ಮೈಸೂರು

ಅವಕಾಶ ವಂಚಿತ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಅಗತ್ಯ : ಡಾ.ಎಸ್‌.ಪಿ.ಆದರ್ಶ್

ಮೈಸೂರು ,ಸೆ. 15 :- ನಗರದ ವಿಜಯನಗರ ಬಡಾವಣೆಯ ಸವಿನೆನಪು ಫೌಂಡೇಶನ್‌ ನ ಅನಾಥಾಶ್ರಮದಲ್ಲಿ ಇಂದು ವರನಟ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎಂ.ರಾಮೇಗೌಡ ಅವರ ಜನ್ಮ ದಿನವನ್ನು ಅನಾಥಾಶ್ರಮದ ಮಕ್ಕಳಿಗೆ ಶಾಲಾ ಕಾಲೇಜಿನ ಸಮವಸ್ತ್ರ ಹಾಗೂ ಬ್ಯಾಗ್, ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರದ ಅನ್ನಪೂರ್ಣ ಫಿಜಿಯೋಥೆರಪಿ ಕ್ಲಿನಕ್‌ ನ ವೈದ್ಯಾಧಿಕಾರಿಗಳಾದ ಎಸ್.ಪಿ.ಆದರ್ಶ್, ಮಕ್ಕಳಿಗೆ ಪುಸ್ತಕ ವಿತರಿಸಿ ಮಾತನಾಡಿ ಇಂದು ನಾವು ಸಮಾಜದಲ್ಲಿ ಅವಕಾಶ ವಂಚಿತ ಮಕ್ಕಳಿಗೆ ಶಿಕ್ಷಣ ಸೌಲಭ್ಯವನ್ನು ಸಮಾನವಾಗಿ ದೊರಕಿಸುವಲ್ಲಿ ನೆರವಾಗಬೇಕು. ಹಾಗಾದಾಗ ಎಲ್ಲರೂ ಶಿಕ್ಷಣವನ್ನು ಕಲಿಯಲು ಸಾಧ್ಯವಾಗುತ್ತದೆ. ಕಲಿಕೆ ಹಾಗೂ ಪರಿಶ್ರಮದಿಂದ ವಿದ್ಯಾಭ್ಯಾಸವನ್ನು ಮುಂದುವರೆಸಬಹುದು. ವಿದ್ಯಾಭ್ಯಾಸ ಮುಂದುವರಿಸಿದಾಗ ಮಕ್ಕಳ ಭವಿಷ್ಯ ಪ್ರಜ್ವಲಗೊಳ್ಳುತ್ತದೆ.  ದೇಶದ ಅಭಿವೃದ್ಧಿಯೂ ಕೂಡ ಪ್ರಗತಿಯತ್ತ ಸಾಗಲು ಕಾರಣವಾಗುತ್ತದೆ. ಶಿಕ್ಷಣವು ಜೀವನ ರೂಪಿಸುವುದರ ಜೊತೆಗೆ ಜೀವನದ ಮೌಲ್ಯಗಳನ್ನು ತಿಳಿಸುತ್ತದೆಂದು ಮಕ್ಕಳಿಗೆ ತಿಳಿ ಹೇಳಿದರು.

ಕೃಷ್ಣ ಪ್ಯೂಚರ್ ಪ್ರಾಪರ್ಟಿಸ್‌ನ ಮಾಲೀಕರು ಹಾಗೂ ಯುವ ಉದ್ಯಮಿ ಸಿ.ಕೃಷ್ಣಗೌಡ  ಮಾತನಾಡಿ ಮಕ್ಕಳಲ್ಲಿ ಕ್ರಿಯಾಶೀಲತೆ ಮೊಳೆಯುವಂತೆ ಮಾಡುವ ಆದರ್ಶ ವ್ಯಕ್ತಿಗಳು ಇಂದು ನಮ್ಮ ಮುಂದೆ ಇರುವ ತಂದೆ, ತಾಯಿ ಹಾಗೂ ಶಿಕ್ಷಕರು. ಈ ಮೂರು ಜನ ಶ್ರದ್ಧೆಯಿಂದ ದುಡಿದಾಗ ಮಾತ್ರ ಸಮಾಜ ಉದ್ಧಾರ ಆಗಲು ಸಾಧ್ಯ ಎಂದು ಅಭಿಪ್ರಾಯಿಸಿ ಯುವಕರು ಯಾವಾಗಲೂ ಒಳ್ಳೆಯ ನಡತೆ, ಒಳ್ಳೆಯ ಅಭ್ಯಾಸ, ಒಳ್ಳೆಯ ಗುಣಗಳನ್ನು ರೂಢಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಬೇಕೆಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ರಾಮೇಗೌಡ  ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಬಂಧ ವ್ಯಾಪಾರಿ ಮನೋಭಾವದಿಂದ ಕೂಡಿದೆ. ಇದು ನಿಲ್ಲುವಂತಾಗಬೇಕು. ಸರಿಯಾದ ಶಿಕ್ಷಣ ನಮ್ಮ ಯುವಕರಲ್ಲಿ ಆತ್ಮ ಗೌರವ ಹಾಗೂ ಘನತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ವಿದ್ಯಾವಂತರನ್ನಾಗಿ ಮಕ್ಕಳನ್ನು ರೂಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ವೇದಿಕೆಯಲ್ಲಿ ಉಪನ್ಯಾಸಕರಾದ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ, ಸವಿನೆನಪು ಫೌಂಡೇಷನ್‌ನ ಮಾನಸ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸವಿನೆನಪು ಫೌಂಡೇಷನ್ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: