ಕರ್ನಾಟಕಪ್ರಮುಖ ಸುದ್ದಿ

ಕಲ್ಯಾಣ ‌ಕರ್ನಾಟಕ ಪ್ರದೇಶ ‌ಅಭಿವೃದ್ಧಿ ಮಂಡಳಿಗೆ ಹೆಚ್ಚುವರಿಯಾಗಿ 1500 ಕೋಟಿ ರೂ. ಅನುದಾನ: ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

ಕಲಬುರ್ಗಿ,ಸೆ.17-ಕಲ್ಯಾಣ ‌ಕರ್ನಾಟಕ ಪ್ರದೇಶ ‌ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಹೆಚ್ಚುವರಿಯಾಗಿ 1500 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಘೋಷಿಸಿದರು.

ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ‌ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಅದಕ್ಕಾಗಿ ಕೆಕೆಆರ್‌ಡಿಬಿಗೆ ನೀಡಲಾಗುತ್ತಿರುವ 1500 ಕೋಟಿ ರೂ. ಅನುದಾನದ ಜೊತೆಗೆ ಹೆಚ್ಚುವರಿಯಾಗಿ 1500 ಕೋಟಿ ರೂ. ನೀಡಲಾಗುವುದು ಎಂದರು.

ರಾಜ್ಯ ಸರ್ಕಾರ ಇಲ್ಲಿಯವರೆಗೆ 8 ಸಾವಿರ ‌ಕೋಟಿ ರೂ.ಗೂ ಅಧಿಕ ಮೊತ್ತವನ್ನು ಬಿಡುಗಡೆ ಮಾಡಿದ್ದೇವೆ. ಆ ಪೈಕಿ 6 ಸಾವಿರ ಕೋಟಿ ರೂ. ಖರ್ಚಾಗಿದೆ. ಉಳಿದ 2 ಸಾವಿರ ಕೋಟಿ ರೂ. ಅನ್ನು ಬರುವ ಮಾರ್ಚ್‌ನೊಳಗೆ ಖರ್ಚು ಮಾಡಬೇಕು. ಅಂದಾಗ ಮಾತ್ರ ಹೆಚ್ಚುವರಿಯಾಗಿ 1500 ಕೋಟಿ ರೂ. ಯನ್ನು ಬಿಡುಗಡೆ ಮಾಡುತ್ತೇನೆ ಎಂದು ಷರತ್ತು ವಿಧಿಸಿದರು.

ಕೆಕೆಆರ್‌ಡಿಬಿಗೆ 3 ಸಾವಿರ ಕೋಟಿ ರೂ. ಕೊಟ್ಟಿದ್ದೇನೆ ಎಂದು ಸರ್ಕಾರದಿಂದ ಈ ಭಾಗಕ್ಕೆ ನೀಡಲಿರುವ ಇತರೆ ಇಲಾಖೆಗಳ ಅನುದಾನಕ್ಕೆ ಕತ್ತರಿ ಹಾಕುವುದಿಲ್ಲ. ಉಳಿದ ಜಿಲ್ಲೆಗಳಿಗೆ ಎಷ್ಟು ಸಿಗುತ್ತದೋ ಅಷ್ಟೂ ಅನುದಾನ ಈ ಜಿಲ್ಲೆಗಳಿಗೆ ಸಿಗಲಿದೆ ಎಂದು ಅವರು ಭರವಸೆ ನೀಡಿದರು.

ನಾನು ಯಾವುದೇ ಹೊಸ ಘೋಷಣೆಗಳನ್ನು ‌ಹೊರಡಿಸುವುದಿಲ್ಲ.‌ ಈಗಾಗಲೇ ಇರುವ ಯೋಜನೆಗಳನ್ನು ‌ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಲು‌ ಗಮನ ಹರಿಸುತ್ತೇನೆ. 371 (ಜೆ) ಕಲಂನಡಿ ಯೋಜನೆಗಳನ್ನು ಜಾರಿಗೊಳಿಸುವ ಹೊಣೆ ಹೊತ್ತಿರುವ ಕೋಶವನ್ನು ‌ಕಲಬುರ್ಗಿಗೆ ಸ್ಥಳಾಂತರಿಸಲಾಗುವುದು ಎಂದರು.

ನಂಜುಂಡಪ್ಪ ವರದಿ ಅನ್ವಯ ಈ ಭಾಗದ ಆರ್ಥಿಕ, ಶೈಕ್ಷಣಿಕ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುವುದು. ವರದಿ ‌ಅನ್ವಯ ಐದು ವರ್ಷಗಳಲ್ಲಿ ಹೊಸ ರೂಪದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಕಲ್ಯಾಣ ‌ಕರ್ನಾಟಕ‌ ಪ್ರದೇಶ ಅಭಿವೃದ್ಧಿ ‌ಮಂಡಳಿ ಹಾಗೂ ‌ನಂಜುಂಡಪ್ಪ ವರದಿ ಅನ್ವಯ ನಡೆಯಲಿರುವ ಕಾಮಗಾರಿಗಳ ಬಗ್ಗೆ ಪ್ರತಿ ಮೂರು ತಿಂಗಳಿಗೊಮ್ಮೆ ಖುದ್ದು ಪರಿಶೀಲನೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.

Leave a Reply

comments

Related Articles

error: