ಕರ್ನಾಟಕಪ್ರಮುಖ ಸುದ್ದಿ

ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ ವಿತರಣೆ ಕಾರ್ಯ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ರಾಜ್ಯ(ಹಾಸನ) ಸೆ.23:-ಎತ್ತಿನ ಹೊಳೆ ಯೋಜನೆಯ ಏತ ಕಾಮಗಾರಿ ಹಾಗೂ ಗುರುತ್ವ ಕಾಲುವೆಯ 92 ಗ್ರಾಮಗಳ ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ ವಿತರಣೆ ಕಾರ್ಯ ತ್ವರಿತವಾಗಿ ಮುಗಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎತ್ತಿನ ಹೊಳೆ ಯೋಜನೆಯ ಕಾಮಗಾರಿ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಇದೊಂದು ಮಹತ್ವಕಾಂಕ್ಷಿ ಯೋಜನೆಯಾಗಿದ್ದು ಕಾಮಗಾರಿಗೆ ಸಂಬಂಧಿಸಿದ ಸಣ್ಣಸಣ್ಣ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ತುರ್ತಾಗಿ ಬಗೆಹರಿಸಿಕೊಳ್ಳಬೇಕು ಎಂದರು.

ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅವಾರ್ಡ್ ಪಾಸಾದ ತಕ್ಷಣ ರೈತರಿಗೆ ನೊಟೀಸ್ ನೀಡಿ ಹಣ ಪಾವತಿಗೆ ಕ್ರಮವಹಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಕಲೇಶಪುರ ತಾಲ್ಲೂಕು ಹಾನುಬಾಳು ಹೋಬಳಿ ಕಾಡುಮನೆ ಗ್ರಾಮದಲ್ಲಿ ಅರಣ್ಯ ಇಲಾಖೆಯ ಭೂಮಿ ಹಾಗೂ ಖಾಸಗಿ ಭೂಮಿಯ ಗೊಂದಲವನ್ನು ಪರಿಶೀಲಿಸಿ ಬಗೆಹರಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಬೇಲೂರು ತಾಲ್ಲೂಕಿನ ಹಳೇಬೀಡು ಹೋಬಳಿಯ ಐದಳ್ಳ ಕಾವಲು ಗ್ರಾಮದ ಕಾಮಗಾರಿಗೆ ಅಗತ್ಯವಿರುವ ಭೂಮಿಗೆ ಸಂಭಂಧಿಸಿದಂತೆ ಜಂಟಿ ಸರ್ವೆ ಕಾರ್ಯ ವೇಗವಾಗಿ ಪೂರ್ಣಗೊಳಿಸುವಂತೆ ಆರ್.ಗಿರೀಶ್ ತಿಳಿಸಿದರು.

ಐತೀರ್ಪು ಪ್ರಕರಣಗಳಲ್ಲಿ ಪರಿಹಾರ ಪಾವತಿಯಾಗದ ಉಳಿದ ಮೊತ್ತವನ್ನು ನ್ಯಾಯಾಲಯದಲ್ಲಿ ಜಮಾ ಮಾಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಪ್ರತಿ ತಿಂಗಳು ಎತ್ತಿನ ಹೊಳೆ ಯೋಜನೆ ಕಾಮಗಾರಿಗೆ ಅಡಚರಣೆಯಾಗುತ್ತಿರುವ ಸಮಸ್ಯೆಗಳ ಕುರಿತು ತಾಲ್ಲೂಕು ಹಂತದಲ್ಲಿ ಹಾಗೂ ಜಿಲ್ಲಾ ಹಂತದಲ್ಲಿಯೂ ಸಭೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಎತ್ತಿನಹೊಳೆ ಯೋಜನೆಯ ಕಾಮಗಾರಿಗೆ ವಶ ಪಡಿಸಿಕೊಂಡಿರುವ ಭೂಮಿಯ ರೈತರಿಗೆ ಪರಿಹಾರ ಹಣ ಪಾವತಿಗೆ ಅಗತ್ಯವಿರುವ ದಾಖಲೆಗಳನ್ನು ನೀಡುವಲ್ಲಿ ವಿಳಂಬವಾಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಭೂಸ್ವಾಧೀನ ವ್ಯಾಪ್ತಿಗೆ ಒಳಪಡುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯ ಕಾಲಮಿತಿಯೊಳಗೆ ಪರಿಶೀಲಿಸಿ ವೇಗವಾಗಿ ಅನುಮತಿ ನೀಡಬೇಕು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ಅವರು ಮಾತನಾಡಿ ಎತ್ತಿನಹೊಳೆ ಯೊಜನೆಯ ಕಾಮಗಾರಿಗೆ ಅಗತ್ಯವಿರುವ ಮರ ಕಟಾವಿಗೆ ತ್ವರಿತವಾಗಿ ಅನುಮತಿ ನಿಡಲಾಗುವುದು ಹಾಗೂ ಇನ್ನಿತರ ಸಹಕಾರವನ್ನು ಅರಣ್ಯ ಇಲಾಖೆ ವತಿಯಿಂದ ನೀಡಲಾಗುವುದು ಎಂದು ತಿಳಿಸಿದರು

ಸಭೆಯಲ್ಲಿ ಎತ್ತಿನಹೊಳೆ ಯೋಜನೆ ವಿಭಾಗದ ಕಾರ್ಯಪಾಲಕ ಅಭಿಯಂತರಾದ ಆನಂದ್ ಕುಮಾರ್, ಭೂದಾಖಲೆಗಳ ಉಪನಿರ್ದೇಶಕರಾದ ಹೇಮಲತಾ, ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಲ್ಪಶ್ರೀ ಅವರು ಯೋಜನೆಗಳಿಗೆ ಸಂಭಂಧಿಸಿದಂತೆ ಕಾಮಗಾರಿ ವಿಳಂಭಕ್ಕೆ ಆಗುತ್ತಿರುವ ಕಾರಣ ಹಾಗೂ ಆಗತ್ಯವಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: