ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಹಿಂದಿ ದಿವಸ್ ಆಚರಣೆ ವಿರುದ್ಧ ಸಿಡಿದೆದ್ದ ಕನ್ನಡ ಚಿತ್ರರಂಗ

ಬೆಂಗಳೂರು,ಸೆ.14- ರಾಷ್ಟ್ರೀಯ ಹಿಂದಿ ದಿವಸ್ ವಿರುದ್ಧ ಕನ್ನಡಿಗರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಚಿತ್ರರಂಗದ ತಾರೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಹಿಂದಿ ಹೇರಿಕೆ ವಿರುದ್ಧ ಅಭಿಯಾನ ಶುರುವಾಗಿದೆ. ಈ ಅಭಿಯಾನಕ್ಕೆ ಸಾಕಷ್ಟು ಜನರ ಬೆಂಬಲ ಕೂಡ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿಂದು ಹಲವು ಕನ್ನಡಪರ ಸಂಘಟನೆಗಳು ಹಿಂದಿ ದಿವಸ್ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ.

ಹಿಂದಿ ಹೇರಿಕೆ ವಿರೋಧಿಸಿ ಡಾಲಿ ಧನಂಜಯ್ ಟ್ವೀಟ್ ಮಾಡಿ, `ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಹೇರಿಕೆ ಸಲ್ಲದು’ ಎಂದಿದ್ದಾರೆ.

‘ಕನ್ನಡ ಕನ್ನಡ ಕನ್ನಡವೆಂದುಲಿ ಕನ್ನಡ ನಾಡಿನ ಓ ಕಂದ ಕನ್ನಡ ನಾಡಿನ ಕೀರ್ತಿಯ ಹಬ್ಬಿಸು ಕನ್ನಡ ತಾಯಿಗೆ ಆನಂದ. (ಬಾಲ್ಯದಲ್ಲಿ ಓದಿದ ಪದ್ಯ) ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಹೇರಿಕೆ ಸಲ್ಲದು ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ, `ಹಿಂದಿಯನ್ನಾಗಲಿ, ಇಂಗ್ಲೀಷನ್ನಾಗಲಿ ಎಲ್ಲರೂ ಕಲಿಯಬೇಕು ಅನ್ನುವಂಥ ಅವಿವೇಕ ಮತ್ತೊಂದಿಲ್ಲ. ಎಲ್ಲರೂ ಇಂಗ್ಲೀಷ್ ಮತ್ತು ಹಿಂದಿ ಕಲಿಯಬೇಕೆನ್ನುವುದು ದಬ್ಬಾಳಿಕೆಯ ಸೂಚಕವಲ್ಲದೇ ಮತ್ತೇನು? ನಾವು ಇಂಗ್ಲೀಷ್ ದ್ವೇಷಿಗಳೂ ಅಲ್ಲ, ಹಿಂದಿ ದ್ವೇಷಿಗಳೂ ಅಲ್ಲ. ಎಲ್ಲರೂ ಎಲ್ಲವನ್ನೂ ಕಲಿಯಬೇಕು ಅನ್ನುವ ಬಲವಂತ ಬೇಡ- ಕುವೆಂಪು’ ಅವರ ಪೋಸ್ಟ್‌ನ್ನು ಹಾಕಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ, ಭಾರತದ ವೈಶಿಷ್ಟ್ಯತೆಯೇ “ವಿವಿಧತೆಯಲ್ಲಿ ಏಕತೆ” ಹಲವಾರು ವೇಶ,,ಭಾಷೆ,,ಭಕ್ಷ್ಯಭೋಜನ,, ಆಟನೋಟ,, ಸಂಸ್ಕೃತಿ,, ಸಂಪ್ರದಾಯ ಇದ್ದರೂ ಒಂದಾಗಿರುವ ಹೆಗ್ಗಳಿಕೆ ನಮ್ಮದು..ಹೀಗಿರುವಾಗ ಒಂದೇ ಭಾಷೆಯನ್ನು ಹೇರುವುದು ತಪ್ಪು ಅಭಿಪ್ರಾಯ..ಅವರವರ ರಾಜ್ಯದಲ್ಲಿ ಆ ಮಣ್ಣಿನ ಮಾತೃಭಾಷೆಗೆ ಪ್ರಥಮ ಸ್ಥಾನವಿರಬೇಕು #StopHindiImposition ಎಂದು ಟ್ವೀಟ್ ಮಾಡಿದ್ದಾರೆ.

ನಟ ಚೇತನ್ ಅವರು ಟ್ವೀಟ್ ಮಾಡಿ, ಸಂವಿಧಾನದ 343ನೇ ಆರ್ಟಿಕಲ್ ಪ್ರಕಾರ ಸೆ.14ನೇ ತಾರೀಖು ಹಿಂದಿ ದಿವಸ್ ಎಂದು ಪರಿಗಣಿಸಲಾಗಿದ್ದು, ಹಿಂದಿ ನಮ್ಮ ರಾಷ್ಟ್ರದ ಅಧಿಕೃತ ಭಾಷೆ ಎಂದು ಗುರುತಿಸಲಾಗುತ್ತಿದೆ. ಇಂತಹ ಭಾಷಾ ತಾರತಮ್ಯವನ್ನು ನಾವು ವಿರೋಧಿಸುತ್ತೇವೆ. ಹಿಂದಿ ಹೇರಿಕೆಯನ್ನು ನಿಲ್ಲಿಸಿ, 8ನೇ ವೇಳಾಪಟ್ಟಿಯಲ್ಲಿರುವ ಎಲ್ಲಾ 22 ಭಾಷೆಗಳನ್ನು ಕೂಡ ಅಧಿಕೃತ ಭಾಷೆ ಎಂದು ಗುರುತಿಸಬೇಕು ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕ ಕೃಷ್ಣ, ನಿಜ ವಿಷಯವ ತಿಳಿದು ಸರಿ ಮಾರ್ಗವ ನೀ ಹಿಡಿದು ಸುಳ್ಳಿನೆದುರು ಸಿಡಿದು ಸುಳ್ಳನ್ನು ಸದೆ ಬಡಿದು ನಡೆಯಿರೈ, ನುಗ್ಗುತ್ತಲಿ ಮಾರ್ಗವಿಹುದು ನಮ್ಮೆಲ್ಲರ ಮುಂದೆ ಕನ್ನಡಮ್ಮನಿರುವಳು ಬೆನ್ನಹಿಂದೆ ಕನ್ನಡ ನುಡಿ ಹಿಂದಿ ಬಿಡಿ ಎಂದು ಟ್ವೀಟ್ ಮಾಡಿದ್ದಾರೆ. (ಎಂ.ಎನ್)

 

Leave a Reply

comments

Related Articles

error: