ಮೈಸೂರು

ನೇತ್ರಶಾಸ್ತ್ರ ವಿಭಾಗಕ್ಕೆ ಹೆಚ್ಚಿನ ಸಲಕರಣೆಗಳ ಸಮರ್ಪಣೆ

ಮೈಸೂರು,ಸೆ.11:-  ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ನೇತ್ರಶಾಸ್ತ್ರ ವಿಭಾಗಕ್ಕೆ 12 ಕ್ಕೂ ಹೆಚ್ಚು ಹೊಸ ಸಲಕರಣೆಗಳನ್ನು ಅರ್ಪಿಸುವ ಹಾಗೂ ನೇತ್ರ ವಿಜ್ಞಾನ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡವರಿಗೆ ಗೌರವಿಸುವ ಕಾರ್ಯಕ್ರಮವನ್ನು ಸೆಪ್ಟೆಂಬರ್ 13 ರಂದು ಮಧ್ಯಾಹ್ನ 3 ಗಂಟೆಗೆ ಕೆಆರ್ ಆಸ್ಪತ್ರೆಯ ಮೀಟಿಂಗ್ ಹಾಲ್‍ನಲ್ಲಿ ಆಯೋಜಿಸಲಾಗಿದೆ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಾದ ಡಾ. ಸಿ.ಪಿ. ನಂಜರಾಜ್ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  “ಮೈಸೂರು ಜಿಲ್ಲೆಯಿಂದ ಮಾತ್ರವಲ್ಲದೆ ನೆರೆಯ ಜಿಲ್ಲೆಗಳಿಂದಲೂ ಪ್ರತಿದಿನ ಸರಾಸರಿ 500 ಕ್ಕೂ ಹೆಚ್ಚು ಜನರು ನೇತ್ರಶಾಸ್ತ್ರ ವಿಭಾಗಕ್ಕೆ ಭೇಟಿ ನೀಡುತ್ತಿದ್ದಾರೆ. ನಾವು ಪ್ರತಿವರ್ಷ ಸುಮಾರು 5000 ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಿದ್ದೇವೆ. ದಿನಕ್ಕೆ 40 ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ನಡೆಸುತ್ತೇವೆ. ಜೊತೆಗೆ ಫಾಕೊಎಮಲ್ಸಿಫಿಕೇಶನ್ ಜೊತೆಗೆ ಮಡಚಬಹುದಾದ ಇಂಟ್ರಾಕ್ಯುಲರ್ ಲೆನ್ಸ್ ಅಳವಡಿಸುವಿಕೆಯನ್ನೂ ನಮ್ಮಲ್ಲಿ ಮಾಡಲಾಗುತ್ತಿದೆ. ಈ ಶಸ್ತ್ರಚಿಕಿತ್ಸೆಗಳ ಹೊರತಾಗಿ ನಾವು ಕಾರ್ನಿಯಲ್ ಟ್ರಾನ್ಸ್‍ಪ್ಲಾಂಟ್, ಟ್ರಾಬೆಕ್ಯುಲೆಕ್ಟಮಿ, ಡಕ್ರಿಯೋಸಿಸ್ಟೋರ್ಹಿನೋಸ್ಟೊಮಿ/ಡಕ್ರಿಯೋಸಿಸ್ಟೆಕ್ಟಮಿ, ಪ್ಯಾಟರಿಗುಯಿಮ್ ಎಕ್ಸಿಶನ್ ಮತ್ತು ಆಟೋಗ್ರಾಫ್ಟಿಂಗ್ ಮತ್ತು ಆಕ್ಯುಲೋಪ್ಲ್ಯಾಸ್ಟಿ ಮತ್ತು ಸ್ಕ್ವಿಂಟ್ ಶಸ್ತ್ರಚಿಕಿತ್ಸೆಗಳನ್ನು ಸಹ ಮಾಡುತ್ತೇವೆ. ಈ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ರೋಗಿಗಳಿಗೆ ಉಚಿತವಾಗಿ ಮಾಡಲಾಗುತ್ತದೆ. ಈ ಪ್ರಕ್ರಿಯೆಗಳು ಹೊರಗಡೆ ಮಾಡಿದರೆ ಸುಮಾರು 25-30 ಸಾವಿರ ರೂ. ವೆಚ್ಚ ತಗಲುತ್ತದೆ. ಈ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ಮಾಡಲು ನಮ್ಮಲ್ಲಿ 10 ಅರ್ಹ ಉತ್ಸಾಹಿ, ಅನುಭವಿ ನೇತ್ರ ತಜ್ಞರ ತಂಡವಿದೆ ” ಎಂದು ತಿಳಿಸಿದರು.

ಹೊಸದಾಗಿ ಬಂದಿರುವ ಸಲಕರಣೆಗಳ ಉಪಯೋಗಗಳ ಬಗ್ಗೆ ಸಂಕ್ಷಿಪ್ತವಾಗಿ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಸತೀಶ್ ಅವರು ಮಾಹಿತಿ ನೀಡಿದರು. “ಸ್ವಿಟ್ಜರ್ ಲ್ಯಾಂಡ್ ನಿಂದ ಒರ್ಟ್ಲಿ ಪೋಸ್ಟೀರಿಯರ್ ವಿಟ್ರಕ್ಟೊಮಿ ಮತ್ತು ಫೋಕೋ  ಯಂತ್ರವನ್ನು ಸುಮಾರು ರೂ. 50 ಲಕ್ಷ ವೆಚ್ಚದಲ್ಲಿ ತರಿಸಲಾಗಿದೆ. ಈ ಯಂತ್ರವನ್ನು ರೆಟಿನಲ್ ಶಸ್ತ್ರಚಿಕಿತ್ಸೆಗಳಿಗೆ ಬಳಸಲಾಗುತ್ತದೆ. ಇದರೊಂದಿಗೆ Ziess Nd YAG ಲೇಸರ್ ಕ್ಯಾಪ್ಸುಲೋಟಮಿ ಮತ್ತು ಇರಿಡೋಟಮಿ ಫೀಲ್ಡ್ ಅನಲೈಜರ್ ಅನ್ನು ಬಳಸಲಾಗುತ್ತದೆ. ಗ್ಲುಕೋಮಾ ಮೌಲ್ಯಮಾಪನ, ಜಿಸ್ ಆಪರೇಟಿಂಗ್ ಮೈಕ್ರೋಸ್ಕೋಪ್ ಮತ್ತು  HD ಕ್ಯಾಮೆರಾ ಸೇರಿದಂತೆ ಎಲ್ಲಾ ಶಸ್ತ್ರಚಿಕಿತ್ಸೆಗಳಿಗೆ ಇದನ್ನು ಬಳಸಲಾಗುತ್ತದೆ. ಫಿನ್ಲೆಂಡ್‍ನಿಂದ ಡಿಜಿಟಲ್ ಟೋನೊಮೀಟರ್ ಅನ್ನು ಗ್ಲುಕೋಮಾ ಮೌಲ್ಯಮಾಪನಕ್ಕೆ ಉಪಯೋಗಿಸಲಾಗುತ್ತದೆ ಎಂದು ತಿಳಿಸಿದರು.

ಕಣ್ಣಿನ ಬ್ಯಾಂಕ್ ಗೆ 40 ಲಕ್ಷ  “ನಮ್ಮ ವಿಭಾಗದೊಂದಿಗೆ ಕಣ್ಣಿನ ಬ್ಯಾಂಕ್ ಅನ್ನು ಜೋಡಿಸಿಕೊಳ್ಳಲಾಗಿದೆ.  ಇಲ್ಲಿ ದಾನಿಗಳಿಂದ ಕಣ್ಣುಗುಡ್ಡೆಗಳನ್ನು ಸಂಗ್ರಹಿಸಲಾಗುತ್ತದೆ. ಕಾರ್ನಿಯಲ್ ಕಸಿ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಇದನ್ನು ಬಳಸಲಾಗುತ್ತದೆ. ಈ ವರ್ಷ ಎನ್‍ಪಿಸಿಬಿಯಿಂದ ಕಣ್ಣಿನ ಬ್ಯಾಂಕ್ 40 ಲಕ್ಷ ರೂ. ಅನುದಾನ ದೊರೆತಿದೆ ಎಂದು   ಹೇಳಿದರು.

ಟಾಪರ್‍ ಗಳಿಗೆ ಗೌರವ

“ನಮ್ಮ ಸ್ನಾತಕೋತ್ತರ ವಿದ್ಯಾರ್ಥಿಗಳು RGUHS ನಡೆಸಿದ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ ವಿಭಾಗಕ್ಕೆ  ಮತ್ತು ಎಂಎಂಸಿ & DL ಗೆ ಚಿನ್ನದ ಪದಕಗಳನ್ನು ತಂದಿದ್ದಾರೆ. ನಮ್ಮಸಂಸ್ಥೆ 1965 ರಿಂದ ಸ್ನಾತಕೋತ್ತರ ಪದವಿ ನಡೆಸಿಕೊಂಡು ಬರುತ್ತಿದೆ. ಜೊತೆಗೆ ಸಮಾಜಕ್ಕೆ ದೃಷ್ಟಿ ನೀಡುವ ಯುವ ನೇತ್ರಶಾಸ್ತ್ರಜ್ಞರನ್ನು ಕೊಡುಗೆ ನೀಡುತ್ತಿದೆ. ಈ ನಿಟ್ಟಿನಲ್ಲಿ ನಾವು 2016 ರಿಂದ ನಮ್ಮ ಸಂಸ್ಥೆಯಿಂದ ಅತ್ಯುತ್ತಮ ಸಾಧನೆ ಮಾಡಿ ಹೊರಹೋಗುವ ಸ್ನಾತಕೋತ್ತರ ಪದವೀಧರರನ್ನು ಗೌರವಿಸುವ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ. ಪ್ರತಿ ವರ್ಷವೂ ನಮ್ಮ ಸಂಸ್ಥೆಯಿಂದ ನೇತ್ರಶಾಸ್ತ್ರದಲ್ಲಿ ಅಗ್ರಸ್ಥಾನ ಪಡೆದವರಿಗೆ ಪದಕ ಮತ್ತು ಮೆರಿಟ್ ಸರ್ಟಿಫಿಕೇಟ್ ನೀಡಿ ಗೌರವಿಸಲಾಗುತ್ತಿದೆ ಎಂದು   ಹೇಳಿದರು.

ಸಮಾರಂಭದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್. ಚಂದ್ರಶೇಖರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. (ಕೆ.ಸ್,ಎಸ್.ಎಚ್)

Leave a Reply

comments

Related Articles

error: