ಕ್ರೀಡೆಪ್ರಮುಖ ಸುದ್ದಿವಿದೇಶ

ಎಲ್ಲ ಮಾದರಿಯ ಕ್ರಿಕೆಟ್ ಗೆ ಲಸಿತ್ ಮಾಲಿಂಗ ವಿದಾಯ ಘೋಷಣೆ

ಕೊಲೊಂಬೊ,ಸೆ.15-ಶ್ರೀಲಂಕಾ ತಂಡದ ವೇಗದ ಬೌಲರ್ ಲಸಿತ್ ಮಾಲಿಂಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.  ಆ ಮೂಲಕ ಮಾಲಿಂಗರ ಎಲ್ಲ ಮಾದರಿಯ ಕ್ರಿಕೆಟ್ ಜೀವನ ಅಂತ್ಯವಾಯಿತು.

38 ವರ್ಷದ ಲಸಿತ್ ಮಾಲಿಂಗ ತಮ್ಮ ನಿವೃತ್ತಿ ನಿರ್ಧಾರವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಕಟಿಸಿದ್ದಾರೆ. `ನನ್ನ ಟಿ20 ಕ್ರಿಕೆಟ್‌ ಶೂಗಳನ್ನು ಕಳಚುತ್ತಿದ್ದು, ಆ ಮೂಲಕ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ! ನನ್ನ ವೃತ್ತಿ ಜೀವನದ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಇಷ್ಟು ವರ್ಷಗಳ ನನ್ನ ಕ್ರಿಕೆಟ್‌ ವೃತ್ತಿ ಜೀವನದ ಅನುಭವವನ್ನು ಯುವ ಕ್ರಿಕೆಟಿಗರ ಬಳಿ ಹಂಚಿಕೊಳ್ಳಲು ಎದುರು ನೋಡುತ್ತಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಮುಂದಿನ ವರ್ಷಗಳಲ್ಲಿ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ ಮಾಲಿಂಗ ಶ್ರೀಲಂಕಾ ಕ್ರಿಕೆಟ್‌ ಮಂಡಳಿ, ಸಹ ಆಟಗಾರರು, ಮುಂಬೈ ಇಂಡಿಯನ್ಸ್ ಸೇರಿದಂತೆ ಎಲ್ಲಾ ಫ್ರಾಂಚೈಸಿಗಳು ಧನ್ಯವಾದ ಅರ್ಪಿಸಿದ್ದಾರೆ.

ನನ್ನ ಟಿ20 ಕ್ರಿಕೆಟ್‌ನ ಶೂಗಳಿಗೆ ಶೇ. 100 ರಷ್ಟು ವಿಶ್ರಾಂತಿ ನೀಡುತ್ತೇನೆ. ಆದರೆ, ಕ್ರಿಕೆಟ್‌ ಮೇಲಿರುವ ನನ್ನ ಪ್ರೀತಿ ಎಂದಿಗೂ ಮುಗಿಯುವುದಿಲ್ಲ ಎಂದು ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಮಾಲಿಂಗ ಹೇಳಿದ್ದಾರೆ.

ಯಾರ್ಕರ್ ಎಸೆತಗಳ ಮೂಲಕ ಗಮನ ಸೆಳೆದಿದ್ದ ಘಟಾನುಘಟಿ ಬ್ಯಾಟ್ಸ್ ಮನ್ ಗಳನ್ನು ಕಂಗೆಡಿಸಿದ್ದ ಮಾಲಿಂಗ ಈ ಹಿಂದೆ ಲಸಿತ್‌ ಮಾಲಿಂಗ ಟೆಸ್ಟ್ ಹಾಗೂ ಓಡಿಐ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2020ರಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ಮಾಲಿಂಗ ಶ್ರೀಲಂಕಾ ಪರ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದ್ದರು. ಹಿರಿಯ ವೇಗಿ ಶ್ರೀಲಂಕಾ ಪರ ಎಲ್ಲಾ ಸ್ವರೂಪದಲ್ಲಿಯೂ 546 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಲಸಿತ್‌ ಮಾಲಿಂಗ (107 ವಿಕೆಟ್‌), ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ವೇಗಿಯಾಗಿದ್ದಾರೆ. ಇದರಲ್ಲಿ 6ಕ್ಕೆ5 ವಿಕೆಟ್‌ ಅವರ ಶ್ರೇಷ್ಠ ಪ್ರದರ್ಶನವಾಗಿದೆ. ಅಲ್ಲದೆ, ಎರಡು ಬಾರಿ ಟಿ20 ಕ್ರಿಕೆಟ್‌ ಹ್ಯಾಟ್ರಿಕ್‌ ಹಾಗೂ ಮೂರು ಬಾರಿ ಓಡಿಐ ಕ್ರಿಕೆಟ್‌ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಇನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ 122 ಪಂದ್ಯಗಳಾಡಿರುವ ಅವರು 170 ವಿಕೆಟ್‌ಗಳನ್ನು ಉರುಳಿಸಿದ್ದು, ಹಲವು ಬಾರಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಗಳನ್ನು ಲಂಕಾ ವೇಗಿ ಬಾಚಿಕೊಂಡಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: