ಕರ್ನಾಟಕಪ್ರಮುಖ ಸುದ್ದಿ

ರಾಜ್ಯಾದ್ಯಂತ ಎಲೆಕ್ಟ್ರಿಕ್ ರೀಚಾರ್ಜ್ ಕೇಂದ್ರ ಸ್ಥಾಪನೆ: ಸಚಿವ ವಿ.ಸುನಿಲ್ ಕುಮಾರ್

ಬೆಂಗಳೂರು,ಸೆ.7- ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಎಲೆಕ್ಟ್ರಿಕ್ ರೀಚಾರ್ಜ್ ಸೆಂಟರ್‌ಗಳನ್ನು ತೆರೆಯಲಾಗುವುದು ಎಂದು ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ಕ್ಕೆ ಮಂಗಳವಾರ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಚಾಲಿತ ವಾಹನಗಳು ಬರುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನ ಸೌಕರ್ಯಕ್ಕಾಗಿ ಎಲ್ಲ ಜಿಲ್ಲಾ ಕೇಂದ್ರಗಳು, ಪ್ರವಾಸೋದ್ಯಮ ಕೇಂದ್ರಗಳಲ್ಲಿ ರೀಚಾರ್ಜ್ ಕೇಂದ್ರ ತೆರೆಯಲು ಬೇರೆ ಬೇರೆ ಎಸ್ಕಾಂಗಳಿಗೆ ಗುರಿ ನೀಡಲಾಗುವುದು. ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಪ್ರೀಪೇಯ್ಡ್ ವಿದ್ಯುತ್ ಮೀಟರ್ ಅಳವಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಉತ್ತರ ಕರ್ನಾಟಕದಲ್ಲಿ ಕೃಷಿ ಪಂಪ್‍ಸೆಟ್‌ಗಳಿಗೆ ನಿರಂತರ 7 ಗಂಟೆ ವಿದ್ಯುತ್ ನೀಡಬೇಕೆಂಬ ಬೇಡಿಕೆ ಇತ್ತು. ಇದಕ್ಕಾಗಿ ವಿವಿಧೆಡೆ 60ಕ್ಕೂ ಹೆಚ್ಚು ಸಬ್ ಸ್ಟೇಷನ್‌ಗಳನ್ನು ಇನ್ನು 100 ದಿನಗಳ ಒಳಗೆ ಕೆಪಿಟಿಸಿಎಲ್ ಮೂಲಕ ನಿರ್ಮಿಸಲಾಗುವುದು. ಕೃಷಿ ಪಂಪ್‍ಸೆಟ್‌ಗಳಿಗೆ ನಿರಂತರ 7 ಗಂಟೆ ವಿದ್ಯುತ್ ನೀಡಲು ಇದರಿಂದ ಸಾಧ್ಯವಾಗಲಿದೆ ಎಂದು ವಿವರಿಸಿದರು. ಇನ್ನು ಜೆಇ, ಲೈನ್‌ಮನ್ ನೇಮಕಾತಿ, ಜೆಇ ಹುದ್ದೆಗೆ ಬಡ್ತಿ ಸಮಸ್ಯೆಯನ್ನೂ ಬಗೆಹರಿಸಲಾಗುವುದು. ವರ್ಗಾವಣೆ ದಂಧೆಯನ್ನು ಯಾವುದೇ ಅಧಿಕಾರಿಗಳು ಮಾಡುವಂತಿಲ್ಲ. ವರ್ಷ ಪೂರ್ತಿ ವರ್ಗಾವಣೆ ಇರುವುದಿಲ್ಲ ಎಂದು ತಿಳಿಸಿದರು.

ಎರಡೂ ಇಲಾಖೆಗಳಲ್ಲಿ 100 ದಿನಗಳ ಕಾರ್ಯಕ್ರಮ ಯೋಜಿಸಿದ್ದೇವೆ. ಈ 100 ದಿನಗಳಲ್ಲಿ ಮುಖ್ಯಮಂತ್ರಿಗಳ ಆಶಯದಂತೆ ‘ಬೆಳಕು’ ಯೋಜನೆಯಡಿಯಲ್ಲಿ ಗ್ರಾಮಾಂತರದಲ್ಲಿ ಮನೆಗಳನ್ನು ಕಟ್ಟಿ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗದ ಮನೆಯವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಅತ್ಯಂತ ದುರಸ್ತಿ ಸ್ಥಿತಿಯಲ್ಲಿರುವ ಟ್ರಾನ್ಸ್‍ಫಾರ್ಮರ್ ಬದಲಾವಣೆಗೆ ಟ್ರಾನ್ಸ್‍ಫಾರ್ಮರ್ ಬ್ಯಾಂಕ್ ಸ್ಥಾಪಿಸಲಾಗುವುದು. ಕೇವಲ 24 ಗಂಟೆಗಳಲ್ಲಿ ಹಾಳಾದ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಬದಲಾವಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

Leave a Reply

comments

Related Articles

error: