ಕರ್ನಾಟಕಪ್ರಮುಖ ಸುದ್ದಿಮೈಸೂರು

ಶಿಕ್ಷಣವೇ ಬದುಕಿನ ಭವಿಷ್ಯಕ್ಕೆ ರಾಜಮಾರ್ಗ : ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ

ಮೈಸೂರು, ಸೆ.7:- ಶಿಕ್ಷಣವೇ ನಮ್ಮ ಬದುಕಿನ ಭವಿಷ್ಯಕ್ಕೆ ರಾಜಮಾರ್ಗವಾಗಿದೆ. ಸಮಾಜದ ಎಲ್ಲಾ ಸಮಸ್ಯೆಗಳನ್ನು ಶಿಕ್ಷಣದ ಮೂಲಕವೇ ಬಗೆಹರಿಸಲು ಸಾಧ್ಯ ಹಾಗಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವಥ್‍ ನಾರಾಯಣ ಅವರು ತಿಳಿಸಿದರು.
ಮಹಾರಾಣಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಮಂಗಳವಾರ ವಿಜ್ಞಾನ ಕಾಲೇಜಿನ ಕಲಾ ಮಂಟಪದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ಅನುಷ್ಠಾನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.
ಸಮಾಜದಲ್ಲಿ ಆರ್ಥಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳು ಬೆಳೆಯುತ್ತಿರುವುದು ಜ್ಞಾನದ ಮೂಲಕ. ನಮ್ಮ ಜೀವನ, ವ್ಯಕ್ತಿತ್ವ, ಅರಿವನ್ನು ಬೆಳೆಸಿಕೊಳ್ಳಲು ಶಿಕ್ಷಣ ಬೇಕು. ಹಾಗಾಗಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಕಲಿಸುವ ರೀತಿ-ನೀತಿಗಳು, ಮೌಲ್ಯಮಾಪನದಲ್ಲಿ ಇನ್ನೂ ಅನೇಕ ಬದಲಾವಣೆ ತರುವ ಮೂಲಕ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಅವಶ್ಯಕತೆ ಇದೆ ಎಂದರು.
ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಜ್ಞಾನವನ್ನು ಮತ್ತಷ್ಟು ಬೆಳೆಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸಬೇಕು. ಶಿಕ್ಷಣ ಸಂಸ್ಥೆಗಳು ಸರಿಯಾಗಿಲ್ಲವೆಂದರೆ ಎಂದೆಂದಿಗೂ ನಾವು ಉತ್ತಮ ಸಮಾಜವನ್ನು ನೋಡಲು ಸಾಧ್ಯವಾಗುವುದಿಲ್ಲ. ದೇಶದ ಪ್ರಗತಿ ಸಾಧಿಸಬೇಕೆಂದರೆ ಶಿಕ್ಷಣ ಸಂಸ್ಥೆಗಳಲ್ಲಿ ಸುಧಾರಣೆ ಮತ್ತು ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯು ಸದ್ಯ ಶೈಕ್ಷಣಿಕ ಸುಧಾರಣೆಯ ಪ್ರಾರಂಭ ಅಷ್ಟೇ. ನಂತರದ ದಿನಗಳಲ್ಲಿ ಸುಧಾರಣೆಯು ಬಹಳ ವೇಗದಲ್ಲಿರುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆಗೆ ಹಾಗೂ ವಿದ್ಯಾರ್ಥಿಗಳ ಅನುಕೂಲಗಳಿಗೆ ಕೇಂದ್ರಿತವಾಗಿ, ಶಿಕ್ಷಣವನ್ನು ಉತ್ತಮ ಪಡಿಸಲು ಎಲ್ಲಾ ರೀತಿಯ ಬೆಂಬಲ, ಪ್ರೋತ್ಸಾಹ, ಸಂಪನ್ಮೂಲಗಳನ್ನು ನೀಡುವ ಮೂಲಕ ಸಂಪೂರ್ಣ ಸುಧಾರಣೆಯನ್ನು ತರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಎಲ್.ನಾಗೇಂದ್ರ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಎ. ಹೇಮಂತ ಕುಮಾರ್ ಗೌಡ, ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರಾದ ಕೆ.ಸಿ ವೀರಭದ್ರಯ್ಯ, ಕಾಡಾ ಅಧ್ಯಕ್ಷರಾದ ಶಿವಲಿಂಗಯ್ಯ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಾಲಕೃಷ್ಣ, ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಟಿ ವಿಜಯ್, ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹದೇವಸ್ವಾಮಿ ಹಾಗೂ ಕಾಲೇಜಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: