ಮೈಸೂರು

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮ : ಶಾಸಕ ರಾಮದಾಸ್ ಮಾಹಿತಿ

ಮೈಸೂರು,ಸೆ.11:- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 71ನೇ ಜನ್ಮದಿನದ ಪ್ರಯುಕ್ತ ಸೆ.17ರಿಂದ ಅಕ್ಟೋಬರ್ 6ರವರೆಗೆ ಮೋದಿ ಯುಗ್ ಉತ್ಸವವನ್ನು ಆಚರಿಸಲು ನಿರ್ಧಾರಿಸಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸೆ.17ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಿದೆ. ಅದಕ್ಕಾಗಿ ಮೋದಿ@71-ಆಜಾದ್ @75-ಸ್ವರ್ಣ ಕೆ.ಆರ್ ಜೊತೆ ಕೃಷ್ಣರಾಜ ಕ್ಷೇತ್ರದಲ್ಲಿ ಸೆ.17ರಿಂದ ಒಂದು ವರ್ಷದಲ್ಲಿ ಹಲವು ಪ್ರಥಮಗಳಿಗೆ ಉದಾಹರಣೆಯಾಗಬೇಕೆಂದು ಯೋಜನೆ ತಯಾರಿಸಲಾಗಿದೆ. ಇವುಗಳನ್ನು ಅನುಷ್ಠಾನಗೊಳಿಸಲು ಹಾಗೂ ಸರ್ಕಾರಿ ಯೋಜನೆಗಳನ್ನು 62,818ಮನೆಗಳಿಗೆ ಮುಟ್ಟಿಸುವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಮೇಯರ್ ಸುನಂದ ಪಾಲನೇತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಬಿಜೆಪಿಯ ಮೈಸೂರು ಜಿಲ್ಲಾ ಉಸ್ತುವಾರಿ ಹಿರೇನ್ ಶಾ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಅವರು ಸೆ.17ರಂದು ವಿದ್ಯಾರಣ್ಯಪುರಂ ಒಂದನೇ ಮೇನ್ ನ 6ನೇ ಅಡ್ಡರಸ್ತೆಯಲ್ಲಿರುವ ಉದ್ಯಾನವನದಲ್ಲಿ  ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದರು.

20ದಿನಗಳ ಕಾರ್ಯಕ್ರಮದ ಸಮಾರೋಪ ಸಮಾರಂಭವು ಅ.6ರಂದು ನಡೆಯಲಿದ್ದು ಅಂದು ಮಧ್ಯಾಹ್ನ 3ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ 198ವಿವಿಧ ಯೋಜನೆಗಳ ಅನುಷ್ಠಾನದ ವಿವರಗಳನ್ನೊಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.

ಹಲವು ಪ್ರಥಮಗಳಲ್ಲಿ ಸ್ವರ್ಣ ಕೃಷ್ಣರಾಜ ಕ್ಷೇತ್ರ ಯೋಜನೆಗಳಡಿಯಲ್ಲಿ ಬೋರ್ ವೆಲ್ ರಹಿತ ಕ್ಷೇತ್ರ, ಸೇಫ್ಟಿ ರೋಡ್ ಕ್ಷೇತ್ರ, ಸ್ವಂತ ಸೂರು ಕ್ಷೇತ್ರ, ಸಂಪೂರ್ಣ ಲಸಿಕಾ ಕ್ಷೇತ್ರ, ಸರ್ಕಾರಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಕ್ಷೇತ್ರ , ಜನಸ್ಹೇಹಿ ಹಾಗೂ ಝೀರೋ ಅಪರಾಧ ಪೊಲೀಸ್ ಠಾಣೆ ನಿರ್ಮಾಣ ಮಾಡುವ ಯೋಜನೆ, ಅಂತ್ಯೋದಯ- ಸಂಘಟನೆ ಮತ್ತು ಸರ್ಕಾರದ ಮೂಲಕವಾಗಿ ಮನೆಬಾಗಿಲಿಗೆ ಸೇವೆ, ಸರ್ಕಾರದಲ್ಲಿ ಸಾರ್ವಜನಿಕ ಸಹಭಾಗಿತ್ವಕ್ಕಾಗಿ ಪ್ರತಿಯೊಂದು ಯೋಜನೆಗೆ ಸಾರ್ವಜನಿಕ ಸಮಿತಿಗಳ ರಚನೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮೈಸೂರು ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: