ಕರ್ನಾಟಕಪ್ರಮುಖ ಸುದ್ದಿ

ಧಾರ್ಮಿಕ ಕಟ್ಟಡಗಳ ತೆರವು ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟ ಶಿವಮೊಗ್ಗ ಜಿಲ್ಲಾಡಳಿತ: ದೇವಾಲಯಗಳ ಸ್ಥಳಾಂತರ, ಸಕ್ರಮೀಕರಣಕ್ಕೆ ಆದ್ಯತೆ

ಶಿವಮೊಗ್ಗ,ಸೆ.15-ಧಾರ್ಮಿಕ ಕಟ್ಟಡಗಳ ತೆರವು ವಿಷಯದಲ್ಲಿ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಶಿವಮೊಗ್ಗ ಜಿಲ್ಲಾಡಳಿತ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ. ಧಾರ್ಮಿಕ ಕೇಂದ್ರಗಳ ತೆರವು ವಿಚಾರದಲ್ಲಿ ರಾಜ್ಯದಲ್ಲಿ ಮಾದರಿ ಕೆಲಸ ಮಾಡುವತ್ತ ಶಿವಮೊಗ್ಗ ಜಿಲ್ಲಾಡಳಿತ ಮುಂದಾಗಿದೆ.

ಧಾರ್ಮಿಕ ಕೇಂದ್ರಗಳ ತೆರವಿಗಿಂತಲೂ ಸ್ಥಳಾಂತರ ಹಾಗೂ ಸಕ್ರಮೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ತೀರಾ ಅಗತ್ಯಬಿದ್ದಲ್ಲಿ‌ ಮಾತ್ರ ಧಾರ್ಮಿಕ ಕೇಂದ್ರಗಳ ತೆರವಿಗೆ ತೀರ್ಮಾನಿಸಿದೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯಾದ್ಯಂತ ಸದ್ದಿಲ್ಲದೆ ಧಾರ್ಮಿಕ ಕೇಂದ್ರಗಳ ಸಕ್ರಮೀಕರಣ ನಡೆದಿದೆ. ಇನ್ನು ಕೆಲ ಧಾರ್ಮಿಕ‌ ಕೇಂದ್ರಗಳನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ಧಾರ್ಮಿಕ‌ ಕೇಂದ್ರಗಳ ವ್ಯವಸ್ಥಾಪನಾ ಸಮಿತಿಯ ಮನವೊಲಿಸಿ ದೇವಾಲಯಗಳ ಸ್ಥಳಾಂತರ ನಡೆಸಲಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ಸಕ್ರಮೀಕರಣ ಮಾಡಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯ ತಾಲೂಕುವಾರು ಧಾರ್ಮಿಕ ಕೇಂದ್ರಗಳ ಬಗ್ಗೆ ಮಾಹಿತಿ:

ಹೊಸನಗರ: ನೆಲಸಮ-1, ಸ್ಥಳಾಂತರ-4 ಸಕ್ರಮೀಕರಣ- 69, ಶಿವಮೊಗ್ಗ: ನೆಲಸಮ-2, ಸ್ಥಳಾಂತರ-3, ಸಕ್ರಮೀಕರಣ-34, ಭದ್ರಾವತಿ: ನೆಲಸಮ-4, ಸ್ಥಳಾಂತರ-33, ಸಕ್ರಮೀಕರಣ-22, ಶಿಕಾರಿಪುರ: ನೆಲಸಮ-3, ಸ್ಥಳಾಂತರ-1, ಸಕ್ರಮೀಕರಣ 83, ತೀರ್ಥಹಳ್ಳಿ: ನೆಲಸಮ-ಶೂನ್ಯ, ಸ್ಥಳಾಂತರ-2, ಸಕ್ರಮೀಕರಣ 51, ಸಾಗರ: ನೆಲಸಮ-8, ಸ್ಥಳಾಂತರ-2, ಸಕ್ರಮೀಕರಣ-101, ಸೊರಬ: ನೆಲಸಮ-ಶೂನ್ಯ, ಸ್ಥಳಾಂತರ-6, ಸಕ್ರಮೀಕರಣ 25.

ಸುಪ್ರೀಂ ಕೋರ್ಟ್ ಆದೇಶದಂತೆ ಧಾರ್ಮಿಕ ಕೇಂದ್ರಗಳ ತೆರವಿಗೆ ಆಯಾ ಜಿಲ್ಲಾಡಳಿತಗಳು ಮುಂದಾಗಿದ್ದು, ಇದರಿಂದ ರಾಜ್ಯದೆಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಅದರಲ್ಲೂ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹರದನಹಳ್ಳಿ ಬಳಿಯ ಹುಚ್ಚಗಣಿ ಗ್ರಾಮದ ಆದಿಶಕ್ತಿ ಮಹದೇವಮ್ಮ ದೇವಸ್ಥಾನವನ್ನು ನೆಲಸಮ ಮಾಡಿದ್ದನ್ನು ವಿರೋಧಿಸಿ ಪತ್ರಿಭಟನೆಗಳು ನಡೆದವು. ಅಲ್ಲದೆ, ಮೈಸೂರು ನಗರದ ಅಗ್ರಹಾರದಲ್ಲಿರುವ ನೂರೊಂದು ಗಣಪತಿ ದೇವಸ್ಥಾನ ಹಾಗೂ ದೇವಾಲಯಗಳ ಉಳಿವಿಗಾಗಿ ಈಗಲೂ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈ ನಡುವೆ ಶಿವಮೊಗ್ಗ ಜಿಲ್ಲಾಡಳಿತ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿರುವುದು ಮೆಚ್ಚುಗೆಗೆ ಕಾರಣವಾಗಿದೆ.

ಸದ್ಯ ಈ ಕುರಿತು ಸರ್ಕಾರ ರಾಜ್ಯದ ಯಾವುದೇ ಭಾಗದಲ್ಲಿಯೂ ದಿಢೀರನೆ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಪರಿಸ್ಥಿತಿ ಅವಲೋಕಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಸಂಪುಟದಲ್ಲಿ ಸಮಗ್ರವಾಗಿ ಚರ್ಚಿಸುವುದಾಗಿ ಹೇಳಿದೆ.

 

Leave a Reply

comments

Related Articles

error: