ಕರ್ನಾಟಕಪ್ರಮುಖ ಸುದ್ದಿ

ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಪಾಲಿಕೆಗಳ ಚುನಾವಣೆ: ಮತದಾನ ಆರಂಭ

ಬೆಂಗಳೂರು,ಸೆ.3-ಇಂದು ಬೆಳಗಾವಿ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳ ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ.

ಕಲಬುರಗಿ ಪಾಲಿಕೆಯ 55 ವಾರ್ಡ್​ಗಳಿಂದ 300 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 533 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಕಲಬುರಗಿಯಲ್ಲಿ ಮೋಡ ಕವಿದ ವಾತಾವರಣವಿದ್ದರೂ, ಮತದಾನ ಚುರುಕುಗೊಂಡಿದೆ. ಪಾಲಿಕೆ ವ್ಯಾಪ್ತಿಯ 530 ಮತಗಟ್ಟೆಗಳ ಪೈಕಿ 50 ಅತಿಸೂಕ್ಷ್ಮ, 150 ಸೂಕ್ಷ್ಮ ‌ಮತಗಟ್ಟೆಗಳು ಎಂದು ಗುರುತಿಸಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

2700 ಚುನಾವಣಾ ಸಿಬ್ಬಂದಿ, 1118 ಪೊಲೀಸರನ್ನು ಭದ್ರತೆಗಾಗಿ‌ ನಿಯೋಜಿಸಲಾಗಿದೆ. ವಿ.ಜಿ. ಮಹಿಳಾ ಕಾಲೇಜಿನಲ್ಲಿ ಮಾದರಿ ಮತಗಟ್ಟೆ: ಇಲ್ಲಿನ 49ನೇ ವಾರ್ಡ್ ನ 413ನೇ ಮತಗಟ್ಟೆಯನ್ನು ಮಾದರಿ ಮತಗಟ್ಟೆಯನ್ನಾಗಿ ಚುನಾವಣಾ ಆಯೋಗ ಪರಿವರ್ತಿಸಿದೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆಯ 82 ವಾರ್ಡ್​ಗಳಿಗೆ 420 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಿಗ್ಗೆ 9 ಗಂಟೆ ವೇಳೆಗೆ ಶೇ.4.2% ಮತದಾನ ಆಗಿದೆ. 27ನೇ ವಾರ್ಡ್​ನಲ್ಲಿ ಗಾಮನಗಟ್ಟಿಯಲ್ಲಿನ ಮತಗಟ್ಟೆ ಸಂಖ್ಯೆ 6, 7, 8, 9, 10ರಲ್ಲಿ ವಿವಿ ಪ್ಯಾಟ್ ಇಲ್ಲದೆ ಮತದಾನ ಸ್ಥಗಿತಗೊಂಡಿತ್ತು. ಅತ್ತ 52ನೇ ವಾರ್ಡ್​ನಲ್ಲಿ ಬಿಜೆಪಿಯವರಿಗೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆಂದು ಆರೋಪಿಸಿ ಕೆ.ಆರ್.ಎಸ್ ಪಕ್ಷದವರು ಪ್ರತಿಭಟನೆಗೆ ಮುಂದಾಗಿದ್ದ ಘಟನೆ ನಡೆಯಿತು.

ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್​ಗಳ ಚುನಾವಣೆಯಲ್ಲಿ 385 ಅಭ್ಯರ್ಥಿಗಳು ಅಖಾಡಕ್ಕಿಳಿದಿದ್ದಾರೆ. ಬೆಳಗಾವಿಯಲ್ಲಿ 415 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 9 ಗಂಟೆ ವೇಳೆಗೆ ಶೇ.5.38 ಮತದಾನವಾಗಿದೆ.

ಅಭ್ಯರ್ಥಿಗಳು, ಬೆಂಬಲಿಗರು ಹಾಗೂ ಕಾರ್ಯಕರ್ತರು ಮತದಾರರ ಮನವೊಲಿಕೆಗೆ ಕೊನೆ ಕ್ಷಣದ ಕಸರತ್ತು ನಡೆಸಿದ್ದಾರೆ. ಮತದಾನ ಕೇಂದ್ರಗಳ ನೂರು ಮೀಟರ್ ಅಂತರದ ಹೊರಗೆ ಟೆಂಟ್‌ಗಳನ್ನು ಹಾಕಿಕೊಂಡಿರುಬ ಅಭ್ಯರ್ಥಿಗಳ ಕಡೆಯವರು ಹಾಗೂ ಕಾರ್ಯಕರ್ತರು ಮತದಾರರಿಗೆ ಮತಗಟ್ಟೆ ಸಂಖ್ಯೆಯ ಚೀಟಿ ಬರೆದುಕೊಡುತ್ತಿದ್ದಾರೆ. ತಮ್ಮ ಅಭ್ಯರ್ಥಿಗೇ ಮತಹಾಕುವಂತೆ ಕೋರುತ್ತಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: