ಮೈಸೂರು

ಮಾವಿನ ಹಣ್ಣಿನ ಖರೀದಿಗೂ ಮುನ್ನ ಹುಷಾರ್!

ಮಾರುಕಟ್ಟೆಗೆ ಹಣ್ಣುಗಳ ರಾಜ ಮಾವು ಲಗ್ಗೆ ಇಟ್ಟಿದೆ. ಮಾರುಕಟ್ಟೆಯಲ್ಲಿರುವ ತರಹೇವಾರಿ ಹಣ್ಣುಗಳನ್ನು ನೋಡಿದರೆ ಬಾಯಲ್ಲಿ ನೀರೂರುತ್ತದೆ. ಮಾವಿನ ಹಣ್ಣಿನ ಮೇಲೆ ಎಲ್ಲರಿಗೂ ಮೋಹ ಜಾಸ್ತಿ. ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನ್ನುವಷ್ಟು ಆಸೆಯನ್ನು ಮೂಡಿಸುತ್ತದೆ. ಅದರ ಸುವಾಸನೆಗೆ, ಬಣ್ಣಕ್ಕೆ ಮಾರುಹೋಗದವರೇ ಇಲ್ಲ. ಆದರೆ ಬಣ್ಣಕ್ಕೆ ಮರುಳಾಗದಿರಿ. ಸವಿಯುವ ಮುನ್ನ ಹುಷಾರ್!

ಮೈಸೂರಿನ ಪ್ರಮುಖ ಬೀದಿಗಳಲ್ಲಿ ಎತ್ತ ನೋಡಿದರೂ ಮಾವಿನ ಹಣ್ಣಿನ ರಾಶಿಗಳೇ ಕಾಣ ಸಿಗುತ್ತವೆ. ಕೆಲವರು ಮನೆಬಾಗಿಲಿಗೂ ಹೊತ್ತು ತರುತ್ತಾರೆ. ಅಷ್ಟೇ ಅಲ್ಲ ರಿಕ್ಷಾಗಳಲ್ಲಿ ಪೇರಿಸಿ, ಕೂಗಿಕೊಂಡು ಬರುತ್ತಾರೆ. ಅಷ್ಟೇ ಯಾಕೆ ಸೂಪರ್ ಮಾರ್ಕೆಟ್ ಗಳಲ್ಲಿ ನಾಲ್ಕು ದಿನಗಳ ಕಾಲ ಕಡಿಮೆ ದರದ ಮಾರಾಟದ ಆಫರ್ ಕೂಡಾ ಇರಲಿದೆ.

ಮಲ್ಗೋವಾ ಕೆ.ಜಿ.ಗೆ 90 ರಿಂದ 120 ರೂ.ಗಳಿದ್ದರೆ, ರಸಪುರಿ ಮತ್ತು ಬಾದಾಮಿ 80-90 ರೂಗಳಿವೆ. ಇನ್ನುಳಿದಂತೆ ಮಲ್ಲಿಕ, ತೋತಾಪುರಿ, ಸೇಂಧೂರ, ವಾಲಜಾ, ಬೈಗನಪಲ್ಲಿ, ಕೇಸರ್, ರತ್ನಗಿರಿ ಹಣ್ಣುಗಳ ಮಾರಾಟ ಜೋರಾಗಿಯೇ ನಡೆದಿದೆ. ಆದರೆ ಹಣ್ಣು ಖರೀದಿಗೆ ಮುನ್ನ ಎಚ್ಚರ ವಹಿಸಿದರೆ ಮಾತ್ರ ನಮ್ಮ ಆರೋಗ್ಯ ಸುರಕ್ಷಿತ. ಹಣ್ಣುಗಳ ಮೇಲೆ ಚಿಕ್ಕೆಗಳಿದ್ದರೆ, ಅಲ್ಲಲ್ಲಿ ಒಣಗಿದ ರೀತಿಯಲ್ಲಿ ಕಾಣಿಸಿದರೆ, ರುಚಿ ಇಲ್ಲದೇ ಇದ್ದರೆ, ಇವು ರಾಸಾಯನಿಕ ವಸ್ತುವಿನಿಂದ ಮಾಗಿಸಿದ ಹಣ್ಣು ಎಂಬುವುದನ್ನು ತಿಳಿದುಕೊಂಡರೆ ಒಳ್ಳೆಯದು. ಕೆಲವು ವ್ಯಾಪಾರಿಗಳು ಮರದಲ್ಲಿರುವ ಕಾಯಿಗಳನ್ನೇ ಕಿತ್ತು ಹಣ್ಣು ಮಾಡಿ ಮಾರಾಟಕ್ಕೆ  ಮುಂದಾಗಿರುವುದರಿಂದ ಹಣ್ಣು ಮಾಡಲು ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕ ವಸ್ತುವನ್ನು ಮಾವಿನ ಕಾಯಿಯನ್ನು ಹಣ್ಣಾಗಿ ಪರಿವರ್ತಿಸಲು ಬಳಕೆ ಮಾಡುತ್ತಿದ್ದು, ಇದರಿಂದ ಅನಾರೋಗ್ಯದ ಮೇಲೆ ನಿಧಾನವಾಗಿ ಪರಿಣಾಮ ಬೀರಲಿದೆ. ಇದರಿಂದ ಹಣ್ಣುಗಳನ್ನು ಖರೀದಿಸುವ ಭರದಲ್ಲಿ ಆರೋಗ್ಯ ಮರೆಯದಿರಿ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: