ಮೈಸೂರು

ಸೆ.7: ಮೈಸೂರು ವಿವಿ 101ನೇ ಘಟಿಕೋತ್ಸವ ; ಸಾಧಕರಿಬ್ಬರಿಗೆ ಗೌ.ಡಾ.ಪ್ರದಾನ

ಮೈಸೂರು,ಸೆ.5: – ಮೈಸೂರು ವಿಶ್ವ ವಿದ್ಯಾಲಯದ 101 ನೇ ಘಟಿಕೋತ್ಸವವು ಸೆಪ್ಟೆಂಬರ್ 7 ರಂದು ನಡೆಯಲಿದೆ. ಘಟಿಕೋತ್ಸವದಲ್ಲಿ ಸಾಧಕರಿಬ್ಬರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಪ್ರಾಧ್ಯಾಪಕ ಪದ್ಮಭೂಷಣ ಡಾ. ಗೋವಿಂದರಾಜನ್ ಪದ್ಮನಾಭನ್ ಹಾಗೂ ಪ್ರಶಾಂತ್ ಪ್ರಕಾಶ್‌ಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತೇವೆ ಎಂದು ಮೈಸೂರು ವಿವಿ ಕುಲಪತಿಗಳಾದ ಪ್ರೊ.ಜಿ. ಹೇಮಂತ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೀವ ರಸಾಯನಶಾಸ್ತ್ರ ವಿಭಾಗದ ಗೌರವ ಪ್ರಾಧ್ಯಾಪಕ ಪದ್ಮಭೂಷಣ ಡಾ. ಗೋವಿಂದರಾಜನ್ ಪದ್ಮನಾಭನ್, ರಾಜ್ಯ ಸರ್ಕಾರದ ವಿಷನ್ ಗ್ರೂಪ್ ಫಾರ್ ಸ್ಟಾರ್ಟ್ಅಪ್ಸ್ ನ ಅಧ್ಯಕ್ಷ ಹಾಗೂ ಆಕ್ಸೆಲ್ ಇಂಡಿಯಾ ಸಂಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್ ಇಬ್ಬರಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಲಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ನವದೆಹಲಿಯ ಸಿಎಸ್ಐಆರ್​ನ ಮಹಾನಿರ್ದೇಶಕ ಹಾಗೂ ಡಿಎಸ್ಐಆರ್​ನ ಕಾರ್ಯದರ್ಶಿ ಡಾ. ಶೇಖರ್ ಸಿ ಮಂಡೆ ಘಟಿಕೋತ್ಸವದಲ್ಲಿ ಭಾಗಿ ಆಗಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್. ಅಶ್ವತ್ಥ್ ನಾರಾಯಣ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಘಟಿಕೋತ್ಸವದಲ್ಲಿ 29,852 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದೆ.

ಘಟಿಕೋತ್ಸವದಲ್ಲಿ 29,852 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ನಡೆಯಲಿದೆ. 20,118 ವಿದ್ಯಾರ್ಥಿನಿಯರು ಹಾಗೂ 9,734 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ವಿವಿಧ ಪದವಿಗಳನ್ನು ಶೇಕಡಾ 67.39 ವಿದ್ಯಾರ್ಥಿನಿಯರು ಮತ್ತು ಶೇಕಡಾ 32.60 ವಿದ್ಯಾರ್ಥಿಗಳು ಪಡೆಯಲಿದ್ದಾರೆ. 244 ಅಭ್ಯರ್ಥಿಗಳಿಗೆ ಪಿಹೆಚ್‌ಡಿ ಪದವಿಯನ್ನು ಪ್ರದಾನ ಮಾಡಲಿದ್ದಾರೆ. 98 ವಿದ್ಯಾರ್ಥಿನಿಯರು, 146 ವಿದ್ಯಾರ್ಥಿಗಳು, 387 ಪದಕಗಳು ಮತ್ತು 178 ಬಹುಮಾನ ವಿತರಣೆ ನಡೆಯಲಿದೆ. 7,143 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಲಭಿಸಲಿದೆ. ಅದರಲ್ಲಿ, 4,876 ವಿದ್ಯಾರ್ಥಿನಿಯರು, 2,267 ವಿದ್ಯಾರ್ಥಿಗಳು ಇರಲಿದ್ದಾರೆ. 22,465 ಅಭ್ಯರ್ಥಿಗಳಿಗೆ ಸ್ನಾತಕ ಪದವಿ ಪ್ರದಾನ ನಡೆಯಲಿದೆ. ಅದರಲ್ಲಿ, 15,144 ವಿದ್ಯಾರ್ಥಿನಿಯರು ಮತ್ತು 7,321 ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಆಫ್ಘಾನಿಸ್ತಾನದ ವಿದ್ಯಾರ್ಥಿಗಳ ವೀಸಾ ಅವಧಿ ವಿಸ್ತರಣೆ ವಿಚಾರವಾಗಿ  ಮಾತನಾಡಿದ ಅವರು ಈ‌ ವಿಚಾರವನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ಇದೀಗ ಪರೀಕ್ಷೆಗಳು ನಡೆಯುತ್ತಿವೆ. ಪರೀಕ್ಷೆಗಳು ನಡೆಯುತ್ತಿರುವುದರಿಂದ ಆಫ್ಘಾನಿಸ್ತಾನದ ವಿದ್ಯಾರ್ಥಿಗಳು ಯಾವುದೇ ಮನವಿ ಮಾಡಿಲ್ಲ. ಎಲ್ಲಾ ವಿದ್ಯಾರ್ಥಿಗಳಿಗೂ ಅಗತ್ಯ ಸೌಲಭ್ಯ ನೀಡಲಾಗಿದೆ. ಆಫ್ಘಾನಿಸ್ತಾನದ ವಿದ್ಯಾರ್ಥಿಗಳ ಮನವಿಗೆ ವಿವಿ ಸ್ಪಂದಿಸಲಿದೆ ಎಂದು ತಿಳಿಸಿದ್ದಾರೆ.

Leave a Reply

comments

Related Articles

error: