ಮೈಸೂರು

ಪಂಚ ದಾಸೋಹಗಳ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದವರು ರಾಜೇಂದ್ರ ಶ್ರೀಗಳು : ಕೆ.ಅನಂತರಾಮು

 

ಮೈಸೂರು,ಸೆ.8:- ಪಂಚ ದಾಸೋಹಗಳ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದವರು ರಾಜೇಂದ್ರ ಶ್ರೀಗಳು ಎಂದು ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಕೆ. ಅನಂತರಾಮು ಅವರು ಮೈಸೂರಿನ ಶ್ರೀ ಸುತ್ತೂರು ಶಾಖಾಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಮೈಸೂರಿನ ಶ್ರೀ ಸುತ್ತೂರು ಶಾಖಾಮಠದಲ್ಲಿ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 106ನೆಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ತಿಳಿಸಿದರು.
ಧರ್ಮ, ಜ್ಞಾನ, ವಿದ್ಯೆ, ಆರೋಗ್ಯ ಹಾಗೂ ಅನ್ನದಾಸೋಹವೆಂಬ ಪಂಚ ದಾಸೋಹವನ್ನು ಹೃತ್ಪೂರ್ವಕವಾಗಿ ತಮ್ಮ ಜೀವನ ಪರ್ಯಂತ ನಡೆಸಿಕೊಂಡು ಬಂದರು. ರಾಜೇಂದ್ರ ಶ್ರೀಗಳ ಮಹಿಮೆ ಅಪಾರವಾದುದು ಮತ್ತು ಹೇಳಲು ಅಸಾಧ್ಯವಾದುದು. ಅವರು ಜ್ಞಾನದ ಬೆಳಕು, ಸಚ್ಚಿದಾನಂದ ಸ್ವರೂಪರು. ಮಠ ಪರಂಪರೆಗೆ ಭದ್ರ ಬುನಾದಿ ಹಾಕಿದವರು. ದೂರದರ್ಶಿತ್ವವನ್ನ ಹೊಂದಿದ್ದವರು. ಯುಗಪುರುಷರು. ಆಧ್ಯಾತ್ಮಿಕ ಧ್ರುವನಕ್ಷತ್ರರಾಗಿ ಕಂಗೊಳಿಸುತ್ತಿದ್ದಾರೆ. ಬದುಕು ಮಂಗಳಮಯವಾಗಬೇಕಾದರೆ ಇಂತಹ ಮಹಾತ್ಮರ ಸ್ಮರಣೆ ಮಾಡಬೇಕು. ಆಗಮಾತ್ರ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಎಂದು ತಿಳಿಸಿದರು
ವಿಶ್ರಾಂತ ಪ್ರಾಂಶುಪಾಲರಾದ ಡಾ. ಎಂ. ಕೃಷ್ಣೇಗೌಡರವರು ನಮ್ಮೊಳಗಿರುವ ಪ್ರಪಂಚ ಈ ಹೊರಜಗತ್ತಿಗಿಂತ ದೊಡ್ಡದು. ಮಹಾತ್ಮರಾದವರೆಲ್ಲರೂ ತಮ್ಮೊಳಗಿನ ಪ್ರಪಂಚವನ್ನು ಕಂಡರು. ಅಂತಹ ಮಹಾತ್ಮರಲ್ಲಿ ಸುತ್ತೂರು ಶ್ರೀಮಠದ ಮಂತ್ರಮಹರ್ಷಿಗಳು ಹಾಗೂ ರಾಜೇಂದ್ರ ಶ್ರೀಗಳು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಮಂತ್ರಮಹರ್ಷಿಗಳು ಮನಸ್ಸು ಮತ್ತು ದೇಹವನ್ನು ಏಕೀಭವಿಸಿದ ಮಹಾನ್‍ತಪಸ್ವಿಗಳು. ತಮ್ಮ ಕಾಯಕದ ಮೂಲಕ ಸಮಾಜೋದ್ಧಾರವನ್ನು ಮಾಡಿದ ಮಹಾನ್‍ಮಹಿಮರು ರಾಜೇಂದ್ರ ಶ್ರೀಗಳು. ಅವರ ಸಂಕಲ್ಪ, ಸಾಧನೆ ಮತ್ತು ಸಿದ್ಧಿ ಅಮೋಘವಾದುದು. ಅವರು ಅಂದು ಬಿತ್ತಿದ ಬೀಜ ಇಂದು ಹೆಮ್ಮರವಾಗಿ ಬೆಳದಿದೆ ಎಂದು ಹೇಳಿದರು.
ನಿವೃತ್ತ ಸಹ ಪ್ರಾಧ್ಯಾಪಕರಾದ ಡಾ. ಸಿ.ಜಿ. ಉಷಾದೇವಿಯವರು ರಾಜೇಂದ್ರ ಶ್ರೀಗಳು ದೈವದತ್ತ ಮಾನವೀಯತೆಯನ್ನು ಹೊಂದಿದ್ದರು. ನಿರ್ಲಿಪ್ತತೆ, ಔದಾರ್ಯ, ಪರಹಿತಕ್ಕಾಗಿ ಸದಾ ದುಡಿಯುವ ಗುಣಗಳನ್ನು ಹೊಂದಿದ್ದರು. ಅಸಾಮಾನ್ಯವಾದವರೊಬ್ಬರು ಸಾಮಾನ್ಯವಾಗಿ ಬದುಕಬಲ್ಲರು ಎಂಬುದಕ್ಕೆ ರಾಜೇಂದ್ರ ಶ್ರೀಗಳು ಶ್ರೇಷ್ಠ ನಿದರ್ಶನ. ಮಾಡುವಂತಿರಬೇಕು ಮಾಡದಂತಿರಬೇಕು ಎಂಬ ಬಸವಣ್ಣನವರ ವಚನದಂತೆ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಸರಳವಾಗಿ ಬದುಕಿ ಸಾಧನೆಯ ಶಿಖರವೇರಿದರು ಎಂದು ತಿಳಿಸಿದರು.
ಹುಲಿಯೂರುದುರ್ಗ ಮಠದ ಡಾ. ಶ್ರೀ ಸಿದ್ಧಲಿಂಗ ಶಿವಾನಂದ ಸ್ವಾಮಿಗಳು ಈ ಶ್ರಾವಣ ಮಾಸದಲ್ಲಿ ಕಬ್ಬಿನಲ್ಲಿ ಜೇನು ಇದ್ದಂತೆ ರಾಜೇಂದ್ರ ಶ್ರೀಗಳ ಜಯಂತಿಯು ಕೂಡಿಕೊಂಡಿದೆ. ಅವರು ನಮಗೆ ಅಂದು ಗುರುಕುಲದಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟರು. ಅದರಿಂದಲೇ ಇಂದು ನಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸಾಧ್ಯವಾಗಿದೆ. ಪೂಜ್ಯರು ಬಹಳ ಕಷ್ಟಪಟ್ಟು ಜೆಎಸ್‍ಎಸ್ ಸಂಸ್ಥೆಯನ್ನು ಕಟ್ಟಿದ್ದಾರೆ ಎಂದರು.

ಕೆ.ಜಿ. ವಿನುತಾ ಹಾಗೂ ರೂಪಾ ಗುರುಪ್ರಸಾದ್ ಪ್ರಾರ್ಥಿಸಿದರು. ಚಿಕ್ಕತುಪ್ಪೂರು ಶಿವಪೂಜಾ ಮಠದ ಚನ್ನವೀರ ಸ್ವಾಮಿಗಳು ವಚನ ಗಾಯನ ಮಾಡಿದರು. ಪ್ರೊ. ಮೊರಬದ ಮಲ್ಲಿಕಾರ್ಜುನ ಸ್ವಾಗತಿಸಿದರು. ರುದ್ರಮುನಿದೇವರು ವಂದಿಸಿದರು. ಅಮರೇಶ್ವರದೇವರು ಕಾರ್ಯಕ್ರಮ ನಿರೂಪಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: