ಮೈಸೂರು

ಕೆಆರ್ ಎಸ್ ಬಳಿ ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪಿಸಬೇಕು : ಎಂ.ಲಕ್ಷ್ಮಣ್

ಮೈಸೂರು,ಸೆ.15:-ಕೆಆರ್‌ಎಸ್‌ ಜಲಾಶಯ ನಿರ್ಮಾಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ವಿಶ್ವೇಶ್ವರಯ್ಯ ಅವರ ಪಾತ್ರ ಮಹತ್ವದ್ದು. ಅತ್ಯಂತ ಕಡಿಮೆ ಅವಧಿಯಲ್ಲಿ ಅಣೆಕಟ್ಟೆಯನ್ನು ನಿರ್ಮಿಸಲು ವಿಶ್ವೇಶ್ವರಯ್ಯ ಕಾರಣ. ಹೀಗಾಗಿ, ಅಲ್ಲಿ ಅವರಿಬ್ಬರ ಪ್ರತಿಮೆಗಳನ್ನೂ ಸ್ಥಾಪಿಸಬೇಕು ಎಂದು ಇಂಜಿನಿಯರ್‌ ಗಳ ಸಂಸ್ಥೆಯ ರಾಜ್ಯ ಘಟಕದ ನಿಯೋಜಿತ ಅಧ್ಯಕ್ಷ ಎಂ.ಲಕ್ಷ್ಮಣ್‌ ತಿಳಿಸಿದರು.

ನಗರದ ಇಂಜಿನಿಯರ್‌ ಗಳ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ‘54ನೇ ಇಂಜಿನಿಯರ್‌ ಗಳ ದಿನ ಹಾಗೂ ಸರ್‌ ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ’ಯಲ್ಲಿ ಸರ್ ಎಂ.ವಿ.ಪುತ್ಥಳಿಗೆ ಪುಷ್ಪಾರ್ಚನೆ ಗೈದು ಗೌರವ ಸಮರ್ಪಿಸಿ ಮಾತನಾಡಿದರು. ಕೆ ಆರ್ ಎಸ್‌ ಅಣೆಕಟ್ಟೆ ಬಳಿ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿದರು.

ಕೆಆರ್‌ಎಸ್‌ ಜಲಾಶಯಕ್ಕಿಂತಲೂ ದೊಡ್ಡ ಅಣೆಕಟ್ಟೆಗಳು ರಾಜ್ಯದಲ್ಲಿವೆ. ಆದರೆ, 3.5 ಕೋಟಿ ಜನರಿಗೆ ನೀರು ಪೂರೈಸುತ್ತಿರುವ ಈ ಅಣೆಕಟ್ಟೆಗೆ ಹೆಚ್ಚಿನ ಮಹತ್ವವಿದೆ. ಬೆಂಗಳೂರಿಗರಿಗೆ ಕುಡಿಯುವ ನೀರು ಪೂರೈಕೆಗೆ ಕೆಆರ್‌ಎಸ್‌ ಮೂಲ ಆಧಾರ ಎಂದರು.

ವಿಎಸ್‌ಟಿ ಟಿಲ್ಲರ್ಸ್‌ ಅಂಡ್‌ ಟ್ರಾಕ್ಟರ್ಸ್‌ನ ಸತ್ಯೇಂದ್ರ ಒ ದೇವರಕೊಂಡೆ ,ಇಂಜಿನಿಯರ್‌ಗಳ ಸಂಸ್ಥೆಯ ಮೈಸೂರು ವಿಭಾಗದ ಅಧ್ಯಕ್ಷ ಡಾ.ಆರ್‌.ಸುರೇಶ್‌, ನಿಯೋಜಿತ ಅಧ್ಯಕ್ಷ ಬಿ.ಎಸ್‌.ಪ್ರಭಾಕರ್‌, ಸಂಚಾಲಕ ಕೆ.ಬಿ.ಭಾಸ್ಕರ್‌ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: