂಡವರಾಗಿದ್ದಾರೆ.    ರಾತ್ರಿ 9.30ರ ಸುಮಾರಿನಲ್ಲಿ ಅವರು ಚರ್ಚ್‌ ಮುಂಭಾಗ ನಿಂತಿದ್ದಾಗ ನಡೆದುಕೊಂಡೇ  ಬಂದ ಇಬ್ಬರು ಖದೀಮರು ಅವರ  ಕುತ್ತಿಗೆಯಲ್ಲಿದ್ದ 32 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಫೈವ್‌ ಲೈಟ್ಸ್ ಸರ್ಕಲ್ ಕಡೆಗೆ ಪರಾರಿಯಾಗಿದ್ದಾರೆ. ಕಳ್ಳರನ್ನು ಅಲ್ಲೇ ಸ್ಥಳದಲ್ಲಿದ್ದ  ವ್ಯಕ್ತಿಯೋರ್ವ ಬೈಕ್‌ ನಲ್ಲಿ ಬೆನ್ನತ್ತಿದನಾದರೂ ರಸ್ತೆ ಹಂಪ್‌ನ ಲ್ಲಿ ನಿಯಂತ್ರಣ ತಪ್ಪಿ ಬೈಕ್ ಬಿದ್ದಿದ್ದರಿಂದ ಖದೀಮರನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಆದರೆ ಬೈಕ್‌ ನಿಂದ ಬಿದ್ದ ವ್ಯಕ್ತಿ ಅಂತಹ ಪರಿಸ್ಥಿತಿಯಲ್ಲೂ ಖದೀಮರು ಎತ್ತ ಓಡುತ್ತಿದ್ದಾರೆ ಎಂಬುದನ್ನು ಗಮನಿಸಿದ್ದು,  ಮಿಲಾದ್ ಬಾಗ್ ಪಾರ್ಕ್‌ ನೊಳಗೆ ಓಡಿದ್ದನ್ನು ಕಂಡು ಅವರ ಬೆನ್ನತ್ತಿದ್ದಲ್ಲದೆ   ಇತರರಿಗೂ ತಿಳಿಸಿದ್ದಾರೆ. ಮಿಲಾದ್ ಬಾಗ್ ಮುಂಭಾಗ ಡಿಯೋ ಸ್ಕೂಟರ್ ಅನ್ನು ನಿಲ್ಲಿಸಿದ್ದ ಕಳ್ಳರು  ಸಾರ್ವಜನಿಕರು ಬೆನ್ನತ್ತಿದ್ದ ಪರಿಣಾಮ ಸ್ಕೂಟರ್ ತೆಗೆದುಕೊಳ್ಳಲು ಸಾಧ್ಯವಾಗದೇ ಮಿಲಾದ್ ಬಾಗ್ ಒಳಗೆ ಅವಿತುಕೊಂಡಿದ್ದರು. ಯುವಕರ ಗುಂಪೊಂದು ಪಾರ್ಕ್ ಒಳಗೆ ಶೋಧನಾ ಕಾರ್ಯ ನಡೆಸಿ ಇಬ್ಬರೂ ಕಳ್ಳರನ್ನು  ಚಿನ್ನದ ಸರ ಸಮೇತ ಹಿಡಿದು ಕೊಟ್ಟಿದ್ದಾರೆ.  ಒಬ್ಬನ ಹೆಸರು ಡಾನ್ ಎಂದು ತಿಳಿದು ಬಂದಿದೆ.

ಕಳ್ಳರ  ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಸಾರ್ವಜನಿಕರೇ ಇಬ್ಬರು ಖದೀಮರನ್ನು ಹಿಡಿದು ಲಷ್ಕರ್ ಠಾಣೆಗೆ ಒಪ್ಪಿಸಿದ್ದಾರೆ. ಸರಗಳ್ಳರನ್ನು ಸಾರ್ವಜನಿಕರೇ ಹಿಡಿದುಕೊಟ್ಟಿದ್ದರೂ, ಸರ ಕಳೆದುಕೊಂಡಿದ್ದ ಹೆಡ್‌ ಕಾನ್ಸ್‌ಟೇಬಲ್ ಠಾಣೆಗೆ ಬಂದು ದೂರು ನೀಡದೆ ಬೇಜವಾಬ್ದಾರಿ ಮೆರೆದಿದ್ದಾರೆ ಎನ್ನಲಾಗಿದೆ.

ಲಷ್ಕರ್ ಠಾಣೆಯ ಪೊಲೀಸರು ಇಬ್ಬರು ಸರಗಳ್ಳರನ್ನು ವಶಕ್ಕೆ ಪಡೆದಿದ್ದು, ನಗರದ ವಿವಿಧ ಬಡಾವಣೆಗಳಲ್ಲಿ ನಡೆಸಿದ 14ಸರಗಳವು ಪ್ರಕರಣವನ್ನು ಭೇದಿಸಿದ್ದಾರೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: