ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ; ತಾಯಿ, ಮಗಳು ಸಜೀವ ದಹನ

ಬೆಂಗಳೂರು,ಸೆ.22- ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತಾಯಿ, ಮಗಳು ಸಜೀವ ದಹನವಾಗಿರುವ ಘಟನೆ ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ದೇವರಚಿಕ್ಕನಹಳ್ಳಿಯಲ್ಲಿ ನಿನ್ನೆ ಸಂಜೆ ನಡೆದಿದೆ.

ಲಕ್ಷ್ಮಿದೇವಿ (82) ಮತ್ತು ಅವರ ಮಗಳು ಭಾಗ್ಯರೇಖಾ (56) ಮೃತಪಟ್ಟವರು. ‘ಆಶ್ರಿತಾ ಆಸ್ಪೈರ್‌’ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಒಬ್ಬರಿಗೆ ಸುಟ್ಟ ಗಾಯವಾಗಿದೆ. ಅನಾಹುತಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಗ್ಯಾಸ್‌ ಸಿಲಿಂಡರ್‌ ಸೋರಿಕೆ ಅಥವಾ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಮೃತ ಲಕ್ಷ್ಮಿದೇವಿ ಅವರು ವಿಜಯ ಬ್ಯಾಂಕ್‌ ಲೇಔಟ್‌ನಲ್ಲಿರುವ ಮತ್ತೊಬ್ಬ ಮಗಳ ಮನೆಯಲ್ಲಿ ವಾಸ ಇದ್ದರು. ಅಮೆರಿಕದಿಂದ ಮಗಳು ಬಂದಿರುವುದನ್ನು ತಿಳಿದು ಬೆಳಿಗ್ಗೆಯಷ್ಟೇ ಈ ಫ್ಲ್ಯಾಟ್‌ಗೆ ಬಂದಿದ್ದರು. ಮಗಳನ್ನು ನೋಡಲು ಬಂದು ಅಗ್ನಿದುರಂತದಲ್ಲಿ ಪ್ರಾಣ ಬಿಟ್ಟಿದ್ದಾರೆ.

ಮೃತ ಭಾಗ್ಯರೇಖಾ ಹಾಗೂ ಅವರ ಪತಿ ಭೀಮಸೇನರಾವ್‌ ಅವರು ಆಶ್ರಿತಾ ಆಸ್ಪೈರ್‌ ಅಪಾರ್ಟ್‌ಮೆಂಟ್‌ನ 2ನೇ ಮಹಡಿಯಲ್ಲಿ 210 ಸಂಖ್ಯೆಯ ಫ್ಲ್ಯಾಟ್‌ ಹೊಂದಿದ್ದಾರೆ. ಭಾಗ್ಯರೇಖಾ ಹಾಗೂ ಭೀಮಸೇನರಾವ್‌ ಅವರು ಆರು ತಿಂಗಳಿನಿಂದ ಅಮೆರಿಕದಲ್ಲಿ ಇದ್ದರು. ಸೋಮವಾರವಷ್ಟೇ ಬೆಂಗಳೂರಿಗೆ ಆಗಮಿಸಿದ್ದರು. ಪಕ್ಕದಲ್ಲೇ ಇರುವ 211ನೇ ಫ್ಲ್ಯಾಟ್‌ನಲ್ಲಿ ಮಗಳ ಮನೆ ಇದೆ. ಅಲ್ಲಿ ಉಳಿದುಕೊಂಡಿದ್ದರು. ಪಕ್ಕದಲ್ಲೇ ಇರುವ 210ನೇ ಫ್ಲ್ಯಾಟ್‌ ಆರು ತಿಂಗಳಿನಿಂದ ಖಾಲಿ ಇದ್ದ ಕಾರಣಕ್ಕೆ ಸ್ವಚ್ಛಗೊಳಿಸಲು ತಾಯಿ ಲಕ್ಷ್ಮಿದೇವಿ ಅವರೊಂದಿಗೆ ಭಾಗ್ಯರೇಖಾ ಹೋಗಿದ್ದರು.

ಈ ವೇಳೆ ಭೀಮ ಸೇನರಾವ್‌ ಮಗಳ ಮನೆಯಲ್ಲಿ ಮಲಗಿದ್ದರು. ತಾಯಿ ಮತ್ತು ಮಗಳು ಮನೆ ಶುಚಿಗೊಳಿಸುವ ಸಂದರ್ಭದಲ್ಲಿ ಸಂಜೆ 4.15ಕ್ಕೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಇಬ್ಬರು ಬಾಲ್ಕಾನಿಗೆ ಓಡಿ ಬಂದು ರಕ್ಷಣೆಗಾಗಿ ಪಕ್ಕದ ಮತ್ತೊಂದು ಫ್ಲ್ಯಾಟ್‌ನಲ್ಲಿಮಲಗಿದ್ದ ಪತಿಗೆ ಪೋನ್‌ ಮಾಡಿದ್ದಾರೆ. ಅಷ್ಟರೊಳಗೆ ಬೆಂಕಿ ಜೋರಾಗಿ ಎರಡೂ ಫ್ಲ್ಯಾಟ್‌ಗಳಿಗೆ ಕೆನ್ನಾಲಗೆ ಚಾಚಿದೆ. ಬಾಲ್ಕನಿಯಲ್ಲೇ ಬೆಂಕಿಯ ನಡುವೆ ಸಿಲುಕಿಕೊಂಡಿದ್ದ ಪತ್ನಿ ಹಾಗೂ ಅತ್ತೆ ಅವರನ್ನು ರಕ್ಷಿಸಲು ಭೀಮಸೇನರಾವ್‌ ಅವರು ಪ್ರಯತ್ನ ನಡೆಸಿದ್ದಾರೆ.

ಬೆಂಕಿ ಜೋರಾಗಿದ್ದರಿಂದ ಅದು ಸಾಧ್ಯವಾಗಿಲ್ಲ. ಅಮ್ಮ ಹಾಗೂ ಮಗಳು ಇಬ್ಬರು ಫ್ಲ್ಯಾಟ್‌ನ ಬಾಲ್ಕನಿಯಲ್ಲಿ ಸಿಲುಕಿ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಆದರೆ ಬೆಂಕಿ ಮತ್ತಷ್ಟು ಜೋರಾಗಿದ್ದರಿಂದ ಮತ್ತು ಬಾಲ್ಕನಿಗೆ ಗ್ರಿಲ್‌ ಹಾಕಿದ್ದರಿಂದ ಯಾರೂ ರಕ್ಷಣೆಗೆ ಧಾವಿಸಲು ಸಾಧ್ಯವಾಗಲಿಲ್ಲ. ಇಬ್ಬರು ಅಲ್ಲೇ ಸಜೀವ ದಹನವಾಗಿದ್ದಾರೆ. ಭೀಮಸೇನರಾವ್‌ ತಲೆ ಭಾಗಕ್ಕೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.

ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ

ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಅಗ್ನಿಶಾಮಕ ದಳ ಕೆಲ ಹೊತ್ತಿನಲ್ಲೇ ಸ್ಥಳಕ್ಕೆ ಆಗಮಿಸಿತಾದರೂ ತಕ್ಷಣದ ಕಾರ್ಯಾಚರಣೆ ಕೈಗೊಳ್ಳಲು ಹಲವು ಅಡ್ಡಿಗಳು ಎದುರಾಗಿವೆ. ಕಟ್ಟಡದ ಸಮೀಪಕ್ಕೆ ಅಗ್ನಿಶಾಮಕ ವಾಹನ ಕೊಂಡೊಯ್ಯಲು ಆಗಲಿಲ್ಲ. ದೂರದಲ್ಲೇ ನಿಂತು ನೀರು ಹಾಯಿಸಿ ಬೆಂಕಿ ನಂದಿಸುವ ಯತ್ನ ಮಾಡಲಾಯಿತು. ಸಾಕಷ್ಟು ಹೊತ್ತು ನೀರು ಹಾಯಿಸಿದರೂ ಬೆಂಕಿ ಶಮನವಾಗಲಿಲ್ಲ. ಸುಮಾರು 3 ಗಂಟೆಗೂ ಹೆಚ್ಚು ಕಾಲ ಬೆಂಕಿ ಉರಿಯುತ್ತಲೇ ಇತ್ತು. ಹರಸಾಹಸಪಟ್ಟು ಅಗ್ನಿ ನಂದಿಸಲಾಯಿತು.

ನಿವಾಸಿಗಳು ಶಿಫ್ಟ್‌

ನಾಲ್ಕು ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ72 ಫ್ಲ್ಯಾಟ್‌ಗಳಿವೆ. ಬೆಂಕಿ ನಂದಿಸಿದರೂ ಅಪಾರ್ಟ್‌ಮೆಂಟ್‌ ಸದ್ಯಕ್ಕೆ ಸುರಕ್ಷಿತವಾಗಿಲ್ಲ ಎಂಬ ನಿಟ್ಟಿನಲ್ಲಿ ಎಲ್ಲ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಕೆಲವರು ಸಮೀಪದಲ್ಲಿ ಇರುವ ಸಂಬಂಧಿಗಳ ಮನೆಗೆ ತೆರಳಿದ್ದಾರೆ. ಸುಮಾರು 15 ಕುಟುಂಬಗಳಿಗೆ ಪಕ್ಕದ ಜಾಹ್ನವಿ ಎನ್‌ಕ್ಲೇವ್‌ ಅಪಾರ್ಟ್‌ಮೆಂಟ್‌ನ ಕ್ಲಬ್‌ಹೌಸ್‌ನಲ್ಲಿ ಆಶ್ರಯ ಕಲ್ಪಿಸಿ, ಅಗತ್ಯ ಸೌಲಭ್ಯ ಒದಗಿಸಲಾಗಿದೆ. ಬೆಂಕಿಯ ಕೆನ್ನಾಲಿಗೆ ಹಿನ್ನೆಲೆಯಲ್ಲಿ ಇಡೀ ಅಪಾರ್ಟ್‌ಮೆಂಟ್‌ನಲ್ಲಿ ಹೊಗೆ ಸುತ್ತಿಕೊಂಡು ಮನೆಯ ಒಳಗಿದ್ದವರು ತಕ್ಷಣವೇ ಹೊರಗೆ ಓಡಿ ಬಂದಿದ್ದಾರೆ. ಇಡೀ ಅಪಾರ್ಟ್‌ಮೆಂಟ್‌ ಗೋಡೆಗಳು ಹೊಗೆಯಿಂದ ಕಪ್ಪಾಗಿವೆ.

ಅಗ್ನಿ ಅನಾಹುತ ತಡೆ ವ್ಯವಸ್ಥೆಯಲ್ಲಿ ಲೋಪ

2015ರಲ್ಲಿಅಪಾರ್ಟ್‌ಮೆಂಟ್‌ ನಿರ್ಮಿಸಲಾಗಿತ್ತು. ಬಿಬಿಎಂಪಿ ಅಧಿಕಾರಿಗಳ ಪ್ರಕಾರ ಅಪಾರ್ಟ್‌ಮೆಂಟ್‌ ಬಿಲ್ಡರ್‌ ಸಿಸಿ (ಕಟ್ಟಡ ಕಾಮಗಾರಿ ಪ್ರಾರಂಭ ಪ್ರಮಾಣಪತ್ರ) ಹಾಗೂ ಒಸಿ (ಸ್ವಾಧೀನ ಪ್ರಮಾಣಪತ್ರ) ಪಡೆದಿದ್ದಾರೆ. ಆದರೆ, ಅಗ್ನಿಶಾಮಕ ವಾಹನಗಳು ಸುಲಭವಾಗಿ ಕಟ್ಟಡದ ಬಳಿ ತೆರಳಲು ಸೆಟ್‌ಬ್ಯಾಕ್‌ ಜಾಗ ಬಿಟ್ಟಿರಲಿಲ್ಲ. ಅಗ್ನಿ ಅನಾಹುತ ತಡೆಗೆ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಬೆಂಕಿ ನಂದಿಸುವ ಯಾವುದೇ ವ್ಯವಸ್ಥೆ ಅಪಾರ್ಟ್‌ಮೆಂಟ್‌ನಲ್ಲಿಇರಲಿಲ್ಲ. ಸೆಕ್ಯೂರಿಟಿ ಗಾರ್ಡ್‌ ಇದ್ದರೂ ಅವರು ಮಾಹಿತಿ ಕೊಡುವಷ್ಟರಲ್ಲಿಬೆಂಕಿ ಜೋರಾಗಿತ್ತು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

Leave a Reply

comments

Related Articles

error: