ಮೈಸೂರು

ಸರ್ಚ್ ಕಮಿಟಿಗೆ ಹಾಲಿ ಕುಲಪತಿಗಳನ್ನು ನೇಮಕ ಮಾಡುವುದನ್ನು ಕೈಬಿಡಿ : ಪ್ರೊ.ರಂಗಪ್ಪ

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಅಕ್ಟೊಬರ್ ನಲ್ಲಿ ವಿಚಾರ ಸಂಕಿರಣ

ಮೈಸೂರು,ಸೆ.20:-ಹಾಲಿ ಕುಲಪತಿಗಳನ್ನು ಸರ್ಚ್ ಕಮಿಟಿಗೆ ನೇಮಕ ಮಾಡುವ ಪ್ರವೃತಿಯನ್ನು ಕೈಬಿಡಬೇಕು. ಹಾಲಿ ಕುಲಪತಿಗಳಾದರೆ ಅವರಿಗೆ ನಿಷ್ಪಕ್ಷಪಾತವಾಗಿ ತೀರ್ಮಾನಗಳನ್ನ ತೆಗೆದುಕೊಳ್ಳಲಾಗದು. ಅವರು ಸರ್ಕಾರದ ಮರ್ಜಿಯಲ್ಲೇ ಇರುತ್ತಾರೆ. ಆದ್ದರಿಂದ ಕುಲಪತಿಗಳ ಆಯ್ಕೆ ಸಮಿತಿಗೆ ವಿಶ್ರಾಂತ ಕುಲಪತಿಗಳನ್ನೇ ನೇಮಕ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾನೂನು ರೂಪಿಸಬೇಕಿದೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ರಂಗಪ್ಪ ಸಲಹೆ ನೀಡಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜೀವ್ ಗಾಂಧಿ ಆರೋಗ್ಯ ವಿವಿ ಸರ್ಚ್  ಅಂಡ್ ಸೆಲೆಕ್ಷನ್ ಕಮಿಟಿಗೆ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅವರನ್ನು ನೇಮಕ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಕರಾಮುವಿವಿ ಕುಲಪತಿಗಳು ಇಂಜಿನಿಯರಿಂಗ್ ಹಿನ್ನೆಲೆ ಹೊಂದಿದ್ದಾರೆ. ಅವರಿಗೂ ರಾಜೀವ್ ಗಾಂಧಿ ಆರೋಗ್ಯ ವಿವಿಗೂ ಏನು ಸಂಬಂಧ. ಯಾವುದೇ ವಿವಿಯ ಸರ್ಚ್ ಕಮಿಟಿಗೆ ನೇಮಕ ಮಾಡುವ ಮುನ್ನ ಆಯಾ ಕ್ಷೇತ್ರದ ಪರಿಣಿತರನ್ನೇ ಆಯ್ಕೆ ಮಾಡಬೇಕು. ಈ ಬಗ್ಗೆ ರಾಜ್ಯಪಾಲರು ಹಾಗೂ ಸಿಎಂಗೆ ಪತ್ರ ಬರೆದಿದ್ದು, ನೇಮಕ ಆದೇಶಕ್ಕೆ ತಡೆ ನೀಡಬೇಕೆಂದು ಒತ್ತಾಯಿಸಲಾಗಿದೆ ಎಂದರು.
ಕರಾಮುವಿವಿ ಅಕ್ರಮಗಳ ಕುರಿತು ಪ್ರತಿಕ್ರಿಯಿಸಿ ಈ ಬಗ್ಗೆ ದಾಖಲೆ ಸಂಗ್ರಹ ಮಾಡುತ್ತಿದ್ದೇನೆ. ಮುಂದಿನ ವಾರದಲ್ಲಿ ಸುದ್ದಿಗಾರರೊಂದಿಗೆ ದಾಖಲೆ ಸಮೇತ ಮಾತನಾಡುತ್ತೇನೆ. ನಾನು ವಿಸಿಯಾಗಿದ್ದಾಗ 650 ಕೋಟಿ ಆದಾಯ ಸಂಗ್ರಹ ಮಾಡಿಟ್ಟು ಹೊರಗೆ ಬಂದಿದ್ದೆ. ಆದರೆ, ಕೊನೆಗೆ ನನ್ನನ್ನೇ ವಿಲನ್ ಮಾಡಿದರು. ಹಾಗಾಗಿ ಸದ್ಯ ಈ ಬಗ್ಗೆ ಹೆಚ್ಚಿಗೆ ಏನು ಮಾತನಾಡುವುದಿಲ್ಲ ಎಂದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಅಕ್ಟೊಬರ್ ನಲ್ಲಿ ವಿಚಾರ ಸಂಕಿರಣ
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಒಳ್ಳೆಯ ಅಂಶದೊಂದಿಗೆ ಕೆಲವು ನ್ಯೂನ್ಯತೆಗಳೂ ಇವೆ. ಅದಕ್ಕಾಗಿ ಅಕ್ಟೋಬರ್‌ ನಲ್ಲಿ ಮೈಸೂರು ವಿವಿ ಸಹಯೋಗದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಬೆಸ್ಟ್ ಪಾಲಿಸಿ. ಆದರೆ, ಕೆಲವೊಂದು ಭಾಗಗಳಲ್ಲಿ ಗೊಂದಲವಿರುವಂತೆ ತೋರುತ್ತದೆ. ಈ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಂಯುಕ್ತಾಶ್ರಯದಲ್ಲಿ ಒಂದು ಸಮಾವೇಶ ನಡೆಸಲಾಗುವುದು. ಈ ಸಮಾವೇಶದಲ್ಲಿ ಹೊಸ ಶಿಕ್ಷಣ ನೀತಿಯ ಬಗ್ಗೆ ವಿಸ್ತೃತ ಚರ್ಚೆ ಮಾಡಲಾಗುವುದು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ವಿಚಾರ ಸಂಕಿರಣ ಉದ್ಘಾಟಿಸಲು ಒಪ್ಪಿದ್ದಾರೆ. ಇದರಲ್ಲಿ ಎಲ್ಲಾ ವಿವಿಗಳ ಕುಲಪತಿಗಳು, ಕಾಲೇಜು ಪ್ರಾಂಶುಪಾಲರು, ಸ್ನಾತಕೋತ್ತರ ಪ್ರಾಧ್ಯಾಪಕರು ಹಾಗೂ  ಭಾಗವಹಿಸಲಿದ್ದಾರೆ ಎಂದರು.
ಸರ್ಕಾರ ನಮ್ಮ ಸಲಹೆ ಪಡೆದುಕೊಳ್ಳಲಿ
ಸರ್ಕಾರ ವಿಶ್ರಾಂತ ಕುಲಪತಿಗಳ ವೇದಿಕೆಯ ಸಲಹೆ ಪಡೆದುಕೊಳ್ಳಬೇಕು. ಈ ವೇದಿಕೆಯಲ್ಲಿ 70 ಜನ ನಿವೃತ್ತ ಕುಲಪತಿ ಗಳು ಇದ್ದಾರೆ. ಶಿಕ್ಷಣ, ವಿಜ್ಞಾನ, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಲಹೆ ನೀಡುತ್ತೇವೆ. ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂಬುದು ನಮ್ಮ ಉದ್ದೇಶ. ಒಂಭತ್ತು ವಿಚಾರಗಳ ಚರ್ಚೆಗೆ ಸರ್ಕಾರದ ಮುಂದಿಟ್ಟಿದ್ದೇವೆ ಎಂದು ತಿಳಿಸಿದರು.
ಸರಕಾರ ವಿವಿಗಳಿಗೆ ಕುಲಪತಿ ನೇಮಕ ಮಾಡುವ ಪ್ರಕ್ರಿಯೆಯನ್ನು ತಡವಾಗಿ ಮಾಡಬಾರದು. ಹಾಲಿ ಇರುವ ಕುಲಪತಿ ನಿವೃತ್ತರಾಗುವ 3-4 ತಿಂಗಳುಗಳ ಮೊದಲೇ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಬೇಕು. ನೇಮಕಾತಿಯಲ್ಲಿ ವಿಳಂಬವಾಗುವುದರಿಂದ ಪ್ರಸ್ತುತ ನಮ್ಮ ವಿವಿಗಳು ಸುಲಲಿತವಾಗಿ ನಡೆಯುವುದರಲ್ಲಿ ತೊಂದರೆ ಆಗುತ್ತದೆ. ಮೊದಲು ವಿವಿಗಳಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಬೇಕು. ಅಧಿವೇಶನ ಮುಗಿದ ಮೇಲೆ ಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡುತ್ತೇವೆ. ರಾಜ್ಯದಲ್ಲಿ ವಿಜ್ಞಾನ ಮತ್ತು ಶಿಕ್ಷಣದ ಬಗ್ಗೆ ನಮ್ಮ ಸಲಹೆ ಸೂಚನೆ ಕೊಡಲಿದ್ದೇವೆ. ಗುಣಮಟ್ಟದ ಶಿಕ್ಷಣ ತೆಗೆದುಕೊಳ್ಳಲು ಸಮಗ್ರವಾಗಿ ಸರ್ಕಾರ ನಮಗೆ ಪ್ರೋತ್ಸಾಹ ಕೊಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರೊ. ಎಸ್.ಆರ್.ನಿರಂಜನ, ಪ್ರೊ.ಎಸ್.ಎನ್.ಹೆಗಡೆ ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: