ಕ್ರೀಡೆಪ್ರಮುಖ ಸುದ್ದಿವಿದೇಶ

ಐಪಿಎಲ್ ಟೂರ್ನಿ: ಬ್ಲೂ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿರುವ ಆರ್ ಸಿಬಿ ತಂಡ !

ದುಬೈ,ಸೆ.14-ಕೋವಿಡ್ ನಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಸೆ.19 ರಿಂದ ಯುಎಇ ನಲ್ಲಿ ಪುನರಾರಂಭವಾಗಲಿದೆ. ಈಗಾಗಲೇ ತಂಡಗಳು ಯುಎಇ ತಲುಪಿದ್ದು, ತಾಲೀಮಿನಲ್ಲಿ ಭಾಗಿಯಾಗಿವೆ.

ಸೆ.19 ರಂದು ಯುಎಇಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್‌ ಕಾದಾಟ ನಡೆಸಲಿದೆ. ಸೆ.20 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಆರ್ ಸಿಬಿ ತಂಡ ಬ್ಲೂ ಜೆರ್ಸಿಯೊಂದಿಗೆ ಕಣಕ್ಕೆ ಇಳಿಯಲಿದೆ.

ಕೋವಿಡ್‌-19 ಹೀರೋಗಳಿಗೆ ಹಾಗೂ ಫ್ರಂಟ್‌ ಲೈನ್‌ ವರ್ಕರ್ಸ್‌ಗೆ ಗೌರವ ಸಲ್ಲಿಸುವ ಸಲುವಾಗಿ ಆರ್ ಸಿಬಿ ತಂಡ ಬ್ಲೂ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.

ಈ ಬಗ್ಗೆ ಬೆಂಗಳೂರು ಫ್ರಾಂಚೈಸಿ ತನ್ನ ಅಧಿಕೃತ ಟ್ವಟರ್‌ನಲ್ಲಿ ತಿಳಿಸಿದೆ. “ಸೆ.20ರಂದು ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬ್ಲೂ ಜೆರ್ಸಿಯೊಂದಿಗೆ ಕಣಕ್ಕೆ ಇಳಿಯುತ್ತಿದೆ. ಆ ಮೂಲಕ ಕೋವಿಡ್‌-19 ಕಠಿಣ ಸಮಯದಲ್ಲಿ ಹೋರಾಟ ನಡೆಸುತ್ತಿರುವ ಫ್ರಂಟ್‌ಲೈನ್‌ ವರ್ಕರ್ಸ್‌ಗೆ ಆರ್‌ಸಿಬಿ ಗೌರವ ಸಲ್ಲಿಸಲಿದೆ,” ಎಂದು ಆರ್‌ಸಿಬಿ ವಿಡಿಯೋ ಸಹಿತ ಟ್ವೀಟ್‌ ಮಾಡಿದೆ.

ಬೆಂಗಳೂರು ಹಾಗೂ ದೇಶದ ಇತರೆ ನಗರಗಳಲ್ಲಿ ಆರೋಗ್ಯ ಮೂಲ ಸೌಕರ್ಯ ಹಾಗೂ ಆಮ್ಲಜನಕ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಫ್ರಾಂಚೈಸಿ ಆರ್ಥಿಕ ಸಹಾಯ ಮಾಡಲಿದೆ ಎಂದು ವಿರಾಟ್‌ ಕೊಹ್ಲಿ ಈ ವರ್ಷದ ಆರಂಭದಲ್ಲಿ ಘೋಷಣೆ ಮಾಡಿದ್ದರು. ಇದರ ಜೊತೆಗೆ, ಬೆಂಗಳೂರು ಹಾಗೂ ದೇಶದ ಇತರೆ ನಗರಗಳಲ್ಲಿ 100 ಆಕ್ಸಿಜನ್‌ ಯೂನಿಟ್‌ಗಳನ್ನು ಸ್ಥಾಪಿಸಲು ಗೀವ್‌ ಇಂಡಿಯಾ ಫೌಂಡೇಷನ್‌ ಜೊತೆಗೆ ಆರ್‌ಸಿಬಿ ಕೈ ಜೋಡಿಸಿತ್ತು.

ಅಷ್ಟೇ ಅಲ್ಲದೆ, 75 ಕೋಟಿ ರೂ ವೆಚ್ಚದಲ್ಲಿ 3 ಲಕ್ಷ ಲೀಟರ್‌ ಸ್ಯಾನಿಟೈಸರ್‌ ನೀಡುವ ಮೂಲಕ ಆರ್‌ಸಿಬಿಯ ಮಾತೃ ಸಂಸ್ಥೆ ಡಿಯಾಜಿಯೊ ಇಂಡಿಯಾ ಭಾರತೀಯ ಆಸ್ಪತ್ರೆಗಳಿಗೆ ನೆರವು ನೀಡಿತ್ತು.

2021ರ ಐಪಿಎಲ್‌ ಟೂರ್ನಿಯು ಏಪ್ರಿಲ್‌ ತಿಂಗಳಿನಲ್ಲಿಯೇ ಆರಂಭವಾಗಿತ್ತು. ಆದರೆ, ಬಯೋ-ಬಬಲ್‌ ಒಳಗಡೆ ಕೋವಿಡ್-19 ಪಾಸಿಟಿವ್‌ ಪ್ರಕರಣಗಳು ದಾಖಲಾಗಿದ್ದರಿಂದ ಮೇ ಮೊದಲ ವಾರ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದೀಗ ಸೆ.19 ರಿಂದ ಟೂರ್ನಿ ಆರಂಭವಾಗಲಿದೆ.

ಸೆ.24 ರಂದು ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಆರ್‌ಸಿಬಿ ಸೆಣಸಲಿದೆ. ಟೂರ್ನಿಯ ಇನ್ನುಳಿದ ಭಾಗದ 13 ಪಂದ್ಯಗಳು ದುಬೈ, 10 ಪಂದ್ಯಗಳು ಶಾರ್ಜಾ ಹಾಗೂ 8 ಪಂದ್ಯಗಳು ಅಬು ಧಾಬಿಯಲ್ಲಿ ನಡೆಯಲಿವೆ.

ಹದಿನಾಲ್ಕನೇ ಆವೃತ್ತಿಯ ಮೊದಲನೇ ಅವಧಿಯಲ್ಲಿ ಆರ್‌ಸಿಬಿ ಆಡಿರುವ 7 ಪಂದ್ಯಗಳಲ್ಲಿ ಎರಡರಲ್ಲಿ ಸೋತು ಇನ್ನುಳಿದ 5ರಲ್ಲಿ ಗೆಲುವು ಪಡೆದಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆದರೆ, 12 ಅಂಕಗಳನ್ನು ಸಂಪಾದಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಅಗ್ರ ಸ್ಥಾನವನ್ನು ಅಲಂಕರಿಸಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: