
ಕರ್ನಾಟಕಪ್ರಮುಖ ಸುದ್ದಿ
ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಸೂಚನೆ
ರಾಜ್ಯ( ಹಾಸನ) ಸೆ.4 :- ಹೋಂ ಐಸೋಲೇಷನ್ನಲ್ಲಿರುವ ಕೋವಿಡ್ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಎಲ್ಲಾ ತಾಲ್ಲೂಕು ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ಮೂಲಕ ಸಭೆ ನಡೆಸಿ ಮಾತನಾಡಿದ ಅವರು ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕು ಹೆಚ್ಚಾಗಿ ಕಂಡುಬರುತ್ತಿದ್ದು, ಇದರ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಲಸಿಕೆಯನ್ನು ಆದಷ್ಟು ಶೀಘ್ರವಾಗಿ ಶೇ.100 ರಷ್ಟು ಸಂಪೂರ್ಣಗೊಳಿಸುವಂತೆ ಸೂಚಿಸಿದರಲ್ಲದೆ, ಮೊದಲ ಡೋಸ್ ಲಸಿಕೆ ಪಡೆದಿರುವವರ ಖಚಿತ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರ ಮೂಲಕ ಪಡೆಯುವಂತೆ ತಿಳಿಸಿದರು.
ಸೋಂಕಿತರ ಮನೆಗೆ ಕೆಂಪು ಪಟ್ಟಿ ಅಂಟಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ರವಾನಿಸಲು ಪೊಲೀಸರ ಸಹಾಯ ಪಡೆದುಕೊಳ್ಳುವಂತೆ ತಿಳಿಸಿದರು.
ಬಿ. ಎಲ್. ಓ.ಗಳು ಮನೆ ಮನೆ ಭೇಟಿಯ ಸಂದರ್ಭದಲ್ಲಿ ಸೋಂಕಿತರ ಪತ್ತೆಯ ಜೊತೆಗೆ ಲಸಿಕೆ ಪಡೆದಿರುವವರ ಮಾಹಿತಿ ಪಡೆಯುವಂತೆ ಹೇಳಿದರು.
ದಿನಕ್ಕೆ 20ಸಾವಿರ ಲಸಿಕೆ ನೀಡಲಾಗುತ್ತಿದ್ದು, ಲಸಿಕಾ ಪ್ರಮಾಣವನ್ನು ಹೆಚ್ಚಿಸಿ ಆಂದೋಲನ ರೀತಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಸಾಕಷ್ಟು ಲಭ್ಯವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಲಸಿಕೆ ಪಡೆದುಕೊಳ್ಳಲು ಮನವೊಲಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ ಉಪವಿಭಾಗಾಧಿಕಾರಿ ಬಿ. ಎ. ಜಗದೀಶ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಸತೀಶ್, ಆರ್. ಸಿ. ಹೆಚ್. ಅಧಿಕಾರಿ ಡಾ.ಕಾಂತ್ರಾಜ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು. (ಜಿ.ಕೆ,ಎಸ್.ಎಚ್)