ಕರ್ನಾಟಕಪ್ರಮುಖ ಸುದ್ದಿ

ನಿಫಾ ವೈರಸ್ ಬಗ್ಗೆ ಆತಂಕ ಬೇಡ, ಎಚ್ಚರವಿರಲಿ : ಡಾ.ಆರ್.ವೆಂಕಟೇಶ್

ರಾಜ್ಯ( ಮಡಿಕೇರಿ) ಸೆ.8:- ನಿಫಾ ವೈರಸು ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ರೀತಿಯ ಪ್ರಕರಣಗಳು ಕಂಡು ಬಂದಿಲ್ಲ. ಆದರೂ ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದು, ಯಾರೂ ಸಹ ಆತಂಕ ಪಡಬೇಕಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಕಚೇರಿಯಲ್ಲಿ ನಿಫಾ ವೈರಸ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ನೆರೆಯ ಕೇರಳ ರಾಜ್ಯದಲ್ಲಿ ನಿಫಾ ವೈರಸು ಕಂಡು ಬಂದಿರುವುದರಿಂದ ಜಿಲ್ಲೆಯಲ್ಲಿಯೂ ಸಹ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅವರು ತಿಳಿಸಿದರು.
ಜ್ವರ, ತಲೆನೋವು, ತಲೆ ಸುತ್ತುವಿಕೆ, ವಾಂತಿ, ಪ್ರಜ್ಞಾಹೀನತೆಗೆ ಒಳಗಾಗುವುದು, ಅತಿಯಾದ ಜ್ವರ ಮೆದುಳಿಗೆ ವ್ಯಾಪಿಸುವುದು, ಮಾತಿನಲ್ಲಿ ತೊದಲುವಿಕೆ, ಅಪಸ್ವರ ಇವು ನಿಫಾ ವೈರಸ್‍ ನ ರೋಗ ಲಕ್ಷಣಗಳಾಗಿದ್ದು, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಡಾ.ಆರ್.ವೆಂಕಟೇಶ್ ಅವರು ಹೇಳಿದರು.
ಸೋಂಕಿತ 4 ರಿಂದ 18 ದಿನಗಳಲ್ಲಿ ನಿಫಾ ವೈರಸ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲಿದೆ. ಆದ್ದರಿಂದ ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡು ಬಂದಲ್ಲಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ ಎಂದು ಅವರು ಮನವಿ ಮಾಡಿದರು.
ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಹಾಗೂ ಬಾವಲಿಗಳು ಬಿಸಾಡಿದ ಹಣ್ಣು ಹಂಪಲುಗಳನ್ನು ಸೇವಿಸುವುದರಿಂದ ಇತರ ಪ್ರಾಣಿಗಳಿಗೆ ಹರಡುತ್ತದೆ. ಸೋಂಕಿತ ಪ್ರಾಣಿಗಳಿಂದ ಇತರ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು, ರಕ್ತ ಇವುಗಳ ನೇರ ಸಂಪರ್ಕದಿಂದ ಹಾಗೂ ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸುವುದರಿಂದ ಹರಡುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು.
ಸೋಂಕಿತ ವ್ಯಕ್ತಿಯ ಗಂಟಲಿನ ದ್ರವಗಳ ಮಾದರಿಯನ್ನು ಪಡೆದು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ದೃಢಪಡಿಸಬಹುದು. ಪ್ರಸ್ತುತ ಈ ಪರೀಕ್ಷೆಯನ್ನು ರಾಷ್ಟ್ರೀಯ ವೈರಾಣು ಕೇಂದ್ರ ಪುಣೆಗೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಹೇಳಿದರು.
ನಿಫಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಅಶ್ವಿನಿ ಆಸ್ಪತ್ರೆಯಲ್ಲಿ 5 ಹಾಸಿಗೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ 2 ಹಾಸಿಗೆಯನ್ನು ಕಾಯ್ದಿರಿಸಲಾಗುವುದು ಎಂದು ತಿಳಿಸಿದರು.
ಕೋವಿಡ್ ಪಾಸಿಟಿವಿಟಿ ಪ್ರಮಾಣದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಎಚ್‍ಒ ಅವರು ಕೋವಿಡ್-19 ಪಾಸಿಟಿವಿಟಿ ಪ್ರಮಾಣವು 2 ಕ್ಕಿಂತ ಕಡಿಮೆ ಇದೆ. ಇನ್ನೊಂದು ವಾರದಲ್ಲಿ ಒಂದಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ. ಪ್ರತೀ ದಿನ ಮೂರುವರೆಯಿಂದ ನಾಲ್ಕು ಸಾವಿರದವರೆಗೆ ಕೋವಿಡ್-19 ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮವು ಉತ್ತಮವಾಗಿ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟವರಿಗೆ ಎಲ್ಲರಿಗೂ ಪ್ರಥಮ ಮತ್ತು ದ್ವಿತೀಯ ಹಂತದ ಲಸಿಕೆ ನೀಡುವಲ್ಲಿ ಶ್ರಮಿಸಲಾಗುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಲಸಿಕಾ ಅಧಿಕಾರಿ ಡಾ.ಗೋಪಿನಾಥ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಹೇಶ್ ಇತರರು ಇದ್ದರು.
ಮುಂಜಾಗ್ರತಾ ಕ್ರಮಗಳು:-ಯಾವುದೇ ರೀತಿಯ ಜ್ವರ ಕಂಡು ಬಂದಲ್ಲಿ ಉದಾಸೀನ ಮಾಡದೇ ಹಾಗೂ ನಿಫಾ ವೈರಸ್ ಲಕ್ಷಣಗಳಿರುವ ಜ್ವರಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು. ರೋಗಿಗಳ ಜೊತೆ ಕಾರ್ಯನಿರ್ವಹಿಸುವ ಸಿಬ್ಬಂದಿ ಮಾಸ್ಕ್, ಕೈಕವಚ ಧರಿಸುವುದು ಮುಂತಾದ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಗಮನ ಕೊಡುವುದು.
ಯಾವುದೇ ಪ್ರಾಣಿ ಪಕ್ಷಿಗಳು ಕಚ್ಚಿದ ಹಾಗೂ ಮಳೆಗಾಳಿಯಿಂದ ಬಿದ್ದಿರುವ ಹಣ್ಣುಗಳನ್ನು ಸೇವಿಸಬಾರದು. ಬೀದಿ ಬದಿಗಳಲ್ಲಿ ಕತ್ತರಿಸಿ ಮಾರುವ ಹಣ್ಣು ಹಂಪಲುಗಳನ್ನು ಸೇವಿಸಬಾರದು. ನೀರಾ ಇಳಿಸುವವರು ವೈಯಕ್ತಿಕ ಸ್ವಚ್ಛತೆ ಕಾಪಾಡುವುದು ಹಾಗೂ ಸರಿಯಾಗಿ ಕೈ ಕಾಲುಗಳನ್ನು ಸೋಪಿನಿಂದ ತೊಳೆಯುವುದು.
ಶುಚಿಗೊಳಿಸದ ಕೈಗಳಿಂದ ಕಣ್ಣು ಮತ್ತು ಮೂಗುಗಳನ್ನು ಉಜ್ಜಬಾರದು. ಕಚ್ಚಾ ಖರ್ಜೂರಗಳನ್ನು ಸೇವಿಸದಿರುವುದು. ಸಂಸ್ಕರಿಸಿಲ್ಲದೇ ಯಾವುದೇ ಡ್ರೈ ಪ್ರೂಟ್ ಗಳನ್ನು ಉಪಯೋಗಿಸದಿರುವುದು. ಸಂಸ್ಕರಿಸಿಲ್ಲದ ಪ್ರೆಸ್ ಫಾಲ್ಮ್ ಡೇಟ್ಸ್ ಪ್ರೂಟ್ ಜ್ಯೂಸ್‍ಗಳನ್ನು ಉಪಯೋಗಿಸದಿರುವುದು. ಹಂದಿ ಸಾಕಾಣಿಕಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಯಾವುದೇ ರೀತಿಯ ಗಾಯ ಅಥವಾ ಸೋಂಕಿಗೆ ಒಳಗಾಗಿದ್ದಲ್ಲಿ ಸೂಕ್ತ ಚಿಕಿತ್ಸೆಗೆ ಒಳಪಡುವುದು.
ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ಸಂಗ್ರಹಣೆ ಮಾಡುವ ಶೇಂದಿ ಮತ್ತು ಪಾನೀಯಗಳನ್ನು ಸೇವಿಸಬಾರದು. ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿರುವ ತೆರೆದ ಬಾವಿಯ ನೀರನ್ನು ಶುದ್ದೀಕರಿಸಿ ಸೇವಿಸುವುದು ಹಾಗೂ ಬಾವಿಗಳನ್ನು ಬಲೆಗಳಿಂದ ಮುಚ್ಚಿ ಬಾವಲಿಗಳು ಒಳ ಪ್ರವೇಶಿಸದಂತೆ ನೋಡಿಕೊಳ್ಳುವುದು.
ನೆರೆ ರಾಜ್ಯ ಕೇರಳಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ತೀವ್ರ ನಿಗಾವಣೆ ಮತ್ತು ಸಕ್ರಿಯ ಸರ್ವಲೆನ್ಸ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈಗಾಗಲೇ ತಿಳಿಸಲಾಗಿದೆ. ಹಾಗೂ ಈ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತರೆ ಇಲಾಖೆಗಳ ಸಮನ್ವಯ ಸಮಿತಿ ಸಭೆಯನ್ನು ನಡೆಸಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ವೈರಸ್ ಜ್ವರವು ನೇರ ಸಂಪರ್ಕದಿಂದ ಹರಡುವುದರಿಂದ ಸೋಂಕಿತ ವ್ಯಕ್ತಿ ಮತ್ತು ಪ್ರಾಣಿಗಳಿಂದ (ನಾಯಿ, ಬೆಕ್ಕು, ಮೇಕೆ, ಕುದುರೆ ಮತ್ತು ಕೆಲವು ಸಂದರ್ಭದಲ್ಲಿ ಕುರಿಗಳು) ದೂರವಿರುವುದು ಸೂಕ್ತವಾಗಿದೆ. ಅಲ್ಲದೆ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ಆರೋಗ್ಯ ಸಹಾಯವಾಣಿ 104 ಅಥವಾ 08272-225443 ನ್ನು ಸಂಪರ್ಕಿಸಬಹುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: