ಮೈಸೂರು

ಸುತ್ತೂರು ಮಠದ ಬೆಳದಿಂಗಳ ಸಂಗೀತದಲ್ಲಿ ಗಾಯಕಿ ವಾರಿಜಾಶ್ರೀ ಗಾಯನ

ಮೈಸೂರು,ಸೆ.17:- ಮೈಸೂರಿನ ಶ್ರೀ ಸುತ್ತೂರು ಶಾಖಾಮಠದಲ್ಲಿ ಇದೇ ಸೆಪ್ಟಂಬರ್ 20 ರಂದು ಸೋಮವಾರ ಸಂಜೆ 6  ಗಂಟೆಗೆ   ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಬೆಳದಿಂಗಳ ಸಂಗೀತ-234ರ ಅಂಗವಾಗಿ ವಿದುಷಿ ವಾರಿಜಾಶ್ರೀ ವೇಣುಗೋಪಾಲ್‍ ಅವರಿಂದ ಗಾಯನವನ್ನು ಡಿಜಿಟಲ್ ಮಾಧ್ಯಮದ ಮೂಲಕ ಏರ್ಪಡಿಸಲಾಗಿದೆ.

ವಿದುಷಿ ವಾರಿಜಾಶ್ರೀ ವೇಣುಗೋಪಾಲ್‍ ಅವರು ಇಂದು ಅತ್ಯಂತ ಬೇಡಿಕೆಯಲ್ಲಿರುವ ಕರ್ನಾಟಕ ಸಂಗೀತದ ಪ್ರತಿಭಾನ್ವಿತ ಕಲಾವಿದರು. ತಂದೆ ವಿದ್ವಾನ್ ಎಚ್.ಎಸ್. ವೇಣುಗೋಪಾಲ್, ತಾಯಿ ಟಿ.ವಿ. ರಮಾ ಅವರು. ಹದಿನೆಂಟು ತಿಂಗಳ ಮಗುವಾಗಿದ್ದಾಗಲೇ 50 ರಾಗಗಳನ್ನು, ನಾಲ್ಕನೆಯ ವರ್ಷದ ಹೊತ್ತಿಗೆ 200 ರಾಗಗಳನ್ನು ಗುರುತಿಸುವ ಅಪರೂಪದ ಸಾಮರ್ಥ್ಯ ಹೊಂದಿದ್ದರು. ತಂದೆ ಇವರ ಮೊದಲ ಗುರು. ಅನಂತರ ವಿದುಷಿ ಎಚ್. ಗೀತಾ, ವಿದುಷಿ ವಸಂತಾ ಶ್ರೀನಿವಾಸನ್, ವಿದ್ವಾನ್ ಡಿ.ಎಸ್. ಶ್ರೀವತ್ಸ ಅವರುಗಳ ಬಳಿ ಶಿಷ್ಯವೃತ್ತಿ. ಬಳಿಕ ವಿದ್ವಾನ್ ಸೇಲಂ ಪಿ. ಸುಂದರೇಶನ್‍ ಅವರ ಬಳಿ ಉನ್ನತ ಸಂಗೀತ ಶಿಕ್ಷಣವನ್ನು ಪಡೆದು, ಗಾನಕಲೆಯ ಸೂಕ್ಷ್ಮತೆಗಳನ್ನು ಅಭ್ಯಸಿಸಿದರು. ತಂದೆಯವರಿಂದ ವೇಣುವಾದನವನ್ನೂ ಕರಗತ ಮಾಡಿಕೊಂಡಿದ್ದಾರೆ.

ಕರ್ನಾಟಕ ಸಂಗೀತದ ಪ್ರವೀಣತೆ ಸಾಧಿಸಿಯೂ, ಫ್ಯೂಷನ್ ಸಂಗೀತದ ನಾವೀನ್ಯಕ್ಕೆ ಹೊಸ ಪ್ರಯೋಗಗಳಿಗೆ ತೆರೆದುಕೊಂಡಿದ್ದಾರೆ. ಹಿನ್ನೆಲೆ ಗಾಯನ, ಟಿವಿ ಧಾರವಾಹಿಯ ಶೀರ್ಷಿಕೆ ಗೀತೆ, ನಾಟಕ, ಕಿರುಚಿತ್ರಗಳು, ಆಲ್ಬಂಗಳು ಮುಂತಾದ ಕ್ಷೇತ್ರಗಳಲ್ಲಿ ಕವಯತ್ರಿಯಾಗಿ, ಸಂಗೀತ ನಿರ್ದೇಶಕರಾಗಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಸಮಕಾಲೀನ ಏಷ್ಯನ್ ಸಂಗೀತಗಾರರ `ಚಕ್ರಫೋನಿಕ್ಸ್’ನ ನಾಲ್ಕು ಜನ ಪಾಲುಗಾರರಲ್ಲಿ ಇವರೂ ಒಬ್ಬರು. “ಕರ್ನಾಟಕ ಸ್ಕ್ಯಾಟ್ ಸಿಂಗಿಂಗ್” ಎಂಬ ಇವರ ಹೊಸ ರೀತಿಯ ಹಾಡುಗಾರಿಕೆ ವಿಶ್ವಾದ್ಯಂತ ಜನಪ್ರಿಯತೆ ಪಡೆದಿದೆ.

ವಿದ್ವಾನ್ ಮತ್ತೂರು ಶ್ರೀನಿಧಿಯವರು ವಿದ್ವಾನ್ ಆರ್.ಆರ್. ಕೇಶವಮೂರ್ತಿಯವರಲ್ಲಿ ವಯೊಲಿನ್ ವಾದನವನ್ನು ಮತ್ತು ಆರ್.ಎನ್. ತ್ಯಾಗರಾಜನ್‍ರವರಲ್ಲಿ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸಿದ್ದಾರೆ. ಮದ್ರಾಸ್ ವಿಶ್ವವಿದ್ಯಾನಿಲಯದ ಎಂ ಮ್ಯೂಸಿಕ್ ಪದವೀಧರರು. ಅನನ್ಯ ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದ “ಎ” ಶ್ರೇಣಿ ಕಲಾವಿದರು. ಯೂರೋಪ್ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲಿ ವ್ಯಾಪಕವಾಗಿ ಸಂಚರಿಸಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ವಿದ್ವಾನ್ ಕೆ.ಯು. ಜಯಚಂದ್ರರಾವ್‍ ಅವರು ದೇಶದ ಶ್ರೇಷ್ಠ ಮೃದಂಗ ವಿದ್ವಾಂಸರಲ್ಲೊಬ್ಬರು. ಭಾರತೀಯ ಲಯವಾದ್ಯ ಪ್ರಪಂಚದ ಮೇರು ಪ್ರತಿಭೆ. ಅನೇಕ ಅಂತಾರಾಷ್ಟ್ರೀಯ ಸಂಗೀತೋತ್ಸವಗಳಲ್ಲಿ ಭಾಗವಹಿಸಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಆಕಾಶವಾಣಿಯ “ಎ” ಶ್ರೇಣಿ ಕಲಾವಿದರು. ಕಾಂಚನ   ಶ್ರೀಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಸಂಸ್ಥೆಯನ್ನು  ಕ್ರಿಯಾಶೀಲರಾಗಿ ಮುನ್ನಡೆಸುತ್ತಿದ್ದಾರೆ.

ಈ  ಕಾರ್ಯಕ್ರಮವನ್ನು  ಕಲಾಸಕ್ತರು  Youtube http://Youtube.com/c/JSS Mahavidyapeethaonline, https://www.facebook.com/JSSMVP ಲಿಂಕ್‍ ಗಳ ಮೂಲಕ ಆಲಿಸಬಹುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: