ಮೈಸೂರು

ವೀರಭದ್ರೇಶ್ವರ ಮೂರ್ತಿಯ ಜೊತೆಯಲ್ಲಿ ಇದ್ದ ಭದ್ರಕಾಳಿ ವಿಗ್ರಹ ಕಾಣೆ : ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳ ಸುರಿಮಳೆ

ಮೈಸೂರು,ಸೆ.17:- ನಂಜನಗೂಡು ತಾಲೂಕಿನ  ಉಚ್ಚಗಣಿ ದೇವಾಲಯ ಅವಾಂತರ ಮಾಸುವ ಮುನ್ನವೇ ಮತ್ತೊಂದು ವಿವಾದ ಕಂಡು ಬಂದಿದೆ.

ಶ್ರೀಕಂಠೇಶ್ವರನ ದೇವಾಲಯ ವೀರಭದ್ರ ಮೂರ್ತಿಯ ಪಕ್ಕದಲ್ಲಿ ನಿಲ್ಲುವ ಭದ್ರಕಾಳಿ ವಿಗ್ರಹವನ್ನು ಯಾವುದೇ ಮುನ್ಸೂಚನೆ ನೀಡದೆ ತೆಗೆಯಲಾಗಿದೆ.

ನಂಜನಗೂಡು ನಂಜುಂಡೇಶ್ವರನ ದೇವಾಲಯದ ಒಳ ಆವರಣದ ಬಲಭಾಗದಲ್ಲಿ ಇರುವ ಶಿವನ ಅವತಾರ ಮೂರ್ತಿಗಳಲ್ಲಿ ಒಂದಾದ ವೀರಭದ್ರೇಶ್ವರ ಮೂರ್ತಿಯ ಜೊತೆಯಲ್ಲಿ ಇದ್ದ ಭದ್ರಕಾಳಿ ವಿಗ್ರಹ ಕಾಣೆಯಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಪ್ರತಿದಿನ ಪೂಜೆ ಪುನಸ್ಕಾರಗಳನ್ನುಸಲ್ಲಿಸಲಾಗುತ್ತಿದ್ದ ಭದ್ರಕಾಳಿ ವಿಗ್ರಹ ದಿಢೀರ್ ಸ್ಥಳಾಂತರ ಮಾಡಿದ ಉದ್ದೇಶವಾದರೂ ಏನು ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ. ಸ್ಥಳಾಂತರಗೊಂಡ ಸ್ಥಳದ ಬಳಿ ಹೋಮ ನಡೆಸಿದ ಕುರುಹುಗಳಿವೆ. ವಿಗ್ರಹಗಳಿಗೆ ಪೂಜೆ ಮಾಡುವ ಕಾರ್ಯ ಹೊರತು ಪಡಿಸಿದರೆ ಸ್ಥಳಾಂತರ ಮಾಡಬೇಕಿದ್ದಲ್ಲಿ ಸಾಕಷ್ಟು ನಿಯಮಗಳನ್ನು ಅನುಸರಿಸಬೇಕಿದೆ. ಮೂರ್ತಿ ಸ್ಥಳಾಂತರ ಮಾಡಲಾಗಿದೆಯೇ ಅಥವಾ ಕಾಣೆಯಾಗಿದೆಯೇ ಎಂಬುದು ತಿಳಿಯದಾಗಿದೆ. ಆದರೆ ಸಿಬ್ಬಂದಿಗಳು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ವಿಗ್ರಹವನ್ನು ಸ್ಥಳಾಂತರಿಸಿರಬಹುದು ಎನ್ನಲಾಗುತ್ತಿದೆ. ವಿಗ್ರಹ ಭಿನ್ನವಾಗಿರಬಹುದೆಂದು ಶಂಕಿಸಲಾಗಿದ್ದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಾರದೆ ದಿಢೀರ್ ಸ್ಥಳಾಂತರ ಮಾಡಿದ್ದು ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಗಿದೆ.

ವಿಗ್ರಹಗಳ ಸರಿಯಾದ ನಿರ್ವಹಣೆ ಇಲ್ಲದೇ ಹಾಗೂ ಅಜಾಗರೂಕತೆಯಿಂದ ಮೂರ್ತಿಯು ಮುರಿದು ಬಿದ್ದಿರಬಹುದೆಂದು ಶಂಕಿಸಲಾಗಿದ್ದು ಈ ಸಂಗತಿ ಭಕ್ತರಿಗೆ ಸಾರ್ವಜನಿಕರಿಗೆ ತಿಳಿಯಬಾರದೆಂದು ಗೌಪ್ಯತೆ ಕಾಪಾಡಲಾಗುತ್ತಿದೆಯೇ ಎಂಬ ಪ್ರಶ್ನೆಗಳೆದ್ದಿದೆ.

ದೇವಾಲಯಗಳ ನಿರ್ಮಾಣ ಕಾಲದಲ್ಲೇ ಆಲಯದ ಎಡ ಭಾಗದಲ್ಲಿ 64 ನಯನಾರ್ ವಿಗ್ರಹಗಳು ಬಲಭಾಗದಲ್ಲಿ 18 ಶಿವನ ಅವತಾರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನೂರಾರು ವರ್ಷಗಳ ಹಿಂದೆ ಪ್ರತಿಷ್ಠಾಪನೆ ಗೊಂಡ ವಿಗ್ರಹಕ್ಕೆ ಹಾಕಿದ್ದ ಅಷ್ಟಬಂಧನ ಶಕ್ತಿ ಕಳೆದುಕೊಂಡು ಮೂರ್ತಿಗಳು ಅಲುಗಾಡುವ ಸ್ಥಿತಿ ತಲುಪಿವೆ. ಅದರ ದುರಸ್ತಿ ಕಾರ್ಯಮಾಡಿಲ್ಲ. ಈ ಕುರಿತು ಈ ಹಿಂದೆಯೇ ಅಷ್ಟ ಮಂಗಲ ಪ್ರಶ್ನೆ ಹಾಕಿದ್ದ ಸಂದರ್ಭದಲ್ಲಿ ಅಷ್ಟಬಂಧನ ಹಾಕಿ ಕಲಾಪೂರ್ಣ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈ ವಿಚಾರದಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಆಸಕ್ತಿ ತೋರಿರಲಿಲ್ಲ. ದೇವಾಲಯಕ್ಕೆ ಹುಂಡಿ ಸಂಗ್ರಹದಲ್ಲಿ ತಿಂಗಳಿಗೆ 1 ಕೋಟಿಗೂ ಅಧಿಕ ಆದಾಯವಿದೆ. ಅಲ್ಲದೇ ವಾಹನ ನಿಲುಗಡೆ ಟೆಂಡರ್, ಚಪ್ಪಲಿ ಟೆಂಡರ್ ,ಶೌಚಾಲಯದ ಟೆಂಡರ್ ,ಲಾಡು ,ಕಲ್ಲು ಸಕ್ಕರೆ, ವಿಶೇಷ ದರ್ಶನದ ಟಿಕೇಟ್ ಹೀಗೆ ತಿಂಗಳಿಗೆ ಕೋಟಿ ಕೋಟಿ ಆದಾಯ ಇದೆ. ನೂರಾರು ಕೋಟಿ ಹಣ ದೇವಾಲಯ ಖಾತೆಯಲ್ಲಿದೆ. ಇಷ್ಟೆಲ್ಲ ಆದಾಯದಲ್ಲಿ ಸಮೃದ್ಧವಾಗಿದ್ದರೂ ಮೂರ್ತಿಗಳ ಸಂರಕ್ಷಣೆಗೆ ಹಣ ವ್ಯಯ ಮಾಡಲು ಆಸಕ್ತಿ ತೋರದಿರುವುದು ನಿರ್ಲಕ್ಷ್ಯತೆಗೆ ಸಾಕ್ಷಿಯಾಗಿದೆ.

ಭಾರತೀಯ ಪುರಾತತ್ವ ಇಲಾಖೆಗೆ ಒಳಪಟ್ಟಿರುವ ಈ ದೇವಾಲಯದ ಸುಮಾರು ಮೂರು ಅಡಿಗಳಷ್ಟು ಎತ್ತರದ ಭದ್ರ ಕಾಳಿಯ ಮೂರ್ತಿ ದಿಢೀರ್ ಸ್ಥಳಾಂತರದ ಉದ್ದೇಶ ಏನು ಎಂಬ ವಿಚಾರಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಉತ್ತರಿಸಬೇಕಿದೆ.

ಈ ವಿಚಾರ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದೆಯೇ ಎಂಬ ಪ್ರಶ್ನೆಯೂ ಮೂಡುತ್ತಿದೆ. ಪ್ರತಿನಿತ್ಯ ದೇವಾಲಯಕ್ಕೆ ಬರುವ ಭಕ್ತರು ದೇವಿಯ ಮೂರ್ತಿ ಕಾಣೆ ಆಗಿರುವ ಕುರಿತು ಪ್ರಶ್ನಿಸುತ್ತಿದ್ದಾರೆ. ಯಾರಿಗೂ ಸಮಂಜಸವಾದ ಉತ್ತರವನ್ನು ದೇವಾಲಯ ಸಿಬ್ಬಂದಿ ನೀಡದೇ ಇರುವ ಕಾರಣ ಈ ಹಿಂದೆ ತೆಗೆದ ಪೋಟೋ ಗಳನ್ನು ಇಟ್ಟು ದೇವಿ ಎಲ್ಲಿ ಮಾಯವಾಗಿದ್ದಾಳೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

ದೇವಾಲಯದ ಸುತ್ತ ಮುತ್ತಲಿನ 300 ಮೀಟರ್ ಅಳತೆಯಲ್ಲಿ ಮನೆ ಕಟ್ಟಡ ನಿರ್ಮಾಣದ ಬಗ್ಗೆ ಎಚ್ಚರ ವಹಿಸುವ ಪುರಾತತ್ವ ಇಲಾಖೆಯ ಕಾವಲುಗಾರರು ದೇವಾಲಯದ ಒಳ ಆವರಣದಲ್ಲಿ ಇರುವ ಮೂರ್ತಿಗಳನ್ನೇ ಸಂರಕ್ಷಣೆ ಮಾಡದ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ. ಈ ಹಿಂದೆ ಚಂಡಿಕೇಶ್ವರನ ವಿಗ್ರಹ ಭಗ್ನ ವಾಗಿ ಹಲವಾರು ಸಮಸ್ಯೆಗಳಿಗೆ ಕಾರಣವಾಗಿತ್ತು. ಇದೀಗ ಭದ್ರಕಾಳಿ ವಿಗ್ರಹ ಸ್ಥಳಾಂತರ ಮತ್ತೆ ಇದೇ ರೀತಿಯ ವಿವಾದಕ್ಕೆ ಕಾರಣವಾಗುತ್ತಿದೆ.  ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತ ಹೆಜ್ಜೆ ಇರಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. (ಕೆ.ಎಸ್ , ಎಸ್.ಎಚ್)

Leave a Reply

comments

Related Articles

error: