
ಮೈಸೂರು
ವಾಣಿಜ್ಯ ತೆರಿಗೆ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಪತ್ರ: ಪ್ರಕರಣದ ತನಿಖೆ ನಡೆಯುತ್ತಿದೆ; ಡಾ.ಚಂದ್ರಗುಪ್ತ
ಗ್ಯಾಂಗ್ ರೇಪ್ ಪ್ರಕರಣದ ಬಳಿಕ ಹೊರ ವಲಯದಲ್ಲಿ ಪೊಲೀಸರ ಗಸ್ತು ಹೆಚ್ಚಳ
ಮೈಸೂರು,ಸೆ.23-ನಗರದ ವಾಣಿಜ್ಯ ತೆರಿಗೆ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಪತ್ರ ಬಂದಿದ್ದ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹೇಳಿದ್ದಾರೆ.
ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬೆಳಿಗ್ಗೆ ಸುಮಾರು 11.20 ನಿಮಿಷಕ್ಕೆ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಮಾಹಿತಿ ಬರುತ್ತದೆ. ವಾಣಿಜ್ಯ ತೆರಿಗೆ ಕಚೇರಿಯ ಒಂದು ಲೇಟರ್ ಅನ್ನು ಸಿಕ್ಕಿಸಿರುತ್ತಾರೆ. ಅದರಲ್ಲಿ ಕಚೇರಿಯಲ್ಲಿ ಬಾಂಬ್ ಇದೆ. ಮಧ್ಯಾಹ್ನ 12 ಗಂಟೆಗೆ ಬಾಂಬ್ ಬ್ಲಾಸ್ಟ್ ಆಗುತ್ತೆ ಅಂತ. ತಕ್ಷಣ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ ಸ್ಥಳಕ್ಕೆ ಧಾವಿಸಿ ಅವರಿಗೆ ಮಾಹಿತಿಕೊಟ್ಟು ಸಿಬ್ಬಂದಿಯನ್ನು ಕಚೇರಿಯಿಂದ ಹೊರಗೆ ಕಳುಹಿಸಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಅಧಿಕಾರಿಗಳು ಎರಡು ಬಾರಿ ಸ್ಥಳವನ್ನು ಪರಿಶೀಲಿಸಿದ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಪರಿಗಣಿಸಿ ಪ್ರಕರಣವನ್ನು ದಾಖಲಿಸಲಾಗಿದೆ. ಯಾರು ಹೀಗೆ ಮಾಡಿರುವುದು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.
ದಸರಾ ಹಿನ್ನೆಲೆಯಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ಹೊರಗಿನಿಂದ ಕರೆಸಿಕೊಂಡಿದ್ದೇವೆ. ಎಲ್ಲ ತಪಾಸಣೆ ಮಾಡುವಂತೆ ಹೇಳಿದ್ದೇವೆ. ಮೇಜರ್ ಆಗಿ ಲಾಡ್ಜ್ ಹಾಗೂ ಪ್ರವಾಸಿಗರು ಬಂದು ತಂಗುವಂತಹ ಸ್ಥಳಗಳ ಮೇಲೆ ತೀವ್ರ ನಿಗಾವಹಿಸಲು ಸೂಚನೆ ನೀಡಲಾಗಿದೆ. ಪ್ರತಿನಿತ್ಯ ಅಲ್ಲಿಗೆ ಬಂದವರ ಮಾಹಿತಿ ಕಲೆಹಾಕುವುದು ಮಾಲೀಕರು ಕೂಡ ಅವರ ಐಡಿ, ಫೋಟೋ ನೋಡದೆ ವಾಸ್ತವ್ಯಕ್ಕೆ ಅವಕಾಶ ಕೊಡಬಾರದು. ಇಂತಹ ಹಲವಾರು ಸೂಚನೆಗಳನ್ನು ನೀಡಿದ್ದೇವೆ. ಮುನ್ನೆಚ್ಚರಿಕೆಯಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.
ಹಲವಾರು ಬಾರಿ ನೋಡಿದ್ದೇವೆ ಬಾಡಿಗೆಗೆ ಮನೆ ಕೊಡಬೇಕಾದರೆ ಪೂರ್ವಪರವನ್ನು ಪರಿಶೀಲನೆ ಮಾಡುವುದಿಲ್ಲ. ಬೆಳೆಯುತ್ತಿರುವ ಮೈಸೂರಿನಂತಹ ನಗರದಲ್ಲಿ ಹೊರಗಿನಿಂದ ಹೆಚ್ಚಿನ ಜನರು ಬರುತ್ತಾರೆ. ಬಾಡಿಗೆಗೆ ಬಂದವರನ್ನು ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ? ಅವರ ಹಿನ್ನೆಲೆ ಏನು? ಅವರು ಹಿಂದೆ ಎಲ್ಲಿ ಬಾಡಿಗೆಗೆ ಇದ್ದರು? ಇಂತಹ ಹಲವಾರು ಅಂಶಗಳನ್ನು ಪರಿಶೀಲನೆ ಮಾಡಬೇಕು. ಇದು ಪ್ರತಿಯೊಬ್ಬರ ಕರ್ತವ್ಯ. ಸುಮ್ಮನೆ ಬಾಡಿಗೆ ಹಣಕೋಸ್ಕರ ಪೂರ್ವಪರ ಪರಿಶೀಲಿಸದೆ ಬಾಡಿಗೆ ಕೊಡಬಾರದು. ಪ್ರತಿಯೊಬ್ಬರು ತಮ್ಮ ಸಣ್ಣ ಸಣ್ಣ ಕರ್ತವ್ಯಗಳನ್ನು ನಿಭಾಯಿಸಿದರೆ ನಗರ ಸುರಕ್ಷಿತವಾಗಿರುತ್ತದೆ ಎಂದರು.
ಗ್ಯಾಂಗ್ ರೇಪ್ ಪ್ರಕರಣದ ಬಳಿಕ ಕೈಗೊಂಡಿರುವ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗ ನಾವು ನಗರದ ಹೊರವಲಯದಲ್ಲಿ ಹೆಚ್ಚಾಗಿ ಫೋಕಸ್ ಮಾಡುತ್ತಿದ್ದೇವೆ. ಏಕೆಂದರೆ ಮೈಸೂರಿಗೆ ಬಂದ ಕೆಲ ಪ್ರವಾಸಿಗರು ಟೈಂ ಪಾಸ್ ಮಾಡೋಣ ಅಂತ ಹೋಗಿ ಎಲ್ಲದಾರೂ ಕುಳಿತುಕೊಳ್ಳುವುದು ನಂತರ ಅಲ್ಲಿ ಸಣ್ಣ ಪುಟ್ಟ ಅಪರಾಧಗಳಾಗುವುದು. ಇಂತಹ ಜಾಗಗಳನ್ನು ನಾವು ಗುರುತಿಸಿದ್ದೇವೆ. ಆ ಜಾಗದಲ್ಲಿ ನಾವು ಹೆಚ್ಚಾಗಿ ಗಸ್ತಿನ ವಾಹನವನ್ನು ನಿಲ್ಲಿಸುವಂತದ್ದು, ಪದೇ ಪದೇ ಪೊಲೀಸ್ ಪೆಟ್ರೋಲ್ ಕಳುಹಿಸುವಂತದ್ದು ಈ ರೀತಿಯ ಪ್ರಕ್ರಿಯೆಗಳನ್ನು ಚಾಲನೆ ಮಾಡಿದ್ದೇವೆ. ಅಪರಾಧ ತಡೆಗೆ ಹೆಚ್ಚು ಒತ್ತು ಕೊಡವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಳೆದ ಡಿಸೆಂಬರ್ ನಿಂದ ನಗರದಲ್ಲಿ ತುರ್ತು ಪ್ರತಿಕ್ರಿಯೆ ವ್ಯವಸ್ಥೆ 112 ಚಾಲ್ತಿಯಲ್ಲಿದೆ. ಇದು ಎಲ್ಲ ರೀತಿಯ ಕರೆಗಳಿಗೆ 9 ನಿಮಿಷಗಳಲ್ಲಿನ ಕಡಿಮೆ ಅವಧಿಯಲ್ಲಿ ತಲುಪುತ್ತದೆ. ಸಾರ್ವಜನಿಕರು ಸಮಸ್ಯೆಯಲ್ಲಿದ್ದಾಗ ಈ ನಂಬರ್ ಗೆ ಕರೆ ಮಾಡಿದರೆ ಪೊಲೀಸರು ಸ್ಥಳಕ್ಕೆ ಬರುತತಾರೆ. ಇದು ಗಸ್ತು ಆಗುವುದರ ಜೊತೆಗೆ ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ಸಹಕರಿಸುತ್ತಾರೆ. ಬರುವಂತಹ ಪ್ರತಿ ದೂರು ರೆಕಾರ್ಡ್ ಆಗುತ್ತದೆ. ಹಾಗಾಗಿ ನಾವು ಹೇಳಿದೆವು ಯಾರು ಸ್ಪಂದಿಸಲಿಲ್ಲ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಸಾರ್ವಜನಿಕರು ಅನುಮಾನಸ್ಪಾದ, ಶಂಕಿತವಾಗಿ ವಸ್ತು ಅಥವಾ ವ್ಯಕ್ತಿ ಕಂಡುಬಂದಲ್ಲಿ ತಕ್ಷಣ 112 ಗೆ ಕರೆ ಮಾಡಿ. ಇದು ಸಾಕಷ್ಟು ಅನಾಹುತವನ್ನು ತಪ್ಪಿಸುತ್ತದೆ. ಎಲ್ಲರೂ ಸುರಕ್ಷಿತವಾಗಿರುತ್ತಾರೆ ಎಂದರು. (ಎಚ್.ಎನ್, ಎಂ.ಎನ್)