ಮೈಸೂರು

ಕಬ್ಬಿನ ಎಫ್ ಆರ್ ಪಿ ದರ ಪರಿಶೀಲಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಸೆ.6:- ಕೇಂದ್ರ ಸರ್ಕಾರ ನಿಗದಿಮಾಡಿರುವ ಕಬ್ಬಿನ ಎಫ್ ಆರ್ ಪಿ ದರ ಏರಿಕೆ ಕೇವಲ ಐವತ್ತು ರೂಪಾಯಿ ಇದನ್ನು ಕೂಡಲೇ ಪರಿಶೀಲಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ   ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಎಫ್ ಆರ್ ಪಿ ದರವನ್ನು ಕೇಂದ್ರ ಸರ್ಕಾರ ಕೇವಲ 50 ರೂ. ಏರಿಕೆ ಮಾಡಿ ಟನ್ 2900 ರೂ ನಿಗದಿ ಮಾಡಿರುವುದು ರೈತ ದ್ರೋಹಿ ಕಾರ್ಯವಾಗಿದೆ, ಕಬ್ಬು ಉತ್ಪಾದನೆಗೆ ಬಳಸುವ ರಸಗೊಬ್ಬರ, ಡೀಸಲ್‌, ಬೀಜ ಕಟಾವ್ ಕೂಲಿ ಸಾಗಾಣಿಕೆ ವೆಚ್ಚ ಏರಿಕೆಯಾಗಿದೆ. ಇದನ್ನು ಪರಿಗಣಿಸದೆ ನಾಮಕಾವಸ್ತೆಗೆ ಏರಿಕೆ ಮಾಡಿರುವುದು ಸರಿಯಲ್ಲ. ಕೃಷಿ ಇಲಾಖೆಯವರು ಹಾಗೂ ಕೃಷಿ ವಿಶ್ವವಿದ್ಯಾನಿಲಯ ನೀಡುವ ಕಬ್ಬು ಉತ್ಪಾದನೆ ವೆಚ್ಚ  ಈಗಿನ ಎಫ್ ಆರ್ ಪಿ ಬೆಲೆಗಿಂತ ಹೆಚ್ಚು ಇದೆ.   ರೈತರು, ಸಾಲಸೋಲ ಮಾಡಿ, ಕಬ್ಬು ಬೆಳೆದು ನ್ಯಾಯಯುತ ಬೆಲೆ ಇಲ್ಲದ ಮತ್ತಷ್ಟು ಸಾಲಗಾರರಾಗುತ್ತಿದ್ದಾರೆ, ವರ್ಷದಲ್ಲಿ ಗ್ಯಾಸ್ ಬೆಲೆ, ಡೀಸೆಲ್ ಬೆಲೆ, ರಸಗೊಬ್ಬರ ಬೆಲೆಗಳನ್ನು ನಾಲ್ಕೈದು ಬಾರಿ ಏರಿಸಲಾಗುತ್ತದೆ, ಆದರೆ ರೈತರ ಕಬ್ಬಿನ ಬೆಲೆಯನ್ನು ಎರಡು ಮೂರು ವರ್ಷಗಳಿಗೆ ಒಮ್ಮೆ ಯಾವುದೇ ಮಾನದಂಡವಿಲ್ಲದ ಏರಿಸಲಾಗುತ್ತಿದೆ. ಇದು ರೈತ ವಿರೋಧಿ ನೀತಿಯಾಗಿದೆ ಕೂಡಲೇ ಪುನರ್‌ ಪರಿಶೀಲನೆ ನಡೆಸಿ ಟನ್ ಕಬ್ಬಿಗೆ ಕನಿಷ್ಠ 3200 ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಬಣ್ಣಾರಿ ಸಕ್ಕರೆ ಕಾರ್ಖಾನೆ ಸಕ್ಕರೆ ನಿಯಂತ್ರಣ ಕಾಯ್ದೆ ನಿಯಮಗಳನ್ನು ಉಲ್ಲಂಘನೆ ಮಾಡಿ ರೈತರಿಗೆ ಸಕಾಲಕ್ಕೆ ಕಬ್ಬು ಕಟಾವು ಮಾಡದೆ ಸರಬರಾಜು ಹಣ ನೀಡದೆ ವಿಳಂಬ ಮಾಡುತ್ತಿರುವುದರಿಂದ ಮತ್ತಷ್ಟು ನೋವು ಅನುಭವಿಸುವಂತಾಗಿದೆ, ಕಬ್ಬಿನಿಂದ ಬರುವ ಉಪಉತ್ಪನ್ನಗಳ ಲಾಭವನ್ನು ಸಹ ರೈತರಿಗೆ ಹಂಚಿಕೆ ಮಾಡುತ್ತಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಸಕ್ಕರೆ ಇಳುವರಿ ಪ್ರಮಾಣವನ್ನು ಕಡಿಮೆ ತೋರಿಸುತ್ತಿದ್ದಾರೆ. ಇದರಿಂದಲೂ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ದೂರಿದರು.

ಕೇಂದ್ರ ಸರ್ಕಾರ 2019-20 ರಲ್ಲಿ ಶೇಕಡ ಹತ್ತು ಇಳುವರಿಗೆ 2850 ರೂ ನಿಗದಿ ಪಡಿಸಿತ್ತು. ಈಗ 2900 ನಿಗದಿ ಮಾಡಿದೆ, ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎನ್ನುವ ಕೇಂದ್ರ ಸರ್ಕಾರ ಉತ್ಪಾದನಾ ವೆಚ್ಚವನ್ನು ಸಹ ರೈತರಿಗೆ ನಿಗದಿ ಮಾಡದೆ ಇರುವುದು ನ್ಯಾಯಸಮ್ಮತವಲ್ಲ, ಆದ್ದರಿಂದ ತಕ್ಷಣವೇ ಕಬ್ಬು ಬೆಳೆಗಾರ ರೈತರ ಉತ್ಪಾದನೆಯ ಸಂಕಷ್ಟ ಅರಿತುಕೊಳ್ಳಲು ಯಾವುದಾದರೂ ರೈತರ ಹೊಲದಲ್ಲಿ ಕಬ್ಬು ಬೆಳೆಗಾರರ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಿ, ಚರ್ಚಿಸಿ ಉತ್ಪಾದನಾ ವೆಚ್ಚ ಮತ್ತಿತರ ಸಮಸ್ಯೆಗಳನ್ನು ಅರಿತುಕೊಂಡು ಕಬ್ಬು ಅಭಿವೃದ್ಧಿ ನಿಯಂತ್ರಣ ಮಂಡಳಿ ಸಭೆ ಕರೆದು ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ರಾಜ್ಯ ಸರ್ಕಾರ ತಕ್ಷಣವೇ ಕಬ್ಬು ಖರೀದಿ ಮಂಡಳಿ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು. ಕಬ್ಬಿನಿಂದ ಬರುವ ಎಥನಾಲ್ ಉತ್ಪಾದನೆಯ ಲಾಭಾಂಶವನ್ನು ರೈತರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಜನರ ಅಭಿವೃದ್ಧಿಗಾಗಿ ಎಂದು ಹೇಳುವ ಕಾವೇರಿ ಗ್ರಾಮೀಣ ಬ್ಯಾಂಕ್ ಓಟಿಎಸ್ ಪದ್ಧತಿಯಲ್ಲಿ ರೈತರಿಗೆ ನ್ಯಾಯ ನೀಡುತ್ತಿಲ್ಲ. ಕೆಲವು ಬ್ಯಾಂಕ್ ಗಳು ಗ್ರಾಮೀಣ ಮಕ್ಕಳಿಗೆ ವಿದ್ಯಾಭ್ಯಾಸ ಸಾಲ ನೀಡಲು ಇಲ್ಲ ಸಲ್ಲದ ಸಬೂಬು ಹೇಳುತ್ತಿದ್ದಾರೆ ಇನ್ನು ಕೆಲವು ಬ್ಯಾಂಕುಗಳು ರೈತರ ಚಿನ್ನ ಸಾಲದ ಬಡ್ಡಿ ಕಟ್ಟದಿದ್ದರೆ ಹರಾಜು ಎಂದು ಹೆದರಿಸುತ್ತಿದ್ದಾರೆ. ಇಂತಹ ಕಾನೂನು ಬಾಹಿರ ನೀತಿಗಳಿಂದ ರೈತರಿಗೆ ತುಂಬಾ ಸಂಕಷ್ಟ ವಾಗುತ್ತಿದೆ. ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು  ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಕಿರಗಸೂರು ಶಂಕರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: