ಮೈಸೂರು

ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ :ಹೇಮಂತ್ ಕುಮಾರ್ ಗೌಡ

ಮೈಸೂರು,ಸೆ.4:-   ವರದಿಗಾರ ಸುದ್ದಿಯನ್ನು ಬರೆಯಬಹುದು, ಪತ್ರಿಕಾಲಯದಲ್ಲಿ ಅದನ್ನು ಪ್ರಕಟಿಸಬಹುದು. ಆದರೆ ಅದನ್ನು ಜನರಿಗೆ ತಲುಪಿಸುವ ಕಾರ್ಯ ಪ್ರಮುಖವಾದದ್ದು, ಆ ಕೆಲಸ ಮಾಡುವವರು ಇಲ್ಲದಿದ್ದರೆ ಇಡೀ ದಿನ ಮಾಡಿದ ಕೆಲಸ ವ್ಯರ್ಥವಾಗುತ್ತದೆ ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ  ತಿಳಿಸಿದರು.

ಪಾತಿ ಫೌಂಡೇಷನ್ ವತಿಯಿಂದ ಅಗ್ರಹಾರ ವೃತ್ತದಲ್ಲಿ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ 35 ವರ್ಷಗಳಿಂದ ಮನೆ ಮನೆಗೆ ತೆರಳಿ ಪತ್ರಿಕಾ ವಿತರಣೆ ಮಾಡುತ್ತಿರುವ ಪತ್ರಿಕಾ ವಿತರಕ ಸೇನಾನಿಗಳಿಗೆ ಸನ್ಮಾನಿಸಿ 2000ರೂ ನಗದನ್ನು  ವಿತರಿಸಿ  ಅಭಿನಂದಿಸಲಾಯಿತು.

ಇಟ್ಟಿಗೆಗೂಡು ನಿವಾಸಿ ಮಂಜುನಾಥ್ ,ನಂಜುಮಳಿಗೆ ನಿವಾಸಿ ಶರತ್ ಕುಮಾರ್ ,ನೂರಡಿ ರಸ್ತೆಯ ಮಧು ,ಗುಂಡೂರಾವ್ ನಗರ ನಿವಾಸಿ ದತ್ತ , ತೊಣಚಿಕೊಪ್ಪಲಿನ ನಿವಾಸಿ   ಎಚ್ ಪ್ರಕಾಶ,ಜಯನಗರ ನಿವಾಸಿ ವಾದಿರಾಜ್ ,ಕನಕಗಿರಿಯ ಸುರೇಶ್ ಅವರನ್ನು  ಸನ್ಮಾನಿಸಿ ಅಭಿನಂದಿಸಲಾಯಿತು.

ಬಳಿಕ ಮಾತನಾಡಿದ    ಹೇಮಂತ್ ಕುಮಾರ್ ಗೌಡ ಅವರು ಜನಸಾಮಾನ್ಯರಿಗೆ ಬೆಳಗ್ಗೆ ಏಳುತ್ತಲೇ ಪತ್ರಿಕೆ ಓದುವ ಹವ್ಯಾಸ ಇರುವುದು ಸಹಜ. ಅದನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಬಹುಮುಖ್ಯವಾಗಿದೆ. ಬೇಸಿಗೆ, ಚಳಿ, ಮಳೆ ಎನ್ನದೆ ಪ್ರತಿನಿತ್ಯ ಬೆಳಗ್ಗೆ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ಮಾಡುತ್ತಾರೆ. ಜಗತ್ತು ಎಷ್ಟೇ ಆಧುನಿಕತೆಯಲ್ಲಿ ಬೆಳೆದರೂ ಪತ್ರಿಕೆಗಳನ್ನು ಓದುವುದನ್ನು ಮಾತ್ರ ಯಾರೂ ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಪತ್ರಿಕಾ ವಿತರಕರನ್ನು ಸಮಾಜದಲ್ಲಿ ಗೌರವದಿಂದ ಕಾಣಬೇಕು. ಸಾಮಾನ್ಯವಾಗಿ ಜನರು ಪತ್ರಿಕಾ ವಿತರಕರನ್ನು ಕೀಳು ಮಟ್ಟದಲ್ಲಿ ನೋಡುತ್ತಾರೆ. ಅದು ಬದಲಾವಣೆಯಾಗಬೇಕು. ಯಾವುದೇ ಕ್ಷೇತ್ರದಲ್ಲಾದರೂ ತಮ್ಮ ಕೆಲಸಕ್ಕೆ ತಕ್ಕಂತೆ ಗೌರವ ಇರುತ್ತದೆ. ಅದೇ ರೀತಿ ಪತ್ರಿಕಾ ವಿತರಕರನ್ನೂ ಕೂಡ ಗೌರವಿಸುವಂತಾಗಬೇಕು ಎಂದು ತಿಳಿಸಿದರು.

ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಮಾತನಾಡಿ ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಮ್ ಅವರು ಸಹ ಪತ್ರಿಕಾ ವಿತರಕರಾಗಿಯೇ ಮೇಲ್ಮಟ್ಟಕ್ಕೆ ಬಂದವರು. ಪತ್ರಿಕಾ ವಿತರಕರನ್ನು ಕೀಳಾಗಿ ಕಾಣಬಾರದು, ಮಳೆಗಾಲದಲ್ಲಿ  ವಿತರಕರು  ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ವಾಹನಗಳಿಂದ ಪತ್ರಿಕೆಗಳ ಬಂಡಲ್ ಗಳನ್ನು ಇಳಿಸಿಕೊಳ್ಳಲು, ವಿತರಕರಿಗೆ ಹಾಗೂ ಪತ್ರಿಕೆ ಹಾಕುವ ಹುಡುಗರಿಗೆ ಹಂಚಲು ಕಷ್ಟವಾಗುತ್ತದೆ. ಸ್ವಲ್ಪ ಮಳೆ ಹನಿಗಳು ಬಿದ್ದರೂ ಪತ್ರಿಕೆ ಹಾಳಾಗುತ್ತದೆ. ಆದ್ದರಿಂದ ಪತ್ರಿಕೆಗಳ ಹಂಚಿಕೆಗೆ ಮೈಸೂರು ನಗರ ಹಾಗೂ ತಾಲೂಕು ಕೇಂದ್ರಗಳಲ್ಲಿ   ಶಾಶ್ವತವಾಗಿ ಜಾಗ ಕಲ್ಪಿಸಿ ಕೊಡಬೇಕು ಎಂದರು. ಸರ್ಕಾರ ಪತ್ರಿಕಾ ವಿತರಕರನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿ ನೀಡುವ ಮೂಲಕ ಅವರನ್ನು ಗೌರವಿಸಬೇಕು ಎಂದು ಹೇಳಿದರು

ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಮಾತನಾಡಿ  ಸರ್ಕಾರ ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಸಿಗುವ ಸೌಲಭ್ಯಗಳನ್ನು ಕೊಡಿಸುವ ಮೂಲಕ ರಕ್ಷಣೆಗೆ ಧಾವಿಸಬೇಕು’ಎಂದು ಒತ್ತಾಯಿಸಿದರು

ಕೊರೊನಾ ವಾರಿಯರ್ಸ್‌ ರೀತಿ ಕೆಲಸ ಮಾಡಿದರೂ ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಯಾವುದೇ ಕನಿಷ್ಠ ಸೌಲಭ್ಯಗಳೂ ಸಿಗುತ್ತಿಲ್ಲ. ವರ್ಷಪೂರ್ತಿ ಕೆಲಸ ಮಾಡುವ ಅವರಿಗೆ  ವಿಶೇಷ ‌ಭತ್ಯೆ, ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು. ಆಗ ಮಾತ್ರ ಅವರು ಮಾಡುತ್ತಿರುವ  ಕೆಲಸದಲ್ಲಿ  ಸಾರ್ಥಕತೆ ಸಿಗುತ್ತದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಿಕಾ ವಿತರಕ ಇಟ್ಟಿಗೆ ಗೂಡಿನ ನಿವಾಸಿ ಮಂಜುನಾಥ್  ಕೋವಿಡ್‌ ಸಂದರ್ಭದಲ್ಲಿ ಕೆಲವರು ಭಯದಿಂದ ಪತ್ರಿಕೆ ಹಾಕಿಸಿಕೊಳ್ಳುವುದನ್ನೇ ನಿಲ್ಲಿಸಿದರು. ತಿಂಗಳು ಪೂರ್ತಿ ಪತ್ರಿಕೆ ಹಾಕಿದರೂ ಕೆಲವರು ಸಮಯಕ್ಕೆ ಸರಿಯಾಗಿ ಬಿಲ್‌ ಪಾವತಿ ಮಾಡುವುದಿಲ್ಲ. ಅಲೆಯವುದು ತಪ್ಪಿಲ್ಲ. ಬಲವಂತ ಮಾಡಿ ಕೇಳಿದರೆ ಪತ್ರಿಕೆ ಹಾಕುವುದನ್ನೇ ನಿಲ್ಲಿಸಿ ಎಂದೂ ಹೇಳುವವರಿದ್ದಾರೆ. ಎರಡು ದಶಕದಿಂದ ಪತ್ರಿಕೆ ವಿತರಿಸುತ್ತಿದ್ದೇನೆ ಎಂದು ತಮ್ಮ ಅಳಲು ತೋಡಿಕೊಂಡರು.

ಈ ಸಂದರ್ಭ ಬನ್ನೂರು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಮಹೇಂದ್ರಸಿಂಗ್ ಕಾಳಪ್ಪ ,ಜೀವಧಾರ ಗಿರೀಶ್ ,ಕೇಬಲ್ ಮಹೇಶ್ ,ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಚರಣ್ ರಾಜ್ ,ವಿಕ್ರಂ ಅಯ್ಯಂಗಾರ್,ನವೀನ್ ಕೆಂಪಿ , ಮಹೇಂದ್ರ ಎಂ ಶೈವ ,ಹರೀಶ್ ನಾಯ್ಡು ,ರಾಜೇಶ್   ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: