ಕ್ರೀಡೆವಿದೇಶ

ಕೋಚ್ ಸ್ಥಾನ ತೊರೆಯುವ ಸೂಚನೆ ನೀಡಿದ ರವಿಶಾಸ್ತ್ರಿ

ಲಂಡನ್,ಸೆ.18-ಮೊನ್ನೆಯಷ್ಟೇ ವಿರಾಟ್ ಕೊಹ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಬಳಿಕ ಭಾರತ ಟಿ20 ತಂಡದ ನಾಯಕತ್ವಕ್ಕೆ ವಿದಾಯ ಹೇಳುವುದಾಗಿ ಘೋಷಿಸಿದ್ದರು. ಇದೀಗ ತಂಡ ಕೋಚ್ ರವಿಶಾಸ್ತ್ರಿ ಮುಖ್ಯ ತರಬೇತುದಾರನ ಹುದ್ದೆಯನ್ನು ತೊರೆಯುವ ಬಗ್ಗೆ ಸೂಚನೆ ನೀಡಿದ್ದಾರೆ.

ಮುಂಬರುವ ಐಸಿಸಿ ಟಿ-20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಮುಖ್ಯ ತರಬೇತುದಾರನ ಹುದ್ದೆಯನ್ನು ತೊರೆಯುವ ಬಗ್ಗೆ ಸೂಚನೆ ನೀಡಿರುವ ರವಿಶಾಸ್ತ್ರಿ ‘ಲಭಿಸಿರುವ ಸ್ವಾಗತವನ್ನು ಮೀರಿ ತಂಗಬಾರದು’ ಎಂದು ಹೇಳಿದ್ದಾರೆ.

‘ನಾನು ಬಯಸಿದ್ದೆನ್ನೆಲ್ಲ ಸಾಧಿಸಿದ್ದೇನೆ. ಐದು ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಸ್ಥಾನ, ಆಸ್ಟ್ರೇಲಿಯಾದಲ್ಲಿ ಎರಡು ಬಾರಿ ಸರಣಿ ಗೆಲುವು, ಇಂಗ್ಲೆಂಡ್‌ನಲ್ಲಿ ಸರಣಿ ಗೆಲುವು. ನನ್ನ ಪಾಲಿಗಿದು ಕಟ್ಟಕಡೆಯ ಗುರಿಯಾಗಿತ್ತು’ ಎಂದು ಹೇಳಿದ್ದಾರೆ.

‘ಆಸ್ಟ್ರೇಲಿಯಾ ವಿರುದ್ಧ ಗೆಲುವು ಮತ್ತು ಕೋವಿಡ್ ಸಮಯದಲ್ಲಿ ಇಂಗ್ಲೆಂಡ್‌ನಲ್ಲಿ ಗೆಲುವು. ನಾವದನ್ನು ಸಾಧಿಸಿದ್ದೇವೆ. ಇಂಗ್ಲೆಂಡ್ ವಿರುದ್ಧ 2-1ರ ಅಂತರದ ಮುನ್ನಡೆಗಳಿಸಿದ್ದೇವೆ. ಲಾರ್ಡ್ಸ್ ಹಾಗೂ ಓವಲ್ ಗೆಲುವು ವಿಶೇಷವಾಗಿತ್ತು’ ಎಂದು ಶಾಸ್ತ್ರಿ ಹೇಳಿದ್ದಾರೆ.

‘ನಾವು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಜಗತ್ತಿನ ಎಲ್ಲ ತಂಡಗಳನ್ನು ಅವರದ್ದೇ ನೆಲದಲ್ಲಿ ಮಣಿಸಿದ್ದೇವೆ. ಟಿ20 ವಿಶ್ವಕಪ್ ಗೆದ್ದರೆ ಇನ್ನೂ ಮಧುರವಾಗಲಿದೆ. ಇದಕ್ಕಿಂತಲೂ ಮಿಗಿಲಾಗಿ ಬೇರೆ ಏನು ಇಲ್ಲ. ನಾನು ಒಂದು ವಿಷಯದಲ್ಲಿ ನಂಬಿಕೆಯಿಟ್ಟಿದ್ದೇನೆ. ನಮಗೆ ಲಭಿಸಿರುವ ಸ್ವಾಗತವನ್ನು ಮೀರಬಾರದು. ನಾನದನ್ನು ಹೇಳಲು ಬಯಸುತ್ತೇನೆ. ಈ ತಂಡದಿಂದ ನಾನೇನು ಸಾಧಿಸಲು ಬಯಸಿದ್ದೆನೋ ಅದನ್ನು ನಿರೀಕ್ಷೆಗಿಂತಲೂ ಹೆಚ್ಚು ಸಾಧನೆ ಮಾಡಿದ್ದೇನೆ. ಆಸ್ಟ್ರೇಲಿಯಾ ವಿರುದ್ಧ ಅವರದ್ದೇ ನೆಲದಲ್ಲಿ ಗೆಲುವು, ಕೋವಿಡ್ ವರ್ಷದಲ್ಲೂ ಇಂಗ್ಲೆಂಡ್‌ನಲ್ಲಿ ಗೆಲುವು. ಇವೆಲ್ಲವೂ ನಾಲ್ಕು ದಶಕಗಳ ನನ್ನ ಕ್ರಿಕೆಟ್ ಜೀವನದಲ್ಲಿ ಅತ್ಯಂತ ಸಂತೃಪ್ತಿದಾಯಕ ಕ್ಷಣವಾಗಿದೆ’ ಎಂದಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: