ದೇಶಪ್ರಮುಖ ಸುದ್ದಿ

ಪ್ಯಾರಾಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಅವನಿ ಲೇಖರಾಗೆ ಅಭಿನಂದನೆಗಳ ಮಹಾಪೂರ

ನವದೆಹಲಿ,ಸೆ.3-ಟೋಕಿಯೊ ಪ್ಯಾರಾಲಿಂಪಿಕ್ಸ್‌ ಶೂಟಿಂಗ್ ಸ್ಪರ್ಧೆಯಲ್ಲಿ ಎರಡು ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಭಾರತದ ಶೂಟರ್ ಅವನಿ ಲೇಖರಾ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಅಭಿನವ್ ಬಿಂದ್ರಾ, ಕಿರಣ್ ರಿಜುಜು, ದೀಪಾ ಮಲ್ಲಿಕ್, ಮಾಜಿ ಕ್ರಿಕೆಟಿಗ ವಿವಿಸ್ ಲಕ್ಷ್ಮಣ್ ಸೇರಿದಂತೆ ದೇಶದ ಜನತೆ ಶುಭಾಶಯ ತಿಳಿಸಿ ಅವನಿ ಸಾಧನೆಯನ್ನು ಕೊಂಡಾಡಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿ, ಕಂಚು ಗೆದ್ದಿರುವ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆಯಾದ ಅವನಿ ಲೇಖಾರ ಅವರಿಗೆ ಅಭಿನಂದನೆಗಳು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇದೊಂದು ಮಹೋನ್ನತ ಸಾಧನೆ. ಯಶಸ್ವಿಯಾಗಲು ನಿಮ್ಮ ಸ್ಥಿರತೆ ಮತ್ತು ಬದ್ಧತೆಯು ಎಲ್ಲರಿಗೂ ಸ್ಫೂರ್ತಿಯಾಗಿದೆ. ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದ್ದಾರೆ.

ಪ್ರಧಾನಿ ಮೋದಿ ಅವರು, ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ವೈಭವ ಹೆಚ್ಚಿದೆ. ಅವನಿ ಲೇಖರಾ ಅವರ ಅದ್ಭುತವಾದ ಪ್ರದರ್ಶನದಿಂದ ಹರ್ಷಗೊಂಡಿದ್ದೇನೆ. ಮನೆಗೆ ಕಂಚಿನ ಪದಕ ತಂದಿದ್ದಕ್ಕೆ ಅಭಿನಂದನೆಗಳು. ಆಕೆಯ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಪ್ಯಾರಾಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿದ ಅವನಿ ಲೇಖರಾ ಅವರಿಗೆ ಅಭಿನಂದನೆಗಳು. ಅವರ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ ಎಂದಿದ್ದಾರೆ.

ಕ್ರೀಡಾಪಟು, ಶೂಟರ್ ಅಭಿನವ್ ಬಿಂದ್ರಾ ಅವರು, ಪ್ಯಾರಾಲಿಂಪಿಕ್ಸ್ ನಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಚಿನ್ನ ಹಾಗೂ ಕಂಚು ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಅವನಿ ಲೇಖರಾ ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸಚಿವ ಕಿರಣ್ ರಿಜುಜು ಅವರು, ಭಾರತಕ್ಕೆ ಹೆಮ್ಮೆಯ ಕ್ಷಣ. ಪ್ಯಾರಾಲಿಂಪಿಕ್ಸ್ ನಲ್ಲಿ ಅವನಿ ಲೇಖರಾ ತಮ್ಮ ಅದ್ಭುತವಾದ ಪ್ರದರ್ಶನದ ಮೂಲಕ 2ನೇ ಪದಕವನ್ನು ಜಯಿಸಿ ಐತಿಹಾಸಿಕ ಕ್ಷಣವನ್ನು ಸೃಷ್ಟಿಸಿದ್ದಾರೆ. ಅವರಿಗೆ ಅಭಿನಂದನೆ ಎಂದು ಟ್ವೀಟ್ ಮಾಡಿದ್ದಾರೆ.

ಪ್ಯಾರಾಲಿಂಪಿಯನ್, ದೀಪಾ ಮಲ್ಲಿಕ್ ಅವರು ಟ್ವೀಟ್ ಮಾಡಿ, ಪ್ಯಾರಾಲಿಂಪಿಕ್ಸ್ ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆಗೆ ಅವನಿ ಲೇಖರಾ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.

ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು, ಪ್ಯಾರಾಲಿಂಪಿಕ್ಸ್ ನಲ್ಲಿ ಎರಡನೇ ಪದಕ ಗೆದ್ದ ಅವನಿ ಲೇಖರಾ ಅವರ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 ವಿಭಾಗದಲ್ಲಿ ಚಿನ್ನ ಗೆದ್ದಿರುವ ಅವನಿ ಲೇಖರಾ, ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ ಎಸ್‌ಎಚ್1 ವಿಭಾಗದಲ್ಲೂ ಕಂಚಿನ ಪದಕ ಗೆದ್ದಿದ್ದಾರೆ. ಆ ಮೂಲಕ ಪ್ಯಾರಾಂಪಿಕ್ಸ್ ಇತಿಹಾಸದಲ್ಲೇ ಎರಡು ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: