
ಮೈಸೂರು
ಹೆಣ್ಣು ಮಕ್ಕಳು ಮಹಿಳೆಯರಲ್ಲಿ ಅಪೌಷ್ಟಿಕತೆ ನಿವಾರಣೆ ಯಾಗಬೇಕು : ಎಂ.ರಾಜೇಶ್
ಮೈಸೂರು, ಸೆ.22:- ದೇಶಕ್ಕೆ ಭವಿಷ್ಯದಲ್ಲಿ ಗುಣಮಟ್ಟದ ಮಕ್ಕಳನ್ನು ಮಾತೆಯರು ಬಳುವಳಿಯಾಗಿ ನೀಡಬೇಕಾದರೆ ಮೊದಲು ಹೆಣ್ಣುಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆ ನಿವಾರಣೆಯಾಗಬೇಕು ಎಂದು ಕೀಳನಪುರ ಗ್ರಾ.ಪಂ ಸದಸ್ಯ ಎಂ.ರಾಜೇಶ್ ಹೇಳಿದರು.
ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಎಂ.ಸಿ ಹುಂಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯವಂತ ಮಕ್ಕಳು ದೇಶಕ್ಕೆ ಬೇಕೆಂದರೆ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ವರುಣ ಪೊಲೀಸ್ ಠಾಣೆಯ ಪಿಎಸ್ಐ ಲಕ್ಷ್ಮಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಪ್ರೌಡಾವಸ್ಥೆಯಿಂದಲೇ ಗುಣಮಟ್ಟದ ಸಮತೋಲನ ಆಹಾರವನ್ನು ಪೋಷಕರು ನೀಡಿದ್ದಲ್ಲಿ ಅಪೌಷ್ಟಿಕತೆಯನ್ನು ತಡೆಗಟ್ಟಬಹುದು. ಹೆರಿಗೆ ವೇಳೆ ತಾಯಿ ಮತ್ತು ಮಗುವಿನ ಸಾವನ್ನಪ್ಪುವುದನ್ನು ತಡೆಗಟ್ಟಲು ಸರ್ಕಾರ ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಸುತ್ತಿದೆ. ಹೆಣ್ಣು ಮಕ್ಕಳಿಗೆ ಬಾಯಿ ರುಚಿಸುವಂತಹ ಜಂಕ್ ಫುಡ್ ನೀಡುವುದನ್ನು ಕಡಿಮೆಗೊಳಿಸಿ, ದೇಶಿಯ ಆಹಾರವನ್ನು ಸೇವಿಸಲು ನೀಡಬೇಕು ಎಂದು ಸಲಹೆ ನೀಡಿದರು.
ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಕೆ.ಶಾಂತಿ ಕಾರ್ಯಕ್ರಮದ ಬಗ್ಗೆ ತಿಳಿಸಿಕೊಟ್ಟರು. ಗ್ರಾ.ಪಂ ಸದಸ್ಯರಾದ ಶೈಲಾ ಸುರೇಶ್, ವಿಜಯಕುಮಾರ್, ಅಭಿವೃದ್ಧಿ ಅಧಿಕಾರಿ ಮಾಯಪ್ಪ, ಮುಖ್ಯ ಶಿಕ್ಷಕಿ ವೇದರತ್ನ, ಡೈರಿ ಅಧ್ಯಕ್ಷ ಪಾಂಡುರಂಗ, ನಿರ್ದೇಶಕ ಚಿಕ್ಕತಾಯಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ರೇಖಾ, ಮಹದೇವಮ್ಮ, ವೀಣಾ, ಸಹಾಯಕಿಯರಾದ ಪಾರ್ವತಿ, ಮಂಜುಳ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಣ ಮಹದೇವ, ಸಹ ಶಿಕ್ಷಕ ಜಯಮಲ್ಲರಾಜೇ ಅರಸ್, ಗ್ರಾಮೀಣ ನೈರ್ಮಲ್ಯ ಸಂಸ್ಥೆಯ ಪ್ರತಿಮಾ, ಪಾರ್ವತಿ, ಮುಖಂಡರಾದ ಸಣ್ಣಯ್ಯ, ಮಹದೇವ ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)