ಕರ್ನಾಟಕಪ್ರಮುಖ ಸುದ್ದಿಮೈಸೂರು

ಸರ್ವೇ ಮಾಡಲು ಅಧಿಕಾರಿಗಳು ಬೇಡ, ಖುದ್ದು ಮನೀಷ್ ಮುದ್ಗಲ್ ಅವರೇ ಬಂದು ಸರ್ವೇ ಮಾಡಲಿ ಶಾಸಕ ಸಾ.ರಾ.ಮಹೇಶ್ ಒತ್ತಾಯ

ಮೈಸೂರು,ಸೆ.6:-  ಸರ್ವೇ ಮಾಡಲು ಅಧಿಕಾರಿಗಳು ಬೇಡ. ಖುದ್ದು ಮನೀಷ್ ಮುದ್ಗಲ್ ಅವರೇ ಬಂದು ಸರ್ವೇ ಮಾಡಲಿ   ಎಂದು ಶಾಸಕ ಸಾ.ರಾ.ಮಹೇಶ್ ಒತ್ತಾಯಿಸಿದರು.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಗೊಮ್ಮಟೇಶ್ವರನ ಭಕ್ತ, ಆಂಜನೇಯನ ಭಕ್ತ. ಆದ್ದರಿಂದ ಸರ್ವೇ ಕಮಿಷನರ್ ಆದೇಶವನ್ನು ಸ್ವಾಗತಿಸುತ್ತೇನೆ.  ರೋಹಿಣಿ ಸಿಂಧೂರಿ ಅವರು ಸಾ.ರಾ.ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ, ಅದು ಗೋಮಾಳ ಅಂತ ಹೇಳಿದ್ದರು‌. ನಾನೇ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಧರಣಿ ಮಾಡಿ ತನಿಖೆಗೆ ಆಗ್ರಹಿಸಿದ್ದೆ.  ನನ್ನ ಒತ್ತಡ, ಹೋರಾಟದ ಮೇಲೆ ಸರ್ವೇ ಕಾರ್ಯ ನಡೆದಿತ್ತು.  ಈಗ ಸರ್ವೇ ಆಯುಕ್ತರು ಒಂದು ಪತ್ರ ಬರೆದಿದ್ದಾರೆ.  ಜೆಡಿಎಲ್‌ಆರ್ 3-4 ಜಿಲ್ಲೆಗಳ ಹೆಡ್ ಆಗಿರುತ್ತಾರೆ.  ಪ್ರಾದೇಶಿಕ ಆಯುಕ್ತರಿಗೆ ಜ್ಯುಡಿಷಿಯಲ್ ಪವರ್ ಇರುತ್ತೆ.  ಆರ್‌ಟಿಸಿ ಎಲ್ಲಿ ತೆಗೆದರೂ ದಾಖಲೆಗಳು ಸಿಗುತ್ತವೆ.  ಚೌಲ್ಟ್ರಿ ಜಾಗದಲ್ಲಿ ಒಂದು ಗುಂಟೆ ಒತ್ತುವರಿ ಆಗಿದ್ದರೂ ಅದನ್ನು ರಾಜ್ಯಪಾಲರಿಗೆ ಬರೆದುಕೊಡುತ್ತೇನೆ. ಸಾರ್ವಜನಿಕ ಬದುಕು, ರಾಜಕೀಯ ಬದುಕಿನಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಒತ್ತುವರಿ, ಗೋಮಾಳ ಅಥವಾ ಒಂದೇ ಒಂದು ಗುಂಟೆ ಖರಾಬು  ಜಾಗದಲ್ಲಿದ್ದರೆ ತೋರಿಸಿ.  ಆರು ಬಾರಿ 8 ವರ್ಷದಿಂದ ಅಲ್ಲೇ ಇದ್ದೀರಲ್ಲ, ಎಷ್ಟು ಸಾಗುವಳಿ ದಾಖಲೆ ಕೊಟ್ಟಿದ್ದೀರಿ ಮನೀಶ್ ಮೌದ್ಗಿಲ್ ಅವರೇ ಎಂದು ಪ್ರಶ್ನಿಸಿದ ಶಾಸಕ ಸಾ.ರಾ.ಮಹೇಶ್ ಭೂಮಾಪನ ಇಲಾಖೆ ಆಯುಕ್ತ ಮನೀಶ್ ಮೌದ್ಗಿಲ್‌ ವಿರುದ್ಧ ಕಿಡಿಕಾರಿದರು.

ಸಾ ರಾ ಕಲ್ಯಾಣ ಮಂಟಪದ ಸುತ್ತ ಸರ್ವೇ ವಿಚಾರಕ್ಕೆ ಪ್ರತಿಕ್ರಿಯಿಸಿ ಸರ್ವೇ ಮಾಡಲು ಅಧಿಕಾರಿಗಳು ಬೇಡ. ಖುದ್ದು ಮನೀಷ್ ಮುದ್ಗಲ್ ಅವರೇ ಬಂದು ಸರ್ವೇ ಮಾಡಲಿ ಎಂದು ಒತ್ತಾಯಿಸಿದರು. ಕಾನೂನು ಪ್ರಕಾರವೇ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ. ಒತ್ತುವರಿಯಾಗಿದ್ದರೆ ಬಂದು ಪರಿಶೀಲನೆ ಮಾಡಿ. ಗೋಮಾಳ ಆಗಿದ್ದರೆ ನಿಮ್ಮ ಬಳಿಯೇ ದಾಖಲೆ ಇದೆ.ನೀವೊಬ್ಬ ಪ್ರಾಮಾಣಿಕ ಅಧಿಕಾರಿ. ಅದಕ್ಕೆ ಕುಮಾರಸ್ವಾಮಿ ರೈತ ಸಾಲ ಮನ್ನಾಗೆ ನಿಮ್ಮನ್ನು ನೇಮಕ ಮಾಡಿದರು. 54 ಸಾವಿರ ರೈತರ ಅರ್ಜಿ ನಿಮ್ಮ ಬಳಿ ಇದೆ.   ಈ ರಾಜ್ಯದಲ್ಲಿ ಭೂದಾಖಲೆ ಸರ್ವೇಗೆ ರೈತರು ಅರ್ಜಿ ಕೊಟ್ಟಿದ್ದಾರೆ. ಖಾಸಗಿಯವರದ್ದು 2.5 ಲಕ್ಷ ,ಸರ್ಕಾರದ್ದು 2.5 ಲಕ್ಷ ಅರ್ಜಿ ಬಾಕಿ ಇದೆ. ಅದಕ್ಕೆ ಯಾವುದೇ ಸಮಿತಿ ಏಕೆ ಮಾಡಿಲ್ಲ.ನೀವೇ ಬಂದು ಸರ್ವೇ ಮಾಡಿ ನಾನು ಬೊಕ್ಕೆ ಹಿಡಿದು ಸ್ವಾಗತಿಸುತ್ತೇನೆ. ರಾಜ ಕಾಲುವೆ ಒತ್ತುವರಿ ಮಾಡಿಲ್ಲ ಇದು ಗೋಮಾಳ ಅಲ್ಲ ನ್ನ ಹೇಳಿಕೆಗೆ ನಾನು ಈಗಲೂ ಬದ್ದ ಎಂದರು.

‌ನಾನು ನನ್ನ ಹೆಂಡತಿ ಇಬ್ಬರು ಮಕ್ಕಳು ನನ್ನ ಆಸ್ತಿ ಘೋಷಣೆ ಮಾಡಿದ್ದೇನೆ. ನಿಮ್ಮ ಶಿಷ್ಯೆಯೋ ನಿಮ್ಮ ಜ್ಯೂನಿಯರೋ ಇದ್ದಾರಲ್ಲ, ಕೆಲಸಕ್ಕೆ ಸೇರಿ 12 ವರ್ಷ ಆಯ್ತು. ರೋಹಿಣಿ ಸಿಂಧೂರಿ ತಂದೆ, ತಾಯಿ, ಪತಿ ಹೆಸರಲ್ಲಿ ಆಸ್ತಿ ಎಷ್ಟು ಇತ್ತು ,ಈಗ ಎಷ್ಟು ಇದೆ ಘೋಷಣೆ ಮಾಡಿದ್ದಾರಾ ?. ಕುಟುಂಬ ಅಂದರೆ ಏನು ?  ಶಾಸಕರು, ಸಚಿವರು ಭ್ರಷ್ಟಾಚಾರದ ಆರೋಪ ಸಿಎಂಗಳ ಮೇಲೆ ಮಾಡಿದ್ದಾರೆ. ಇದಕ್ಕೆ ಆದೇಶ ಮಾಡಲು ಅಮೆರಿಕಾದಿಂದ ಬರುತ್ತಾರಾ ? ಅವರ ಯಾರ ಮೇಲೆ ಕ್ರಮ ಕೈಗೊಂಡಿದ್ದೀರಾ ಎಂದು ವಾಗ್ದಾಳಿ ನಡೆಸಿದರು.

ರೋಹಿಣಿ ಸಿಂಧೂರಿಯಾಗಲಿ, ಮನೀಶ್ ಮುದ್ಗಿಲ್ ಆಗಲಿ ನನ್ನನ್ನು ಬ್ಲಾಕ್ ಮೇಲ್ ಮಾಡಿ ಹೆದರಿಸಲು ಸಾಧ್ಯವಿಲ್ಲ. ನಾನು ಯಾವುದೇ ಬ್ಲಾಕ್ ಮೇಲ್ ಗೂ ಹೆದರುವುದಿಲ್ಲ. ಇದು ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರದ ನಡುವೆ ನಡೆಯುತ್ತಿರುವ ಹೋರಾಟ. ಇದನ್ನು ನಾನು ಇಲ್ಲಿಗೆ ನಿಲ್ಲಿಸುವುದಿಲ್ಲ. ನನ್ನ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ.

ನನ್ನ ಇದುವರೆಗಿನ ಸಾರ್ವಜನಿಕ ಬದುಕಿನಲ್ಲಿ ಎಂದೂ ಕೂಡ‌‌ ಕಿಕ್ ಬ್ಯಾಕ್ ಪಡೆದಿಲ್ಲ. ನನ್ನ ವಿರುದ್ಧ ಮಾಡಿರುವ ಆರೋಪಗಳಲ್ಲಿ ಒಂದನ್ನು ಸಾಬೀತು ಮಾಡಿದರೂ ಕೂಡ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಸಾರ್ವಜನಿಕ ಬದುಕಿನಿಂದ ದೂರವಾಗುತ್ತೇನೆ. ಬೇರೆಯವರನ್ನು ಬ್ಲಾಕ್ ಮೇಲ್ ಮಾಡಬಹುದು, ಆದರೆ ನನ್ನನ್ನು ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲ ಎಂದರು.

ಯಾವುದೇ ರೀತಿಯ ತನಿಖೆ ನಡೆಸಿದರೂ ನಾನು ಹೆದರುವುದಿಲ್ಲ. ಎಂ ಎಲ್ ಸಿ, ಎಚ್ ವಿಶ್ವನಾಥ್ ಅವರು ಒಂದುಕಡೆ ಚೈನ್ ಹಿಡಿಯಲಿ. ಮನೀಶ್ ಮುದ್ಗಿಲ್ ಮತ್ತೊಂದು ಕಡೆ ಚೈನ್ ಹಿಡಿಯಲಿ. ಅದೇನಾದರೂ ಜೋತು ಬಿದ್ದರೆ ರೋಹಿಣಿ ಸಿಂಧೂರಿ ಎತ್ತಿ ಹಿಡಿದುಕೊಳ್ಳಲಿ. ಅವರೇ ನಿಂತು ಸರ್ವೆ ಮಾಡಿಸಲಿ ನನ್ನದು ಅಭ್ಯಂತರ ಇಲ್ಲ. ಸಚಿವ ಎಸ್ ಟಿ ಸೋಮಶೇಖರ್ ಕೂಡ ಕಾನೂನಿನ ಪ್ರಕಾರ ಎಲ್ಲವೂ ನಡೆಯಲಿ ಎಂದಿದ್ದಾರೆ. ಅವರೇನು ನನ್ನ ಪರವಾಗಿ ಮಾತನಾಡಿಲ್ಲ ಎಂದು ಎಂಎಲ್ ಸಿ ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: