ದೇಶಪ್ರಮುಖ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: ಶುಭಕೋರಿದ ಗಣ್ಯರು

ನವದೆಹಲಿ,ಸೆ.17-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಗಣ್ಯರು ಮೋದಿ ಅವರಿಗೆ ಶುಭಕೋರಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ನಾನು ನಿಮ್ಮ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಬಯಸುತ್ತೇನೆ. ನಿಮ್ಮಲ್ಲಿರುವ ಸೇವಾ ಮನೋಭಾವದಿಂದ ರಾಷ್ಟ್ರ ಸೇವೆಯನ್ನು ಮುಂದುವರೆಸಿ ಎಂದು ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ.

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಟ್ವೀಟ್ ಮಾಡಿ, ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರಿಗೆ ಜನ್ಮದಿನದ ಶುಭಾಶಯಗಳು. ಅವರ ಅಸಾಧಾರಣ ದೃಷ್ಟಿಕೋನ, ಅನುಕರಣೀಯ ನಾಯಕತ್ವ ಮತ್ತು ಸಮರ್ಪಿತ ಸೇವೆಯು ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿದೆ. ದೇವರು ಅವರಿಗೆ ಆರೋಗ್ಯ, ಆಯಸ್ಸು, ಸಂತೋಷವನ್ನು ನೀಡಲಿ ಎಂದು ತಿಳಿಸಿದ್ದಾರೆ.

ಗೃಹ ಸಚಿವ ಅಮಿತ್‌ ಶಾ, ಕೊಂಚ ಸಮಯದಲ್ಲೇ ಪ್ರಧಾನಿ ಮೋದಿ ದೇಶವನ್ನು ಅಭಿವೃದ್ದಿಯ ಪಥಕ್ಕೆ ತಂದಿದ್ದಾರೆ ಅವರಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹ್ಯಾಪಿ ಬರ್ತ್‍ಡೆ ಮೋದಿ ಜೀ ಎಂದು ಟ್ವೀಟ್ ಮಾಡಿದ್ದಾರೆ.

ಇವರಷ್ಟೆ ಅಲ್ಲದೆ, ಮಾಜಿ ಕ್ರಿಕೆಟಿಗರಾದ ವಿವಿಎಸ್ ಲಕ್ಷ್ಮಣ್, ಗೌತಮ್, ಸಂಸದ ತೇಜಸ್ವಿ ಸೂರ್ಯ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಶುಭಾಶಯ ಕೋರಿದ್ದಾರೆ.

ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17, 1950 ರಂದು ಗುಜರಾತಿನ ಒಂದು ಸಣ್ಣ ಪಟ್ಟಣದಲ್ಲಿ ಜನಿಸಿದರು. ಬಡ ಕುಟುಂಬದಲ್ಲಿ ಜನಿಸಿದ ಅವರು ಆರಂಭದಲ್ಲಿ ಸಂಕಷ್ಟಗಳನ್ನು ಎದುರಿಸಿದರು. ಚಹಾ ಮಾರಿ ಜೀವನ ನಡೆಸುತ್ತಿದ್ದರು. ಬಳಿಕ ಆರ್‌ಎಸ್‌ಎಸ್‌ ಸೇರಿದ ಅವರು ದೇಶ ಪರ್ಯಟನೆ ಮಾಡಿದ್ದರು. ಬಳಿಕ ಆರ್‌ಎಸ್‌ಎಸ್‌ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿ ಬಳಿಕ ಐತಿಹಾಸಿಕವಾಗಿ ಭಾರತದ ಪ್ರಧಾನ ಮಂತ್ರಿಯಾಗಿ ಹೊರಹೊಮ್ಮಿದರು. ಮೋದಿಯವರ ಜನ್ಮ ದಿನವನ್ನು ಐತಿಹಾಸಿಕ ದಿನವನ್ನಾಗಿಸಲು ಬಿಜೆಪಿ ಇಂದಿನಿಂದ 21 ದಿನಗಳ ಕಾಲ ‘ಸೇವೆ ಮತ್ತು ಸಮರ್ಪಣಾ ಅಭಿಯಾನ’ ಆರಂಭಿಸಿದೆ.

ಇನ್ನು ಈ ವಿಶೇಷ ಸಂದರ್ಭವನ್ನು ಮತ್ತಷ್ಟು ವಿಶಿಷ್ಟಗೊಳಿಸುವ ಸಲುವಾಗಿ ಯುಪಿ ಬಿಜೆಪಿ ಕಾಶಿಯಲ್ಲಿರುವ ವಾರಣಾಸಿಯ ಭಾರತ ಮಾತಾ ದೇವಸ್ಥಾನದಲ್ಲಿ 71,000 ದಿಯಾಗಳನ್ನು (ಮಣ್ಣಿನ ದೀಪಗಳನ್ನು) ಬೆಳಗಿಸಲಾಗುತ್ತದೆ. ದೀಪಗಳನ್ನು ಬೆಳಗಿಸುವುದರ ಜೊತೆಗೆ, ಭಾರತೀಯ ಜನತಾ ಪಕ್ಷವು (ಬಿಜೆಪಿ) 14 ಕೋಟಿ ಪಡಿತರ ಕಿಟ್ಗಳನ್ನು ವಿತರಿಸಲು ಯೋಜಿಸಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: