ಕರ್ನಾಟಕಪ್ರಮುಖ ಸುದ್ದಿ

ಸೆ.30 ರಂದು ಮೆಗಾ ಲೋಕ್ ಅದಾಲತ್ ಸದುಪಯೋಗಕ್ಕೆ ನ್ಯಾ. ಶಿವಣ್ಣ ಕರೆ

ರಾಜ್ಯ(ಹಾಸನ) ಸೆ.15:- ರಾಷ್ಟ್ರೀಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದಂತೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸೆಪ್ಟೆಂಬರ್ 30 ರಂದು ಎಲ್ಲಾ ನ್ಯಾಯಾಲಯಗಳಲ್ಲಿ “ಮೆಗಾ ಲೋಕ ಅದಾಲತ್’ ಅನ್ನು ನಡೆಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಣ್ಣ ತಿಳಿಸಿದ್ದಾರೆ.

ನಗರದ ನೂತನ ನ್ಯಾಯಾಲಯದ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಿ ಸಂಧಾನದ ಪ್ರಕರಣಗಳಿಗೆ ಶೀಘ್ರವಾಗಿ ನ್ಯಾಯ ಪಡೆಯಲು ಲೋಕ್ ಅದಾಲತ್ ಸಹಕಾರಿಯಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ. ಶಿವಣ್ಣ ಮನವಿ ಮಾಡಿದರು.

ಹಾಸನದ ಎಲ್ಲಾ ನ್ಯಾಯಾಲಯಗಳಲ್ಲಿ ವಿದಧ ಒಟ್ಟು 78,158 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಬಾಕಿ ಇದ್ದು ರಾಜಿ ಸಂಧಾನಕ್ಕಾಗಿ ಎಲ್ಲಾ ರೀತಿಯ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನೊಳಗೊಂಡಂತೆ ಅರ್ಹ 1000 ಪ್ರಕರಣಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ನಡೆಸಲಾದ ಬೃಹತ್ ಲೋಕ್ ಅದಾಲತ್ ನಲ್ಲಿ ಒಟ್ಟು 9900 ಕ್ಕೂ ಹೆಚ್ಚು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲಾಗಿತ್ತು. ಅದರಂತೆಯೇ ವಕೀಲರ, ಕಕ್ಷಿಗಾರರ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಸುಮಾರು 5,000 ಕ್ಕೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಮಾಡುವ ಗುರಿಹೊಂದಲಾಗಿದೆ ಎಂದು ತಿಳಿಸಿದರು.

ಮೆಗಾ ಲೋಕ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಎಲ್ಲಾ ವಿಧದ ಸಿವಿಲ್ ವ್ಯಾಜ್ಯಗಳು, ಬಗೆಹರಿಸಬಹುದಾದ ಕ್ರಿಮಿನಲ್ ಪ್ರಕರಣಗಳು ಚೆಕ್ ಬೌನ್ಸ್ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಮೋಟಾರು ವಾಹನ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ಕಂದಾಯ ಪ್ರಕರಣಗಳು, ಜನನ ಮತ್ತು ಮರಣ ನೋಂದಣಿ ಪ್ರಕರಣಗಳು, ಜೀವನಾಂಶ ಪ್ರಕರಣಗಳು ಹಾಗೂ ಇನ್ನಿತರೆ ಲಘು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತು ವ್ಯಾಜ್ಯಪೂರ್ವ ಬ್ಯಾಂಕ್ ಸಾಲ ಮರುಪಾವತಿಯ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ ಎಂದು ನ್ಯಾಯಾಧೀಶರು ಹೇಳಿದರು.

ಪ್ರಕರಣಕ್ಕೆ ಸಂಬಂಧಪಟ್ಟ ಕಕ್ಷಿದಾರರು ವಕೀಲರ ಮೂಲಕ ಅಥವಾ ಖುದ್ದಾಗಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಕೊಳ್ಳಬಹುದಾಗಿದೆ. ಇಲ್ಲಿ ರಾಜೀ ತೀರ್ಮಾನವಾಗಿರುವ ಪ್ರಕರಣಗಳ ಬಗ್ಗೆ ಮತ್ತೆ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿಗೆ ಅವಕಾಶ ಇಲ್ಲ ಇದಕ್ಕಾಗಿ ತೀರ್ಪು ತ್ವರಿತವಾಗಿ ದೊರೆಯುತ್ತದೆ ಎಂದರು.

ರಾಜಿ ಪ್ರಕ್ರಿಯೆಯಿಂದ ನ್ಯಾಯಾಲಯದ ಸಮಯ ,ಹಣವನ್ನು ಉಳಿಸಬಹುದಾಗಿದ್ದು, ಉಭಯ ಕಕ್ಷಿದಾರರ ನಡುವಿನ ಬಾಂಧವ್ಯವು ವೃದ್ಧಿಸುವುದು. ಕಕ್ಷಿಗಾರರು ಲೋಕ್ ಅದಾಲತ್‍ನಲ್ಲಿ ಪಾಲ್ಗೊಳ್ಳುವ ಮೂಲಕ ಅನುಕೂಲವನ್ನು ಪಡೆಯಬಹುದು ಎಂದು ಅವರು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಎಸ್ ಮಂಜುನಾಥಮೂರ್ತಿ ಅವರು ಮಾತನಾಡಿ ಲೋಕ್ ಅದಾಲತ್ ಯಶ್ವಸಿಗೆ ವಕೀಲರ ಸಂಘ ಹಾಗೂ ಎಲ್ಲಾ ವಕೀಲರು ಕೈ ಜೋಡಿಸಿದ್ದಾರೆ. ಹೆಚ್ಚು ಪ್ರಕಕರಣಗಳು ವಿಲೇವಾರಿಯಾದಷ್ಟು ಕಕ್ಷಿದಾರರು ವಕೀಲರಿಗೂ ಅನುಕೂಲವಾಗುತ್ತದೆ ಹಾಗಾಗಿ ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಈ ಅವಕಾಶವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಅನೇಕ ಪ್ರಕರಣಗಳ ದಶಕಗಳಾದರೂ ಇತ್ಯಥವಾಗಿಲ್ಲ ಇಂತಹ ಪ್ರಕರಣಗಳು ರಾಜಿ ಮೂಲಕ ತೀರ್ಮಾನವಾದರೆ ಎರಡೂ ಕಡೆಯವರಿಗೂ ಅನುಕೂಲವಾಗುತ್ತದೆ ಎಂದು ಅವರು ಹೇಳೀದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿಲ್ಲಾ ಸತ್ರ ಹಾಗೂ ಸಿವಿಲ್ ನ್ಯಾಯಾಧೀಶರಾದ ಬಿ.ಕೆ.ರವಿಕಾಂತ ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: