ಮೈಸೂರು

ರೌಡಿಶೀಟರ್ ಪಟ್ಟಿ ಪರಿಷ್ಕರಣೆ ಗೃಹ ಸಚಿವರ ಹೇಳಿಕೆ ಸಮಾಜಘಾತುಕ ಶಕ್ತಿಗಳನ್ನು ಉತ್ತೇಜಿಸಿದೆ : ಕೆಪಿಸಿಸಿ ವಕ್ತಾರ ಎಚ್ ಎ ವೆಂಕಟೇಶ್

ಮೈಸೂರು,ಸೆ.7:- ರೌಡಿಶೀಟರ್ ಪಟ್ಟಿ ಪರಿಷ್ಕರಣೆ ಬಗ್ಗೆ ಗೃಹಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆ ಪೊಲೀಸರ ಆತ್ಮಸ್ಥೈರ್ಯವನ್ನು ಕುಗ್ಗಿಸುವುದರ ಜೊತೆಗೆ ಸಮಾಜಘಾತಕ ಶಕ್ತಿಗಳಿಗೆ ಉತ್ತೇಜನ ನೀಡಿದಂತಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್ ಎ ವೆಂಕಟೇಶ್ ಆರೋಪಿಸಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಅವರು ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದ ನಂತರ ನೀಡಿರುವ ಹೇಳಿಕೆ ಸಚಿವರಿಗೆ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಪ್ರಜಾಪ್ರಭುತ್ವದ ಸಾರ್ವಭೌಮತ್ವ ಎತ್ತಿಹಿಡಿಯಬೇಕಾದ ಸಚಿವರು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಭಾರತೀಯ ದಂಡ ಸಂಹಿತೆ, ಅಪರಾಧ ದಂಡ ಸಂಹಿತೆಗೆ, ಕಾನೂನಿಗೆ ಅಪಚಾರ ವಾಗುವಂತೆ ನಡೆದುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಿದ್ದ ಪೊಲೀಸ್ ಇಲಾಖೆಯಲ್ಲಿ ಸಚಿವರು ನೇರ ಹಸ್ತಕ್ಷೇಪ ನಡೆಸಿದ್ದಾರೆ. ಸಾರ್ವಜನಿಕರ ಆಸ್ತಿಪಾಸ್ತಿಯನ್ನು ಹಾಳು ಮಾಡಿ, ಸಮಾಜಘಾತಕ ಕೃತಿಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಸಚಿವರ ಹೇಳಿಕೆಯಿಂದ ಮತ್ತಷ್ಟು ನಡೆಸಲು ಉತ್ತೇಜನ ನೀಡಿದಂತಾಗಿದೆ.
ಅಪರಾಧ ದಾಖಲಿಸಲು ಪೊಲೀಸರು ಬಹಳಷ್ಟು ಶ್ರಮವಹಿಸಿ ಅಪರಾಧಿಗಳನ್ನು ಪತ್ತೆಹಚ್ಚಿ ಕಾನೂನಿನ ಚೌಕಟ್ಟಿನಲ್ಲಿ ನಿಲ್ಲಿಸಿರುತ್ತಾರೆ ಎಂದಿದ್ದಾರೆ. ಸುಳ್ಳು ಪ್ರಕರಣ ಹಾಗೂ ರೌಡಿಶೀಟ್ ತೆಗೆಯುವಂತಹ ಪ್ರಕರಣಗಳಲ್ಲಿ ಭಾಗಿಯಾಗದಿದ್ದರೂ ಪಟ್ಟಿಗೆ ಸೇರ್ಪಡೆಯಾಗಿರುವವರಿಗೆ ರೌಡಿ ಹಣೆಪಟ್ಟಿಯಿಂದ ಮುಕ್ತ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ ಎಂದಿದ್ದಾರೆ.
ರೈತರ ಮತ್ತು ಕನ್ನಡ ಹೋರಾಟಗಾರರು ರೌಡಿ ಶೀಟ್ ನಲ್ಲಿ ಇದ್ದಾರೆ ಎಂದು ಹೇಳಿರುವುದು ಸಾರ್ವಜನಿಕರನ್ನು ದಿಕ್ಕುತಪ್ಪಿಸಲು ಅನವಶ್ಯಕವಾಗಿ ಹೋರಾಟಗಾರರ ಹೆಸರನ್ನು ಪ್ರಸ್ತಾಪಿಸಿದ್ದಾರೆ.
ಈ ಹೇಳಿಕೆ ರೈತರಿಗೆ, ಕನ್ನಡ ಹೋರಾಟಗಾರರಿಗೆ ಮಾಡಿದ ಅಪಮಾನ. ಸಮಾಜದಲ್ಲಿ ಗೌರವವಾಗಿ ಬದುಕುತ್ತಿರುವವರಿಗೆ ರೌಡಿ ಪಟ್ಟಕಟ್ಟಿ ಇಡೀ ಜೀವನ ನರಳುವಂತೆ ಮಾಡಿರುವ ಪೊಲೀಸರ ವಿರುದ್ಧ ಮೊದಲು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಹೋರಾಟಗಾರರ ಮೇಲೆ ಯಾವ ಯಾವ ಪೊಲೀಸ್ ಠಾಣೆಗಳಲ್ಲಿ ಯಾವ ಅಪರಾಧ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು. ಇಲ್ಲದಿದ್ದರೆ ಪೊಲೀಸ್ ಠಾಣೆಯನ್ನ ಸಂಶಯದಿಂದ ನೋಡುವಂತಾಗುತ್ತದೆ.
ಸಚಿವರ ಬಹಿರಂಗ ಹೇಳಿಕೆಯ ಅರ್ಥ ಒಂದಾದರೆ, ಸಚಿವರ ಅಂತರಂಗದ ಆಲೋಚನೆಯೇ ಬೇರೆ ಇದೆ.
ಸಮಾಜದಲ್ಲಿ ಶಾಂತಿ ಕದಡಿ, ಕೋಮುದಳ್ಳುರಿ ನಡೆಸಿ, ಅಮಾಯಕರ ಪ್ರಾಣ ತೆಗೆದು, ಸಮಾಜ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿರುವ ವಿಶ್ವ ಹಿಂದೂ ಪರಿಷತ್. ಆರೆಸ್ಸೆಸ್, ಮುಂತಾದ ಬಿಜೆಪಿ ಬೆಂಬಲಿಸುವ ಸಂಘಟನೆಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯುವ ಉದ್ದೇಶ ಸಚಿವರ ಹೇಳಿಕೆಯ ಹಿಂದೆ ಇರುವುದು ಸುಸ್ಪಷ್ಟವಾಗಿದೆ.
ಗೃಹ ಸಚಿವನಾಗಿ ನಿದ್ದೆ ಬರುತ್ತಿಲ್ಲ, ಮಹಿಳೆಯರ ಆತ್ಮಸ್ಥೈರ್ಯವನ್ನು ಕುಗ್ಗಿಸುವಂತಹ ಮಾತುಗಳು, ಹಾಗೂ ನನ್ನನ್ನು ಕಾಂಗ್ರೆಸ್ಸಿನವರು ರೇಪ್ ಮಾಡುತ್ತಿದ್ದಾರೆ ಎಂಬಂತಹ ಹೇಳಿಕೆಗಳು ಸಚಿವರ ಅಸಮರ್ಥತೆಯನ್ನು ಎತ್ತಿ ಹಿಡಿಯುತ್ತವೆ. ಗೃಹ ಸಚಿವರಾದವರು ಪೋಲೀಸ್ ವ್ಯವಸ್ಥೆಯ ಜೊತೆ ಕೈ ಜೋಡಿಸಿ, ಅವರಲ್ಲಿ ಧೈರ್ಯ, ಸಾಹಸ, ಮಾನವೀಯತೆಯಿಂದ ಕಾರ್ಯ ನಿರ್ವಹಿಸುವಂತೆ ಸ್ಪೂರ್ತಿ ತುಂಬಿ ಇಡೀ ಸಮಾಜ ನೆಮ್ಮದಿಯಿಂದ ಬದುಕುವಂತೆ ಕಾರ್ಯನಿರ್ವಹಿಸುವಲ್ಲಿ ವಿಫಲ ವಾಗಿರುವುದರಿಂದ ಈ ಕೂಡಲೇ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: