ಕರ್ನಾಟಕಪ್ರಮುಖ ಸುದ್ದಿ

ಅಶಿಸ್ತು ಸಹಿಸುವುದಿಲ್ಲ: ಶಾಸಕ ರೇವಣ್ಣಗೆ ಸ್ಪೀಕರ್ ಕಾಗೇರಿ ಎಚ್ಚರಿಕೆ

ಬೆಂಗಳೂರು,ಸೆ.17-‘ನಾನು ಅಶಿಸ್ತನ್ನು ಸಹಿಸುವುದಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ಅವಧಿಯ ಕಲಾಪ ಆರಂಭ ಆಗುತ್ತಿದ್ದಂತೆ ಎದ್ದುನಿಂತ ರೇವಣ್ಣ,‌ ನಮ್ಮ ಹಕ್ಕುಚ್ಯುತಿ ಆಗಿದೆ. ಕ್ಷೇತ್ರದ ಕಾಮಗಾರಿಗಳ ವಿಳಂಬದ ಬಗ್ಗೆ ಚರ್ಚೆಗೆ ಅವಕಾಶ ಕೊಡಿ ಎಂದು ಪಟ್ಟು ಹಿಡಿದರು.

ಈ ವೇಳೆ ಗರಂ ಆದ ಸ್ಪೀಕರ್ ಕಾಗೇರಿ, ನೀವು ಸುಮ್ಮನೆ ಕುಳಿತುಕೊಳ್ಳಿ, ನಾನು‌ ಅಶಿಸ್ತನ್ನು ಸಹಿಸೋದಿಲ್ಲ ಎಂದರು. ಆಗ ರೇವಣ್ಣ ಅವರು, ಸರ್, ನಾನು ಆ ಪೀಠಕ್ಕೆ ಗೌರವ ಕೊಡ್ತೇನೆ ಎಂದು ಸುಮ್ಮನೆ ಕುಳಿತುಕೊಂಡರು.

ಅಲ್ಲದೆ, ಶಾಸಕರಾದ ಗಣೇಶ್, ನಾರಾಯಣ ಸ್ವಾಮಿ ವಿರುದ್ಧ ಕೂಡ ಸ್ಪೀಕರ್ ಕಾಗೇರಿ ಅವರು ಗರಂ ಆದರು. ಕಂಪ್ಲಿ ಭಾಗದ ಭೂಮಿ ಖರೀದಿ ಅವ್ಯವಹಾರ ಬಗ್ಗೆ ಶಾಸಕ ಗಣೇಶ್ ಪ್ರಶ್ನೆ ಎತ್ತಿದ್ದರು. ಆದರೆ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದು ಮಾತು ನಿಲ್ಲಿಸದೆ ಮುಂದುವರಿದರು. ಈ ವೇಳೆ ಪ್ರಶ್ನೆ ಮುಗಿಸಲು ಸ್ಪೀಕರ್ ಕಾಗೇರಿ ಸೂಚಿಸಿದರೂ, ಮುಂದುವರಿದ ಗಣೇಶ್ ವಿರುದ್ಧ ಸ್ಪೀಕರ್ ಗರಂ ಆದರು.

ಪ್ರಶ್ನೋತ್ತರದಲ್ಲಿ ಹೆಚ್ಚು ಕಾಲಾವಧಿ ಕೊಡಲು ಸಾಧ್ಯವಿಲ್ಲ. ನೀವು ಸಾರ್ವಜನಿಕ ಸಭೆಯಲ್ಲಿ ಇದ್ದೀರಾ? ಹೇಳೋದನ್ನು ಕೇಳಿ ಎಂದರು.‌ ಆದರೆ ಇದಕ್ಕೆ ಕಿವಿಗೊಡದ ಕಂಪ್ಲಿ ಗಣೇಶ್ ಮಾತು ಮುಂದುವರಿಸಿದಾಗ, ಇನ್ನು ಅವಕಾಶ ಕೊಡೊಲ್ಲ. ಮೈಕ್ ಆಫ್ ಮಾಡಿ ಎಂದು ಸ್ಪೀಕರ್ ಸೂಚನೆ ನೀಡಿದರು.

ಈ ವೇಳೆ ಮುಂದಿನ ಪ್ರಶ್ನೆ ಕೇಳಲು ನಿಂತಿದ್ದ ಶಾಸಕ ನಾರಾಯಣ ಸ್ವಾಮಿ, ಆಯ್ತು ಮುಗಿಸಿ ಎಂದು ಗಣೇಶ್ ಅವರನ್ನು ಉದ್ದೇಶಿಸಿ ಹೇಳಿದರು. ಇದರಿಂದ ಮತ್ತಷ್ಟು ಕೋಪಗೊಂಡ ಸ್ಪೀಕರ್, ಮುಗಿಸಿ ಎಂದು ಹೇಳಲು ನೀವು ಯಾರು? ನಾನು ಇಲ್ಲಿ ಏನು ಮಾಡಬೇಕು? ನೀವು ನೀವು ಹೊಂದಾಣಿಕೆ ಮಾಡಿಕೊಂಡಿದ್ದೀರಾ? ಎಂದು ಗರಂ ಆದರು.‌

ಇಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನ. ಆ ಭಾಗಕ್ಕೆ ಸ್ವತಂತ್ರ ಸಿಕ್ಕ ದಿನ ಎಂದು ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೆನಪಿಸಿಕೊಂಡರು. ಈ ದಿನ ನಾವೆಲ್ಲರೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ನೆನೆಯಬೇಕು. ಯಡಿಯೂರಪ್ಪ ಅವರು ಈ ಭಾಗವನ್ನು ಕಲ್ಯಾಣ ಕರ್ನಾಟಕ ಅಂತ ನಾಮಕರಣ ಮಾಡಿದರು. ಇವತ್ತು ಅವರ ಖುಷಿಯಲ್ಲಿ ಭಾಗಿಯಾಗೋಣ ಎಂದರು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೇರಿ ಶುಭ ಕೋರಿದರು.

ರೇವಣ್ಣ ಆರೋಪ : ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಕ್ಕಿಲ್ಲ. ಇದರ ಹಿಂದೆ ರಾಜಕೀಯ ದುರುದ್ದೇಶ ಇದೆ. ಅನುದಾನ ನೀಡುವ ವಿಚಾರದಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಸ್ಥಗಿತಗೊಂಡಿದೆ ಎಂದು ಕೆಲವು ದಿನಗಳ ಹಿಂದೆ ಕೂಡ ರೇವಣ್ಣ ಸದನದಲ್ಲಿ ಆರೋಪಿಸಿದ್ದರು.

ಅಭಿವೃದ್ಧಿ ಕಾಮಗಾರಿ ವಿಳಂಬ ವಿಚಾರವಾಗಿ ಚರ್ಚೆಗೆ ಅವಕಾಶ ಕೋರಿ ಜೆಡಿಎಸ್ ಮಂಡಿಸಿದ್ದ ನಿಲುವಳಿಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿರಸ್ಕಾರ ಮಾಡಿದ್ದಕ್ಕಾಗಿ ಗರಂ ಆದ ಜೆಡಿಎಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದರು. ಅಭಿವೃದ್ಧಿ ಕಾಮಗಾರಿ ವಿಳಂಬ ವಿಚಾರವಾಗಿ ಚರ್ಚೆಗೆ ಅವಕಾಶ ಕೋರಿ ಜೆಡಿಎಸ್ ನಿಲುವಳಿ ಮಂಡಿಸಿತ್ತು.‌ ನಿಯಮ 60 ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿತ್ತು.‌ ಆದರೆ ನಿಲುವಳಿಯನ್ನು ಸ್ಪೀಕರ್ ಕಾಗೇರಿ ತಿರಸ್ಕರಿಸಿದ್ದರು.‌

60 ರ ಬದಲಾಗಿ 69 ಗೆ ಬದಲಾಯಿಸಲು ಬರೆದುಕೊಂಡುವಂತೆ ಸ್ಪೀಕರ್ ಸೂಚನೆ ನೀಡಿದ್ದರು.‌ ಆದರೆ ಇದಕ್ಕೆ ಒಪ್ಪದೆ ಜೆಡಿಎಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದರು. ಕೊನೆಗೂ ಸ್ಪೀಕರ್ ಸೂಚನೆಯನ್ನು ಒಪ್ಪಿದ ಜೆಡಿ ಎಸ್ ಸದಸ್ಯರು ಧರಣಿಯನ್ನು ವಾಪಸ್ ಪಡೆದಿದ್ದರು.

Leave a Reply

comments

Related Articles

error: