ಮೈಸೂರು

ಧಾರ್ಮಿಕ ಕಟ್ಟಡಗಳ ತೆರವು : ಸರ್ಕಾರ ವಿವೇಚನೆಯಿಂದ ವರ್ತಿಸಬೇಕು ;ಆಮ್ ಆದ್ಮಿ ಪಾರ್ಟಿ

ಮೈಸೂರು,ಸೆ.14:- ಮೈಸೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮವಾದ ಧಾರ್ಮಿಕ ಕಟ್ಟಡಗಳ ತೆರವು ಪ್ರಕರಣದಲ್ಲಿ ಹೆಚ್ಚಿನವು ಹಿಂದೂ ದೇವಸ್ಥಾನಗಳಾಗಿದ್ದು ಇದು ಬಿಜೆಪಿ ಪಕ್ಷಕ್ಕೆ ಬಿಸಿ ತುಪ್ಪವಾಗಿದೆ. ನ್ಯಾಯಾಂಗ ನಿಂದನೆ ತಪ್ಪಿಸಿಕೊಳ್ಳಲು ತೆರವಿಗೆ ಮೊದಲು ಸುಮ್ಮನೆ ಇದ್ದು, ನಂತರ ರಾಜಕೀಯ ಲಾಭಕ್ಕಾಗಿ ಮೈಸೂರಿನ ಸಂಸದರು ಬೊಬ್ಬೆ ಹೊಡೆಯಲು ಪ್ರಾರಂಭಿಸಿದ್ದಾರೆ. ಬಿಜೆಪಿಯು ಕೇವಲ ವೋಟ್‌ ಬ್ಯಾಂಕ್‌ಗಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ ಎಂಬುದು ದೇಗುಲ ಧ್ವಂಸ ಪ್ರಕರಣದಿಂದ ಸ್ಪಷ್ಟವಾಗಿದೆ. ಬಿಜೆಪಿ ಸರ್ಕಾರಕ್ಕೆ ಹಿಂದೂ ಧರ್ಮದ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ ಇಂತಹ ದುರ್ಘಟನೆಗೆ ಅವಕಾಶ ನೀಡುತ್ತಿರಲಿಲ್ಲ. ಸಂಸದ ಪ್ರತಾಪ್‌ ಸಿಂಹರವರು ಇದೇ ವಿಷಯವನ್ನು ಮುಂದಿಟ್ಟುಕೊಂಡು ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಸಂಸದರಾಗಿರುವ ಅವರು ನಂಜನಗೂಡು ಸಮೀಪದ ಮಹದೇವಮ್ಮ ದೇವಸ್ಥಾನ ಧ್ವಂಸವಾಗುವ ತನಕ ಸುಮ್ಮನಿದ್ದು ಈಗ ವಿರೋಧಿಸುತ್ತಿರುವ ನಾಟಕವಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಮೈಸೂರು ಜಿಲ್ಲೆಯ ಸಂಚಾಲಕಿ ಮಾಲವಿಕ ಗುಬ್ಬಿವಾಣಿ ಆರೋಪಿಸಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಅವರು ಹಿಂದೂ ದೇವಸ್ಥಾನಗಳ ಜೊತೆಗೆ ಚರ್ಚ್‌, ಮಸೀದಿಗಳನ್ನೂ ಒಡೆಯಬೇಕೆಂದು ಪ್ರತಾಪ್‌ ಸಿಂಹ ಆಗ್ರಹಿಸುತ್ತಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಪ್ರಬುದ್ಧ ಹೇಳಿಕೆ ನೀಡಿ, ಅಶಾಂತಿ ಸೃಷ್ಟಿಸಲು ಸಂಸದರು ಮುಂದಾಗುತ್ತಿರುವುದು ದುರದೃಷ್ಟಕರ.

ಸುಪ್ರೀಂ ಕೋರ್ಟ್‌ ಆದೇಶವನ್ನು ನೆಪ ಮಾಡಿಕೊಂಡು ಹಲವು ದಶಕಗಳಿಂದ ಇರುವಂತಹ ಮೈಸೂರಿನ ಧಾರ್ಮಿಕ ಕಟ್ಟಡಗಳನ್ನು ಕೆಡವಿ, ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವುದನ್ನು ಆಮ್‌ ಆದ್ಮಿ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ. ಈ ಕುರಿತು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸದೆ ಇರುವುದು ಸರ್ಕಾರದ ಅಸಮರ್ಥತೆಯನ್ನು ತೋರಿಸುತ್ತದೆ. ಒಟ್ಟಾರೆ ಬಿಜೆಪಿಯಿಂದ ಇದೊಂದು ರಾಜಕೀಯ ನಾಟಕ ಎಂದಿದ್ದಾರೆ.

ಅನುಮತಿ ಪಡೆಯದೇ ಅಕ್ರಮವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಕಟ್ಟಡಗಳ ಪ್ರತಿ ಪ್ರಕರಣವನ್ನು ಪರಿಶೀಲಿಸಿ, ಹಲವು ದಶಕಗಳಿಂದ ಇರುವಂತಹ ಹಾಗು ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗದಂತಹ ಧಾರ್ಮಿಕ ಕಟ್ಟಡಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: