ಕರ್ನಾಟಕಪ್ರಮುಖ ಸುದ್ದಿ

ವಾರಾಂತ್ಯ ಕರ್ಫ್ಯೂ ತೆರವು ಮತ್ತು ಶಾಲೆ ಆರಂಭ ಬಗ್ಗೆ ಸರ್ಕಾರದ ಆದೇಶದಂತೆ ಕ್ರಮವಹಿಸಲು ಡಿಸಿಗೆ ಉಸ್ತುವಾರಿ ಸಚಿವರ ಸಲಹೆ

ರಾಜ್ಯ(ಮಡಿಕೇರಿ) ಸೆ.11:- ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್-19 ಪಾಸಿಟಿವಿಟಿ ಪ್ರಮಾಣವು ಶೇ.2 ಕ್ಕಿಂತ ಕಡಿಮೆ ಇದ್ದು, ಈ ಹಿನ್ನೆಲೆ ವಾರಾಂತ್ಯ ಕರ್ಫ್ಯೂ ಹಿಂಪಡೆಯುವಲ್ಲಿ ಸರ್ಕಾರದಿಂದ ಆದೇಶ ಬರಲಿದ್ದು, ಆ ದಿಸೆಯಲ್ಲಿ ಜಿಲ್ಲಾಧಿಕಾರಿ ಅವರು ಅಗತ್ಯ ತೀರ್ಮಾನ ತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಸಲಹೆ ನೀಡಿದ್ದಾರೆ.
ನಗರದ ಜಿ.ಪಂ.ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ಲಸಿಕೆ ಅಭಿಯಾನ ಪ್ರಗತಿ ಸಂಬಂಧಿಸಿದಂತೆ ಮಾಹಿತಿ ಪಡೆದು ಸಚಿವರು ಮಾತನಾಡಿದರು. ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವಿಟಿ ಪ್ರಮಾಣವು 2 ಕ್ಕಿಂತ ಕಡಿಮೆ ಇರುವುದರಿಂದ ವಾರಾಂತ್ಯ ಕರ್ಫ್ಯೂ ತೆಗೆಯಬಹುದಾಗಿದೆ. ಆ ನಿಟ್ಟಿನಲ್ಲಿ ಸರ್ಕಾರದಿಂದ ಆದೇಶ ಬರಲಿದ್ದು, ಅದರಂತೆ ಮುಂದಿನ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಸಚಿವರು ಸಲಹೆ ಮಾಡಿದರು.
ಈ ಬಗ್ಗೆ ಧ್ವನಿಗೂಡಿಸಿದ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚುರಂಜನ್ ಅವರು ವಾರಾಂತ್ಯ ಕರ್ಫ್ಯೂ ತೆಗೆದು, ಗಡಿಭಾಗದ ಚೆಕ್‍ ಪೋಸ್ಟ್ ಗಳಲ್ಲಿ ಬಿಗಿ ಕ್ರಮವಹಿಸುವಂತಾಗಬೇಕು ಎಂದು ಸೂಚಿಸಿದರು.
ಚೆಕ್‍ಪೋಸ್ಟ್ ಗಳಲ್ಲಿ ಶೌಚಾಲಯ, ನೀರು, ವಿದ್ಯುತ್ ಮತ್ತಿತರ ಮೂಲ ಸೌಲಭ್ಯ ಕಲ್ಪಿಸುವಂತೆ ಕಳೆದ ಸಭೆಯಲ್ಲಿ ಸೂಚಿಸಿದ್ದರೂ ಸಹ ಸಮರ್ಪಕವಾಗಿ ಅನುಷ್ಠಾನ ಆಗದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಅತೃಪ್ತಿ ವ್ಯಕ್ತಪಡಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದವರು ಚೆಕ್‍ಪೋಸ್ಟ್‍ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಅಗತ್ಯ ಸೌಕರ್ಯಗಳಿಲ್ಲದೆ ಪರಿತಪಿಸುವಂತಾಗಿದೆ ಎಂದು ಮನವಿ ಮಾಡಿದ್ದಾರೆ. ಕಳೆದ ಸಭೆಯಲ್ಲಿ ನಿರ್ದೇಶನ ನೀಡಿದ್ದರೂ ಸಹ ಸರಿಯಾಗಿ ಕೆಲಸಗಳು ಆಗದಿರುವುದಕ್ಕೆ ಕೋಟ ಶ್ರೀನಿವಾಸ ಪೂಜಾರಿ ಅವರು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕೋವಿಡ್ 19 ಪಾಸಿಟಿವಿಟಿ ಪ್ರಮಾಣವು ಶೇ.2 ಕ್ಕಿಂತ ಕಡಿಮೆ ಇರುವುದರಿಂದ ಶಾಲೆ ಆರಂಭಿಸಬೇಕಿದೆ. ಆ ದಿಸೆಯಲ್ಲಿ ಸರ್ಕಾರದಿಂದ ಆದೇಶ ಬರಲಿದ್ದು, ಸರ್ಕರದ ಆದೇಶದಂತೆ ಜಿಲ್ಲಾಧಿಕಾರಿ ಅವರು ಶಾಲೆ ಆರಂಭ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.
ಈ ಕುರಿತು ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಮತ್ತು ಕೆ.ಜಿ.ಬೋಪಯ್ಯ ಅವರು ಕೋವಿಡ್ ಆರೈಕೆ ಕೇಂದ್ರಕ್ಕೆ ಜಿಲ್ಲೆಯ ಹಲವು ವಸತಿ ಶಾಲೆಗಳನ್ನು ಬಳಸಿಕೊಳ್ಳಲಾಗಿದೆ. ಶಾಲೆಗಳು ಆರಂಭವಾಗುವುದರಿಂದ ಜಿಲ್ಲೆಯ ವಿವಿಧ ಸಮುದಾಯ ಭವನಗಳಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಕ್ಕೆ ಕ್ರಮವಹಿಸಬೇಕು. ಈಗಿರುವ ಕೋವಿಡ್ ಆರೈಕೆ ಕೇಂದ್ರವನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ಮಾಡಿದರು.
ನೆರೆಯ ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಕಂಡು ಬಂದಿರುವುದರಿಂದ ಜಿಲ್ಲೆಯಲ್ಲಿಯೂ ಸಹ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಸೂಚಿಸಿದರು.
ಕೋವಿಡ್ ನಿಯಂತ್ರಣ ಲಸಿಕೆಯು ಶೇ.83 ರಷ್ಟು ಪೂರ್ಣಗೊಂಡಿರುವುದರಿಂದ ಸೆಪ್ಟೆಂಬರ್, 25 ರೊಳಗೆ ಪ್ರಥಮ ಹಂತದ ಲಸಿಕೆ ನೀಡುವ ಅಭಿಯಾನವನ್ನು ಶೇ.100 ರಷ್ಟು ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಸೂಚಿಸಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಜಿಲ್ಲೆಯ ಎಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರುವಂತೆ ಅವರು ಹೇಳಿದರು.
ಜಿಲ್ಲೆಯ ಹಲವು ಗಿರಿಜನ ಹಾಡಿಗಳಲ್ಲಿ ಕೋವಿಡ್ ನಿಯಂತ್ರಣ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ ಎಂಬ ಬಗ್ಗೆ ಮಾಹಿತಿ ಇದ್ದು, ಈ ಸಂಬಂಧ ಗ್ರಾ.ಪಂ.ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯಪಡೆ ತಂಡದವರು ಕೋವಿಡ್ ಲಸಿಕೆಯ ಮಹತ್ವದ ಬಗ್ಗೆ ಮನವರಿಕೆ ಮಾಡಿ ಲಸಿಕೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ಮಾಡಿದರು.
ಗ್ರಾ.ಪಂ.ಮಟ್ಟದಲ್ಲಿ ಸಹಕಾರ ಪಡೆದು, ಹಾಡಿಯ ಜನರ ಮನವೊಲಿಸಿ ಶೇ.100 ರಷ್ಟು ಲಸಿಕೆ ಅಭಿಯಾನ ಯಶಸ್ಸುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಪ್ರಥಮ ಹಂತದ ಡೋಸ್ ಶೇ.100 ರಷ್ಟು ಪ್ರಗತಿ ಸಾಧಿಸಲು 48 ಸಾವಿರ ಲಸಿಕೆ ಬೇಕಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಪ್ರಥಮ ಹಂತದ ಲಸಿಕೆ ನೀಡಲು ಯಾವುದೇ ರೀತಿಯ ಕೊರತೆಯಿಲ್ಲ. ಆದ್ದರಿಂದ ಆದಷ್ಟು ಶೀಘ್ರ ಶೇ.100 ರಷ್ಟು ಸಾಧನೆ ಮಾಡುವಂತೆ ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಈಗಾಗಲೇ 13 ಸಾವಿರ ಲೀ ಸಾಮರ್ಥ್ಯದ ಆಮ್ಲಜನಕ ಘಟಕವಿದ್ದು, ಮತ್ತೊಂದು ಆಮ್ಲಜನಕ ಘಟಕ ನಿರ್ಮಾಣಗೊಳ್ಳುತ್ತಿದೆ. ಹಾಗೆಯೇ ಹಲವು ಸಂಘ ಸಂಸ್ಥೆಗಳು ಸಿಎಸ್‍ಆರ್ ನಿಧಿಯಡಿ ಆಮ್ಲಜನಕ ಘಟಕ ನಿರ್ಮಿಸಲು ಮುಂದೆ ಬರುತ್ತಿದ್ದಾರೆ. ಅದನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಕೋವಿಡ್-19 ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದ ಆಯುಷ್ ವೈದ್ಯರು, ಶ್ರುಶ್ರೂಷಕರು ಇತರರನ್ನು ಬಿಡುಗಡೆ ಮಾಡಿರುವುದು ಏಕೆ ಎಂದು ಪ್ರಶ್ನಿಸಿದರು.
ಕೋವಿಡ್-19 ಸಂದರ್ಭದಲ್ಲಿ ಆಯುಷ್ ವೈದ್ಯರು, ಶ್ರುಶ್ರೂಷಕರು, ಡಿ ದರ್ಜೆ ನೌಕರರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಈಗ ಕೆಲಸದಿಂದ ಬಿಡುಗಡೆ ಮಾಡಿರುವುದರಿಂದ ಬೀದಿಗೆ ಬಂದಿದ್ದಾರೆ. ಇವರನ್ನು ಮತ್ತೆ ಖಾಲಿ ಇರುವ ಕಡೆ ನಿಯೋಜಿಸುವಂತೆ ಶಾಸಕರು ಸಲಹೆ ಮಾಡಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಕೋವಿಡ್-19 ಸಂದರ್ಭದಲ್ಲಿ ಆಯುಷ್ ವೈದ್ಯರು, ಶ್ರುಶ್ರೂಷಕರು, ಡಿ ದರ್ಜೆ ನೌಕರರು, ಹೀಗೆ ಹಲವರು ದುಡಿದಿದ್ದಾರೆ. ಇವರಿಗೆ ವೇತನವನ್ನೇ ಪಾವತಿಸಿಲ್ಲ ಏಕೆ ಎಂದು ಪ್ರಶ್ನಿಸಿದರು. ಪ್ರಾಕೃತಿಕ ವಿಕೋಪದಡಿ ಕೋವಿಡ್ ನಿಯಂತ್ರಣಕ್ಕೆ ಅನುದಾನವಿದ್ದು, ಅದನ್ನು ಬಳಸುವಂತೆ ಶಾಸಕರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಹೊಸದಾಗಿ ಎಂಬಿಬಿಎಸ್ ವೈದ್ಯರು ನೇಮಕವಾಗಿದ್ದು, ಆಯುಷ್ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಿಗೆ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಹಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಾಗೂ ಸಾರ್ವಜನಿಕರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಪತ್ರ ಬರೆಯುವಾಗ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಲ್ಲಿ ಸರ್ಕಾರದ ಮಟ್ಟದಲ್ಲಿ ಪರಿಹರಿಸಲಾಗುವುದು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಸಚಿವರು ಸಲಹೆ ಮಾಡಿದರು.
ಪ್ರಾಕೃತಿಕ ವಿಕೋಪ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಮನೆ, ಬೆಳೆ ಹಾನಿಗೆ ಪರಿಹಾರ, ಜಾನುವಾರು ಹಾಗೂ ಮಾನವ ಪ್ರಾಣ ಹಾನಿಗೆ ಪರಿಹಾರ ವಿತರಿಸಲಾಗಿದೆಯೇ ಎಂದು ಅವರು ಮಾಹಿತಿ ಪಡೆದರು.
ಕಾಫಿ, ಕರಿಮೆಣಸು, ಅಡಿಕೆ ಮತ್ತಿತರ ಬೆಳೆ ಹಾನಿ ಸಂಬಂಧ ಮರು ಸಮೀಕ್ಷೆ ಮಾಡಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಟಿ.ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಹೈಸೊಡ್ಲೂರು ಗ್ರಾಮ ವ್ಯಾಪ್ತಿಯಲ್ಲಿ ಕಾಫಿ ಬೆಳೆ ಸಮೀಕ್ಷೆಯನ್ನು ಕೈಬಿಟ್ಟಿರುವುದು ಏಕೆ ಎಂದು ಪ್ರಶ್ನಿಸಿದರು. ಸಮೀಕ್ಷೆ ಮಾಡಿ ಸೇರ್ಪಡೆ ಮಾಡುವಂತೆ ಶಾಸಕರು ಸೂಚಿಸಿದರು.
ಹಾಗೆಯೇ ಸಂಪಾಜೆ, ಪೆರಾಜೆ, ಚೆಂಬು, ಕರಿಕೆ ಭಾಗದಲ್ಲಿ ಧಾರಾಕಾರ ಮಳೆಯಿಂದ ಅಡಿಕೆ ಬೆಳೆಗೆ ಹಾನಿಯಾಗಿದ್ದು, ಸರ್ವೇ ಮಾಡಿ ಬೆಳೆ ಹಾನಿಯ ಮಾಹಿತಿ ಒದಗಿಸುವಂತೆ ಸೂಚಿಸಿದರು. ಈ ಕುರಿತು ಧ್ವನಿ ಗೂಡಿಸಿದ ಎಂ.ಪಿ.ಅಪ್ಪಚ್ಚುರಂಜನ್ ಅವರು ಗರ್ವಾಲೆ, ಮುಟ್ಲು, ಶಾಂತಳ್ಳಿ, ಮಕ್ಕಂದೂರು, ಗಾಳಿಬೀಡು ವ್ಯಾಪ್ತಿಯಲ್ಲಿ ಕಳೆದ ವಾರ ವ್ಯಾಪಕ ಮಳೆಯಾಗಿದ್ದು, ಸಾಕಷ್ಟು ಬೆಳೆ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ಮಾಡಿ ಕೂಡಲೇ ವರದಿ ನೀಡುವಂತೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಕಳೆದ ನಾಲ್ಕು ವರ್ಷದಿಂದ ರೈತರು ಒಂದಲ್ಲ ಒಂದು ರೀತಿಯ ಪ್ರಾಕೃತಿಕ ವಿಕೋಪದಿಂದ ತೊಂದರೆಗೆ ಸಿಲುಕಿದ್ದರು. ಈ ಬಾರಿಯೂ ಸಹ ಬೆಳೆ ಹಾನಿಯಾಗಿದ್ದು, ಆದ್ದರಿಂದ ಸೂಕ್ತ ಪರಿಹಾರ ದೊರೆಯಬೇಕು ಎಂದು ಅವರು ಒತ್ತಾಯಿಸಿದರು. ಕಾಫಿ, ಅಡಿಕೆ, ಕರಿಮೆಣಸು ಬೆಳೆ ಸಂಬಂಧಿಸಿದಂತೆ ಮರು ಸರ್ವೇ ಆಗಬೇಕು ಎಂದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಜಿಲ್ಲೆಯಲ್ಲಿ ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆಯೇ ಎಂದು ಮಾಹಿತಿ ಪಡೆದರು.
ಮೈಸೂರು ಮತ್ತು ಹಾಸನ ಜಿಲ್ಲೆಯಿಂದ ಕೊಡಗಿಗೆ ತಲಾ 1500 ಟನ್ ರಸಗೊಬ್ಬರ ಪೂರೈಕೆಯಾಗಬೇಕಿದ್ದು, ಜಿಲ್ಲೆಯ ಸಹಕಾರ ಸಂಘಗಳಲ್ಲಿ ಬೇಡಿಕೆ ಇರುವ ರಸಗೊಬ್ಬರವನ್ನು ತರಿಸಿಕೊಳ್ಳುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಅಪ್ಪಚ್ಚು ರಂಜನ್ ಅವರು ಸೂಚಿಸಿದರು.
ಮಾದಾಪುರ, ಮಡಿಕೇರಿ, ಸೂರ್ಲಬ್ಬಿ ರಸ್ತೆ ಬದಿ ಚರಂಡಿ ನಿರ್ಮಿಸದೆ ರಸ್ತೆಯ ಮೇಲೆ ಮಳೆ ನೀರು ಹರಿಯುತ್ತಿದೆ. ರಸ್ತೆ ನಿರ್ವಹಣೆಗಾಗಿ ಹಣವಿದೆ. ಆದರೆ ಸಮರ್ಪಕವಾಗಿ ಬಳಸುತ್ತಿಲ್ಲ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಹೇಳಿದರು.
ಜಿಲ್ಲೆಯಲ್ಲಿ ವಸತಿ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಯಾಯ ತಾಲ್ಲೂಕು ವ್ಯಾಪ್ತಿಯಲ್ಲಿ ಜಾಗ ಕಾಯ್ದಿರಿಸಬೇಕು. ವಸತಿ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಥಮ ಆದ್ಯತೆಯಲ್ಲಿ ತಹಶೀಲ್ದಾರರು ಮತ್ತು ತಾ.ಪಂ.ಇಒಗಳು ಅಗತ್ಯ ಕ್ರಮವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಜಿಲ್ಲೆಯ 5 ತಾಲ್ಲೂಕುಗಳಲ್ಲಿ ನಿವೇಶನ ಹಂಚಿಕೆಗೆ ಜಾಗ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಬೇಕು. ಜಾಗ ಸಂಬಂಧಿಸಿದಂತೆ ಎಂಟು ಹತ್ತು ದಿನದಲ್ಲಿ ಜಾಗ ಕಾಯ್ದಿರಿಸಿ ಸಂಬಂಧಪಟ್ಟ ಗ್ರಾ.ಪಂ. ಅಥವಾ ತಾ.ಪಂ.ಗೆ ವರ್ಗಾಯಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ತಹಶೀಲ್ದಾರರಿಗೆ ಸಚಿವರು ಸೂಚಿಸಿದರು.
ಈ ಬಗ್ಗೆ ಸಂಬಂಧಪಟ್ಟ ತಾ.ಪಂ.ಇಒಗಳು ಮಾಹಿತಿ ನೀಡಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನಲ್ಲಿ 6,490 ನಿವೇಶನ ರಹಿತರು, ಮಡಿಕೇರಿ ತಾಲ್ಲೂಕಿನಲ್ಲಿ 2,290 ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 7,723 ನಿವೇಶನ ರಹಿತ ಕುಟುಂಬಗಳಿದ್ದು, ಇವರಿಗೆ ನಿವೇಶನ ಒದಗಿಸಬೇಕಿದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳಿದ್ದು, ಅವುಗಳನ್ನು ತಲುಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಉಚಿತ ನೋಂದಣಿಗೆ ಅವಕಾಶ ಮಾಡಿದ್ದು, ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಸಚಿವರು ಸೂಚಿಸಿದರು. ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ರೈತರ ಬಿಪಿಎಲ್ ಕುಟುಂಬ ವಿದ್ಯಾರ್ಥಿಗಳಿಗೆ ಸರ್ಕಾರ ಶಿಷ್ಯ ವೇತನ ನೀಡುತ್ತಿದ್ದು, ಈ ಬಗ್ಗೆ ವ್ಯಾಪಕ ಮಾಹಿತಿ ನೀಡುವಂತೆ ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಪ್ರಾಕೃತಿಕ ವಿಕೋಪ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ವೈದ್ಯಕೀಯ ಅಧೀಕ್ಷಕರಾದ ಡಾ.ಮಂಜುನಾಥ್, ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಕಾಫಿ ಮಂಡಳಿ ಉಪ ನಿರ್ದೇಶಕರಾದ ಶಿವಕುಮಾರ ಸ್ವಾಮಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ತಹಶೀಲ್ದಾರರಾದ ಮಹೇಶ್, ಗೋವಿಂದರಾಜು, ಯೋಗಾನಂದ, ತಾ.ಪಂ.ಇಒಗಳಾದ ಶೇಖರ್, ಅಪ್ಪಣ್ಣ ಅವರು ಮಾಹಿತಿ ನೀಡಿದರು.
ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ ಖಂಡು, ನಾನಾ ಇಲಾಖೆ ಅಧಿಕಾರಿಗಳು ಇದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: