ದೇಶಪ್ರಮುಖ ಸುದ್ದಿ

ಪೆಗಾಸಸ್ ಪ್ರಕರಣದ ಸ್ವತಂತ್ರ ತನಿಖೆ: ಮುಂದಿನ ವಾರ ಆದೇಶ ಪ್ರಕಟ; ಸುಪ್ರೀಂ ಕೋರ್ಟ್‌

ನವದೆಹಲಿ,ಸೆ.23-ಪೆಗಾಸಸ್ ಗೂಢಚರ್ಯೆ ಪ್ರಕರಣದ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ, ಮುಂದಿನ ವಾರ ಆದೇಶ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರ ನೇತೃತ್ವದ ಪೀಠ, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಪ್ರಕಟವಾಗಬೇಕಿದ್ದ ಆದೇಶವನ್ನು, ಮುಂದಿನ ವಾರ ನೀಡಲಾಗುತ್ತದೆ’ ಎಂದು ಹೇಳಿದೆ.

ಕೇಂದ್ರ ಸರ್ಕಾರ ಪೆಗಾಸಸ್ ಗೂಢಚರ್ಯೆ ಪ್ರಕರಣದ ತನಿಖೆಗಾಗಿ ತಾಂತ್ರಿಕ ತಜ್ಞರ ಸಮಿತಿ ರಚಿಸುವ ಕುರಿತು ಸುಪ್ರೀಂ ಕೋರ್ಟ್‌ಗೆ ಮೌಖಿಕವಾಗಿ ತಿಳಿಸಿದೆ. ‘ಮುಂದಿನ ವಾರದೊಳಗೆ ತಾಂತ್ರಿಕ ತಜ್ಞರ ಸಮಿತಿಗೆ ಸದಸ್ಯರು ಅಂತಿಮಗೊಂಡ ನಂತರ, ಆದೇಶವನ್ನು ಪ್ರಕಟಿಸಲು ಸಾಧ್ಯವಾಗುತ್ತದೆ’ ಎಂದು ಪೀಠ ಹೇಳಿತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.13 ರಂದು ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಅಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯ, ಕೇಂದ್ರ ಸರ್ಕಾರ ಪೆಗಾಸಸ್ ಗೂಢಚರ್ಯೆ ಕುತಂತ್ರಾಂಶವನ್ನು ಕಾನೂನು ಬಾಹಿರವಾಗಿ ನಾಗರಿಕರ ಮೇಲೆ ಕಣ್ಗಾವಲು ಇಡಲು ಬಳಸಿದೆಯೇ, ಇಲ್ಲವೇ ಎಂದು ತಿಳಿಯಲು ಬಯಸಿರುವುದಾಗಿ’ ಕೇಳಿತ್ತು.

ಇದೇ ವೇಳೆ ರಾಷ್ಟ್ರೀಯ ಭದ್ರತೆಯನ್ನು ಉಲ್ಲೇಖಿಸಿ, ಪೆಗಾಸಸ್ ಗೂಢಚರ್ಯೆ ಕುರಿತು ಸಲ್ಲಿಸಿರುವ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ವಿವರವಾದ ಪ್ರಮಾಣ ಪತ್ರ ಸಲ್ಲಿಸಲು ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ, ನ್ಯಾಯಾಲಯಕ್ಕೆ ತಿಳಿಸಿತ್ತು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: