ಮೈಸೂರು

ಲೋಕದ ನೋವು ನುಂಗಿಕೊಂಡು ಸಮಾಜಕ್ಕೆ ಒಳಿತನ್ನು ಬಯಸುವವರು ಸಂತರು : ಡಾ.ಕೆ.ಅನಂತರಾಮು

ಮೈಸೂರು,ಸೆ.6:- ಲೋಕದ ನೋವು ನುಂಗಿಕೊಂಡು ಸಮಾಜಕ್ಕೆ ಒಳಿತನ್ನು ಬಯಸುವವರು ಸಂತರು, ಅವರು ಸಿಹಿ ಮಾವಿನಮರದ ಹಾಗಿರುತ್ತಾರೆ ಎಂದು ತುಳಸಿದಾಸರು ತಿಳಿಸಿದ್ದಾರೆಂದು ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಕೆ. ಅನಂತರಾಮು ಅವರು ಹೇಳಿದರು.
ಮೈಸೂರಿನ ಶ್ರೀ ಸುತ್ತೂರು ಶಾಖಾಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಶ್ರಾವಣಮಾಸದ 26ನೇ ದಿನದ ಪ್ರವಚನದಲ್ಲಿ ‘ಸಂತ ಪರಂಪರೆ’ ಕುರಿತು ಮಾತನಾಡುತ್ತ ತಿಳಿಸಿದರು.
ವ್ಯಾಸರು ರಚಿಸಿದ ವೇದಗಳನ್ನು ಪರಿಣಾಮಕಾರಿಯಾಗಿ ಅಧ್ಯಯನ ಮಾಡಲು ಕಲ್ಪ, ನಿರುಕ್ತ, ಜ್ಯೋತಿಷ್ಯ, ಛಂದಸ್ಸು, ಶಿಕ್ಷಾ, ವ್ಯಾಕರಣ ಎಂಬ ಷಟ್‍ಶಾಸ್ತ್ರಗಳಿವೆ. ಕಲ್ಪಶಾಸ್ತ್ರ ಯಾವ ಕಾರ್ಯದಲ್ಲಿ ಯಾವ ಮಂತ್ರವನ್ನು ಉಪಯೋಗಿಸಬೇಕೆಂದು ತಿಳಿಸುತ್ತದೆ. ನಿರುಕ್ತ ವೇದಗಳಲ್ಲಿ ಬರುವ ಕಠಿಣ ಶಬ್ಧಗಳಿಗೆ ಅರ್ಥವನ್ನು ನೀಡುತ್ತದೆ. ಜ್ಯೋತಿಷ್ಯ ಮುಹೂರ್ತ ನಿರ್ಣಯ ಮಾಡುವ ಶಾಸ್ತ್ರ. ಛಂದಸ್ಸು ವೇದ ಮಂತ್ರಗಳ ಸ್ವರೂಪವನ್ನು ತಿಳಿಸುತ್ತದೆ. ಶಿಕ್ಷಾ ವೇದಮಂತ್ರಗಳ ಉಚ್ಛಾರಕ್ಕಾಗಿ ಇದೆ. ವ್ಯಾಕರಣ ಒಂದು ಭಾಷೆ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಸಿಕೊಡುತ್ತದೆ. ವೇದಗಳು ಪಾಠಾಂತರವಾಗಿಲ್ಲ. ವ್ಯಾಸರ ಮತ್ತೊಂದು ಕೊಡುಗೆಯಾದ ಮಹಾಭಾರತ ಹೆಜ್ಜೆ ಹೆಜ್ಜೆಗೂ ಸತ್ಯಕ್ಕೆ ಜಯ ಎಂಬುದನ್ನು ತಿಳಿಸಿಕೊಡುತ್ತದೆ. ಭಾ ಎಂದರೆ ಬೆಳಕು ರತ ಎಂದರೆ ಮಾರ್ಗ ಅಂದರೆ ಬೆಳಕಿನ ಮಾರ್ಗದಲ್ಲಿ ನಡೆಯಬೇಕು ಎಂದರ್ಥ. ಮಹಾಭಾರತದ ಭೀಷ್ಮಪರ್ವದ ಆರಂಭದಲ್ಲಿ ಭಗವದ್ಗೀತೆಯನ್ನು ರಚಿಸಲಾಗಿದೆ. ಇಕ್ಕಟ್ಟಿನ ಸನ್ನಿವೇಶದಲ್ಲಿ ರಣರಂಗದ ಮಧ್ಯದಲ್ಲಿ ಹುಟ್ಟಿಕೊಂಡ ಶಾಸ್ತ್ರ. ಕುರುಕ್ಷೇತ್ರ ಯುದ್ಧದಲ್ಲಿ ಸಂಭವಿಸುವ ಸಾವು-ನೋವುಗಳನ್ನು ನೆನೆದು ಶಸ್ತ್ರತ್ಯಾಗಕ್ಕೆ ಮುಂದಾಗಿದ್ದ ಅರ್ಜುನನ ಮನವೊಲಿಸಿ ಶ್ರೀಕೃಷ್ಣನು ಕ್ಷತ್ರಿಯನಾದ ನಿನ್ನ ಕಾರ್ಯ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವುದು ಎಂದು ಹೇಳುತ್ತಾನೆ. ಭಗವದ್ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳಿವೆ. ಪ್ರತಿಯೊಂದನ್ನು ಯೋಗಗಳೆಂದು ಕರೆಯಲಾಗಿದೆ. ಒಂದೊಂದು ಬೇರೆ ಬೇರೆ ಯೋಗವನ್ನು ತಿಳಿಸಿಕೊಡುತ್ತದೆ. ಅದರಲ್ಲಿ ನಾಲ್ಕು ಪ್ರಧಾನ ಯೋಗಗಳು ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ ಮತ್ತು ರಾಜಯೋಗ. ಇವು ಭಗವದ್ಗೀತೆಯ ಆಧಾರ ಸ್ತಂಭಗಳು. ನನ್ನನ್ನು ನಾನು ಯಾರು ಎಂದು ತಿಳಿಸುವುದು ಜ್ಞಾನಯೋಗ. ಮಾಡುವ ಕೆಲಸವೆಲ್ಲವೂ ಶಿವಾರ್ಪಿತವೆಂದು ಮಾಡುವುದು ಕರ್ಮಯೋಗ. ಪರಮಾತ್ಮನಲ್ಲಿ ತನ್ನನ್ನು ಸಂಪೂರ್ಣವಾಗಿ ಸಮರ್ಪಣೆ ಮಾಡಿಕೊಂಡು ಬಿಡುವುದು ಭಕ್ತಿಯೋಗ ಎಂದು ತಿಳಿಸಿದರು.
ಶ್ರೀ ಜಯರಾಜೇಂದ್ರರು ಕಠೋಪನಿಷತ್ತಿನ ಕುರಿತು ಮಾತನಾಡಿ ನಚಿಕೇತನಿಗೆ ಯಮ ತಾನು ನೀಡಿದ ವರಗಳನ್ನು ಸ್ವೀಕರಿಸಿದ್ದರಿಂದ ಆತ ಕೇಳಿದ್ದೆಲ್ಲವನ್ನು ಯಮ ಅನುಗ್ರಹಿಸುತ್ತಾನೆ. ನಚಿಕೇತನ ತಂದೆ ಶೋಕದಿಂದ ಮುಕ್ತವಾಗಿ ಪ್ರಸನ್ನಚಿತ್ತನಾಗುವಂತೆ ಮಾಡುತ್ತಾನೆ. ನಚಿಕೇತನನ್ನು ಜೀವಂತವಾಗಿರುವಂತೆ ತೋರಿಸಿ ಆತನೊಂದಿಗೆ ಬೆರೆಯುವಂತೆ ಯಮ ಮಾಡುತ್ತಾನೆ ಎಂದು ಹೇಳಿದರು.
ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮೈಸೂರು ಜೆಎಎಸ್‍ಎಸ್ ಪಾಲಿಟೆಕ್ನಿಕ್‍ನ ಉಪನ್ಯಾಸಕರಾದ ಕೆ.ಎಸ್. ಭಕ್ತವತ್ಸಲ ಮತ್ತು ಕುಟುಂಬದವರು ಕಾರ್ಯಕ್ರಮದ ಸೇವಾರ್ಥ ನೆರವೇರಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: