ಕರ್ನಾಟಕಪ್ರಮುಖ ಸುದ್ದಿ

ಬಾಲ್ಯವಿವಾಹ ತಡೆಗೆ ಹೆಚ್ಚಿನ ಅರಿವು ಮೂಡಿಸಲು ಸೂಚನೆ

ರಾಜ್ಯ(ಹಾಸನ )ಸೆ.15:- ಮಹಿಳೆಯರು  ಮತ್ತು ಅಪ್ರಾಪ್ತ ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ ಬಾಲ್ಯವಿವಾಹಗಳನ್ನು ತಡೆಗಟ್ಟಲು ಹೆಚ್ಚಿನ ಅರಿವು ಮೂಡಿಸಿ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ಯಾಮಲ. ಎಸ್ .ಕುಂದರ್ ಅವರು ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿಂದು ಮಹಿಳಾ ದೌರ್ಜನ್ಯ ನಿಯಂತ್ರಣ ಕ್ರಮಗಳ ಕುರಿತು ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಕೇಂದ್ರಸರ್ಕಾರದ ಸಖಿ ಒನ್ ಸ್ಟಾಪ್ ಸೆಂಟರ್ ಯೋಜನೆಯು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು ಎಂದರು.

ಅಪ್ರಾಪ್ತ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಅಪಹರಣ ಹಾಗೂ ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿಬೇಕು ಎಂದರಲ್ಲದೆ ಜಲ್ಲೆಯಲ್ಲಿ 24 ದೌರ್ಜನ್ಯ ಪ್ರಕರಣಗಳಿದ್ದು, ಅವುಗಳನ್ನು ಪರಿಶೀಲಿಸಿ ಲೈಂಗಿಕವಾಗಿ ತೊಂದರೆಯಾಗಿದ್ದಲ್ಲಿ ಎಫ್.ಐ.ಆರ್ ದಾಖಲಿಸುವಂತೆ ತಿಳಿಸಿದರು.

ನಿಯಮಾನುಸಾರ ಮದುವೆ ವಯಸ್ಸನ್ನು ಹೆಣ್ಣು ಮಕ್ಕಳಿಗೆ 21 ವರ್ಷ ಗಂಡು ಮಕ್ಕಳಿಗೆ 25 ವರ್ಷ ನಿಗದಿಪಡಿಸುವುದರ ಜೊತೆಗೆ ಆಯೋಗ ಚಿಂತನೆ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಮದುವೆಗೆ ಮುನ್ನ ಗ್ರಾಮಪಂಚಾಯಿಂದ ಅನುಮತಿ ನೊಂದಣಿ ಕಡ್ಡಾಯ ಮಾಡಿದರೆ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ರೀತಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರು ಪೊಲೀಸ್ ಠಾಣೆಗಳಿಗೆ ದೂರನ್ನು ನೀಡಿದಾಗ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅವರು ಸೂಚನೆ ನೀಡಿದರು.

ಸ್ವಾಧಾರ ಕೇಂದ್ರದಿಂದ ಮಹಿಳೆಯರಿಗೆ ನೀಡುತ್ತಿರುವ ತರಬೇತಿ ಸಾಮರ್ಥ್ಯ ವನ್ನು ಹೆಚ್ಚಿಸಿ ಅಗತ್ಯವಿದ್ದರೆ ಹೊಸ ಕೇಂದ್ರ ಪ್ರಾರಂಭಕ್ಕೆ ಪ್ರಸ್ತಾವನೆ ಸಲ್ಲಿಸಿ. ಈ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಶ್ಯಾಮಲ ಎಸ್. ಕುಂದರ್ ಹೇಳಿದರು.

ಜಿಲ್ಲೆಯಲ್ಲಿ ಶೇಕಡ ನೂರರಷ್ಟು ಶೌಚಾಲಯ ನಿರ್ಮಾಣವಾಗಬೇಕು ಹಾಗೂ ಬಯಲು ಮಲ ವಿಸರ್ಜನೆ ಪದ್ಧತಿ ಅನುಸರಿಸದಂತೆ ಅರಿವು ಮೂಡಿಸಿ ಎಂದು ಹೇಳಿದರು.

ಮಹಿಳಾ ದೌರ್ಜನ್ಯ ಕುರಿತು ಬರುವ ಪ್ರಕರಣಗಳಿಗೆ ಸಾಂತ್ವನ ಹೇಳುವ ಮೂಲಕ ಸಮಸ್ಯೆ ಬಗೆಹರಿಸಿ ಎಂದರಲ್ಲದೆ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ತಳಸಮುದಾಯದ ಜನರಿಗೆ ಸೌಲಭ್ಯ ಕಲ್ಪಿಸಿ ಪೌಷ್ಠಿಕ ಆಹಾರ ನೀಡಲು ಕ್ರಮವಹಿಸುವಂತೆ ಸೂಚಿಸಿದರು.

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಲೈಂಗಿಕ ದೌರ್ಜನ್ಯ ನಿಯಂತ್ರಣಕ್ಕೆ ಆಂತರಿಕ ಸಮಿತಿಯನ್ನು ರಚಿಸಿಕೊಳ್ಳಬೇಕು ಹಾಗೂ ದೌರ್ಜನ್ಯಗಳು ನಡೆದಾಗ ಕಾನೂನಿನ ಮೂಲಕ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀನಿವಾಸ್ ಗೌಡ ಅವರು ಮಾತನಾಡಿ ಪೊಲೀಸ್ ಇಲಾಖೆ ವತಿಯಿಂದ ಸ್ಪಂದನಾ ಎಂಬ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಸಾಕಷ್ಟು ಅರಿವು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ.ಎ ಪರಮೇಶ್, ಉಪವಿಭಾಗಾಧಿಕಾರಿ ಬಿ.ಎ ಜಗದೀಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಕೃಷ್ಣಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಶಟ್ಟಪ್ಪನವರ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: