ಕರ್ನಾಟಕಪ್ರಮುಖ ಸುದ್ದಿ

ದೌರ್ಜನ್ಯಕ್ಕೊಳಗಾದವರಿಗೆ ಅನುಕಂಪದ ಆಧಾರಿತ ಉದ್ಯೋಗ ಒದಗಿಸಲು ಸೂಚನೆ

ರಾಜ್ಯ(ಹಾಸನ) ಸೆ.18: -ದೌರ್ಜನ್ಯಕ್ಕೊ ಳಗಾಗಿ ಹತ್ಯೆಗೀಡಾದ ಅನುಸೂಚಿತ ಜಾತಿ ಪಂಗಡಗಳ ಕುಟುಂಬದ ಅರ್ಹ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ತ್ವರಿತವಾಗಿ ಉದ್ಯೋಗ ಒದಗಿಸುವ ಕುರಿತು ಅಗತ್ಯ ಕ್ರಮ ಕೈಗೊಳುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಅನುಸೂಚಿತ ಜಾತಿ/ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಪ್ರಾದೇಶಿಕ ಆಯುಕ್ತರ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ಬಾಕಿ ಇರುವ ಪ್ರಕರಣಗಳಲ್ಲಿ ಮೂರು ಕುಟುಂಬಗಳ ಅವಲಂಬಿತರಿಗೆ ತ್ವರಿತವಾಗಿ ಸರ್ಕಾರಿ ಕೆಲಸ ಒದಗಿಸಿ ಎಂದರು.

ಸಾರ್ವಜನಿಕರ ಅನುಕೂಲದ ಹಿತದೃಷ್ಟಿಯಿಂದ ಡಾ. ಬಿ .ಆರ್ .ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯನ್ನು ನಗರ ಭಾಗಕ್ಕೆ ಸ್ಥಳಾಂತರಿಸುವ ಜೊತೆಗೆ ಹಾಗೂ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಲು ಚೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಮಿತಿ ಸದಸ್ಯರಾದ ಮರಿಜೋಸೆಫ್ ಈರಪ್ಪ ನಾರಾಯಣದಾಸ್,ಸಂದೇಶ್ , ಹೂರಾಜ್ ಅವರು ಅನುಸೂಚಿತ ಜಾತಿ ಹಾಗೂ ಪಂಗಡಗಳ ಸಮುದಾಯಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.

ಸಾಲಗಾಮೆ ಹೋಬಳಿಯ ಕಡದರಹಳ್ಳಿ ಜೀತ ವಿಮುಕ್ತರಿಗೆ ಸೀಗೆ ಗುಡ್ಡದ ಬಳಿ ಜಮೀನು ಒದಗಿಸುವ ಬಗ್ಗೆ, ಹಾಗೂ ಕಟ್ಟಾಯ ಹೋಬಳಿಯ ಕೋನಾಪುರ ಬೆಟ್ಟದಲ್ಲಿ ಹೇಮಾವತಿ ಜಲಾಶಯದ ಯೋಜನೆಯಲ್ಲಿ ಮೀನುಗಾರಿಕೆ ತೊಡಗಿರುವ ಕುಟುಂಬಗಳಿಗೆ ನಿವೇಶನ ಒದಗಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು ಹೇಮಾವತಿ ಜಲಾಶಯ ಯೋಜನೆಯಲ್ಲಿ ಉಳಿದಿರುವ ಭೂಮಿಯಲ್ಲಿ ಹಾಗೂ ಕೋನಾಪುರ ಭಾಗದಲ್ಲಿ ಜಮೀನು ಹಾಗೂ ನಿವೇಶನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಇದೇ ವೇಳೆ ಮರಿಜೋಸೆಫ್ ಅವರು ಹೇಮಾವತಿ ಜಲಾಶಯ ಭೂಮಂಜೂರಾತಿ ವಿಷಯದಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು ಒಂದೇ ಕುಟುಂಬದವರು ಎರಡು ಎರಡು ಬಾರಿ ಜಮೀನು ಮಂಜೂರು ಮಾಡಿಸಿಕೊಂಡಿರುವ ನಿರ್ದಿಷ್ಟ ಪ್ರಕರಣಗಳ ಬಗ್ಗೆ ಗಮನಕ್ಕೆ ತಂದರು ಈ ಬಗ್ಗೆ ಇನ್ನೊಂದು ಸುತ್ತಿನ ತನಿಖೆ ನಡೆಯಲಿದ್ದೇ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಇದೇ ವೇಳೆ ಅಂಗಡಿಹಳ್ಳಿ ಇರುವಂತಹ ಹಕ್ಕಿಪಿಕ್ಕಿ ಸಮುದಾಯದವರಿಗೆ ಔಷಧಿ ಗಿಡಮೂಲಿಕೆ ಸಂಗ್ರಹಿಸಲು ತಲಾ ಎರಡು ಎಕರೆ ಜಮೀನು ಒದಗಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ನಿಯಮಾನುಸಾರ ಜಮೀನನ್ನು ಒದಗಿಸಲು ಈಗಾಗಲೇ ಮಹರ್ಷಿ ವಾಲ್ಮೀಕಿ ನಿಗಮದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್ ತಿಳಿಸಿದರು.

ಇದೇ ವೇಳೆ ತಾಲ್ಲೂಕು ಹಂತದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯಗಳ ಸಮಸ್ಯೆಗಳ ಬಗೆಹರಿಸುವ ಕುರಿತು ಪ್ರತಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆ ನಡೆಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಮಿತಿ ಸದಸ್ಯರಾದ ಈರಪ್ಪ ಅವರು ಮಾತನಾಡಿ ಆಲೂರು ತಾಲ್ಲೂಕು ಕಚೇರಿ ಬಳಿ ಡಾ.ಬಿ,ಆರ್ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ತ್ವರಿತವಾಗಿ ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದರು.

ಸಮಿತಿ ಸದಸ್ಯರಾದ ಮರಿಜೋಸೆಫ್ ,ಈರಪ್ಪ ,ಸಂದೇಶ್ ಅವರು ಸಭೆಯಲ್ಲಿ ದೌರ್ಜನ್ಯಕ್ಕೊಳಗಾದ ಪ್ರಕರಣ ದಾಖಲಾದ ನಂತರ ನ್ಯಾಯಾಲಯದಲ್ಲಿ ಸರ್ಕಾರಿ ಪರ ವಕೀಲರು ಇನ್ನಷ್ಟು ಹೆಚ್ಚಿನ ಕಾಳಜಿ ವಹಿಸಿ ವಾದ ಮಂಡಿಸಿ ಶೋಷಿತರಿಗೆ ನೆರವಾಗಬೇಕು ಮನವಿ ಮಾಡಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್ .ನಂದಿನಿ , ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಚಂದ್ರಶೇಖರ್ ,ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಹಾಗೂ ಮತ್ತಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: