ದೇಶಪ್ರಮುಖ ಸುದ್ದಿ

ಕೋವಿಡ್ ಲಸಿಕೆ ನೀಡಿಕೆಯಲ್ಲಿ ಭಾರತ ವಿಶ್ವದಾಖಲೆ: ಒಂದೇ ದಿನ 2.50 ಕೋಟಿ ಡೋಸ್ ಲಸಿಕೆ

ನವದೆಹಲಿ,ಸೆ.18-ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾದ ನಿನ್ನೆ ದೇಶದಾದ್ಯಂತ ಒಂದೇ ದಿನ 2.50 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಈ ಮೂಲಕ ವಿಶ್ವ ದಾಖಲೆ ನಿರ್ಮಾಣವಾಗಿದೆ.

ಪ್ರಧಾನಿ ಮೋದಿ ಹುಟ್ಟುಹಬ್ಬದಂದು 2.50 ಕೋಟಿ ಲಸಿಕೆ ಡೋಸ್ ನೀಡಲು ಗುರಿ ನಿಗದಿಪಡಿಸಲಾಗಿತ್ತು. ಆದರೆ ಗುರಿ ಮೀರಿ 10390 ಹೆಚ್ಚುವರಿ ಡೋಸ್ ನೀಡಲಾಗಿದೆ ಎಂದು ಸರ್ಕಾರ ಪ್ರಕಟಿಸಿದೆ. ಚೀನಾದಲ್ಲಿ ಒಂದೇ ದಿನ 2.43 ಕೋಟಿ ಡೋಸ್ ಲಸಿಕೆ ನೀಡಿದ್ದು ಈವರೆಗಿನ ದಾಖಲೆಯಾಗಿತ್ತು.

ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಟ್ವೀಟ್ ಮೂಲಕ ಇದನ್ನು ದೃಢಪಡಿಸಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಇಂದಿನ ದಾಖಲೆ ಸಂಖ್ಯೆಯ ಲಸಿಕೆ ನೀಡಿಕೆಯ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡಬೇಕು ಎಂದು ಹೇಳಿದ್ದರು. ಇದಕ್ಕೆ ಕಠಿಣ ಪರಿಶ್ರಮ ವಹಿಸಿದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರನ್ನು ಅಭಿನಂದಿಸಿದ್ದರು.

ಮನ್‌ಸುಖ್‌ ಮಾಂಡವೀಯ ಟ್ವೀಟ್ ಮಾಡಿ, ಪ್ರಧಾನಿಯವರ ಜನ್ಮದಿನದಂದು ಭಾರತವು ಇತಿಹಾಸ ರಚಿಸಿದೆ. 2.50 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡುವ ಮೂಲಕ ವಿಶ್ವದ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಬರೆದಿದೆ. ಇದು ಆರೋಗ್ಯ ಕಾರ್ಯಕರ್ತರ ದಿನ. ಅವರಿಗೆ ಧನ್ಯವಾದಗಳು ತಿಳಿಸಿದ್ದರು.

ಸಂಜೆಯ ವೇಳೆಗೆ ಭಾರತದ ಲಸಿಕೆ ನೀಡಿಕೆ ಸಂಖ್ಯೆ ಎರಡು ಕೋಟಿ ದಾಟಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಕಚೇರಿ ಟ್ವೀಟ್ ಮಾಡಿ ಭಾರತವನ್ನು ಅಭಿನಂದಿಸಿತ್ತು.

ಸರ್ಕಾರದ ಟ್ರ್ಯಾಕರ್ ಪ್ರಕಾರ ಪ್ರತಿ ಸೆಕೆಂಡಿಗೆ 800 ಲಸಿಕಾ ಡೋಸ್‌ಗಳನ್ನು ನೀಡಲಾಗಿದ್ದು, ನಿಮಿಷಕ್ಕೆ 48 ಸಾವಿರದಂರೆ ಲಸಿಕೆ ನೀಡಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಆರ್.ಎಸ್.ಶರ್ಮಾ ಹೇಳಿದ್ದಾರೆ.

ಬಿಹಾರ ಟಾಪ್, ಮುಂಚೂಣಿಯಲ್ಲಿ ಕರ್ನಾಟಕ

ಮೋದಿ ಜನ್ಮದಿನದ ಪ್ರಯುಕ್ತ ಬಿಜೆಪಿ ಅಧಿಕಾರದಲ್ಲಿರುವ ವಿವಿಧ ರಾಜ್ಯ ಸರ್ಕಾರಗಳು ಮೆಗಾ ಲಸಿಕಾ ಅಭಿಯಾನ ನಡೆಸಿದ್ದವು. ಮೆಗಾ ಲಸಿಕಾ ಅಭಿಯಾನ ದಿನ ಅತಿಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಸಾಲಿನಲ್ಲಿ ಬಿಹಾರ ಅಗ್ರ ಸ್ಥಾನದಲ್ಲಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಬಿಹಾರದಲ್ಲಿ ರಾತ್ರಿ 11.20ರ ವೇಳೆಗೆ 29,38,653 ಡೋಸ್ ಲಸಿಕೆ ನೀಡಲಾಗಿದೆ. ಕರ್ನಾಟಕದಲ್ಲಿ ರಾತ್ರಿ 12 ಗಂಟೆ ವೇಳೆಗೆ 29,09,163 ಡೋಸ್ ಲಸಿಕೆ ನೀಡಲಾಗಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: