ಕರ್ನಾಟಕಪ್ರಮುಖ ಸುದ್ದಿ

ಆಸ್ಕರ್ ಫರ್ನಾಂಡಿಸ್ ಅವರ ಪಾರ್ಥೀವ ಶರೀರ ಉಡುಪಿಗೆ ರವಾನೆ: ಸಿಎಂ ಬೊಮ್ಮಾಯಿ ಸಂತಾಪ

ಮಂಗಳೂರು,ಸೆ.14-ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ಮೃತದೇಹವನ್ನು ಇಂದು ಬೆಳಿಗ್ಗೆ ಮಂಗಳೂರಿನಿಂದ ಉಡುಪಿಗೆ ಕೊಂಡೊಯ್ಯಲಾಗಿದೆ.

ಮಂಗಳೂರಿನಿಂದ ಉಡುಪಿಗೆ ಆಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಬರಲಾಗಿದೆ. ಉಡುಪಿಯ ಶೋಕಮಾತಾ ಚರ್ಚ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕಾಂಗ್ರೆಸ್ ನಾಯಕರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ಚರ್ಚ್ ನಲ್ಲಿ ನಂತರ ಸಾರ್ವಜನಿಕ ಪ್ರಾರ್ಥನೆ ನಡೆಯಿತು.

ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಶಾಸಕ ಯು.ಟಿ.ಖಾದರ್, ಮುಖಂಡರಾದ ಮೊಯಿದ್ದೀನ್ ಭಾವ, ಜೆ.ಆರ್.ಲೊಬೊ, ಮಂಜುನಾಥ ಭಂಡಾರಿ ಸೇರಿದಂತೆ ಹಲವು ಗಣ್ಯರು ಚರ್ಚ್‌ಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಉಡುಪಿ ಧರ್ಮಪ್ರಾಂತ್ಯದ ಗುರುಗಳಾದ ಜೆರಾಲ್ಡ್ ಐಸಾಕ್ ಲೋಬೋ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಆಸ್ಕರ್ ಫರ್ನಾಂಡಿಸ್ ಕುಟುಂಬದ ಮೂಲ ಚರ್ಚ್ ಇದಾಗಿದೆ.

ಬಳಿಕ ಪಾರ್ಥಿವ ಶರೀರವನ್ನು ಬ್ರಹ್ಮಗಿರಿಯ ಆಸ್ಕರ್ ಅವರ ನಿವಾಸಕ್ಕೆ ತಂದು ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ಇಲ್ಲಿಯೂ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕಾಂಗ್ರೆಸ್ ಕಚೇರಿಗೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ಇಡಲಾಯಿತು. ದಾರಿಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಹೂವಿನ ಮಳೆಗರೆಯುವ ಮೂಲಕ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಮುಖ್ಯಮಂತ್ರಿ ಬೊಮ್ಮಾಯಿ ಸಂತಾಪ:

ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಕರ್ ಫರ್ನಾಂಡಿಸ್ ಶ್ರಮಜೀವಿಯಾಗಿದ್ದರು. ಕಲೆ, ಸಂಗೀತ ಪ್ರೇಮಿಯಾಗಿದ್ದ ಅವರು ಸ್ವತಃ ಮೌತ್ ಆರ್ಗನ್ ನ್ನು ನುಡಿಸುತ್ತಿದ್ದರು. ರಾಜಕೀಯದಲ್ಲಿ ಆಜಾತ ಶತ್ರುವಾಗಿದ್ದರು, ಅವರನ್ನು ಕಳೆದುಕೊಂಡು ಬಹಳ ದುಃಖತಪ್ತರಾಗಿದ್ದೇವೆ ಎಂದು ಕಂಬನಿ ಮಿಡಿದಿದ್ದಾರೆ.

ಆಸ್ಕರ್ ಫರ್ನಾಂಡಿಸ್ ಅವರು ಸಾಮಾನ್ಯ ಕುಟುಂಬದಿಂದ ಬಂದವರು. ಅವರ ಸೇವೆ ಮತ್ತು ನಿಷ್ಠೆಯಿಂದ ಈ ಮಟ್ಟಕ್ಕೆ ಬೆಳೆದವರು. ಕೇಂದ್ರ ಸಚಿವರಾಗಿ ಕರ್ನಾಟಕಕ್ಕೆ, ಕನ್ನಡಕ್ಕೆ ಸಾಕಷ್ಟು ಕೆಲಸ ಮಾಡಿದ್ದರು. ಮೃದು ಸ್ವಭಾವವನ್ನು ಹೊಂದಿದ್ದ ಅವರು ಸಜ್ಜನ, ಜನಪರ ರಾಜಕಾರಣಿ ಎಂದು ಶ್ಲಾಘಿಸಿದರು. (ಎಂ.ಎನ್)

Leave a Reply

comments

Related Articles

error: