ಕರ್ನಾಟಕಪ್ರಮುಖ ಸುದ್ದಿ

ಕೋವಿಡ್-19; ಮಕ್ಕಳ ಪಾಲನೆ ಮತ್ತು ರಕ್ಷಣೆಗೆ ಒತ್ತು ನೀಡಿ : ರಾಜು ಮೊಗವೀರ

ರಾಜ್ಯ(ಮಡಿಕೇರಿ) ಸೆ.24:-ಕೋವಿಡ್-19 ಹಿನ್ನೆಲೆ ಸೋಂಕಿತ/ ಬಾದಿತ, ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಎಲ್ಲಾ ಮಕ್ಕಳ ಗುರುತಿಸುವಿಕೆ ಹಾಗೂ ಪುನರ್ವಸತಿ ಕಲ್ಪಿಸುವ ಬಗ್ಗೆ ಕ್ರಿಯಾ ಯೋಜನೆ ಅನುಷ್ಠಾನಗೊಳಿಸುವ ಕುರಿತು ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆಯು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೋವಿಡ್-19 ಸಂದರ್ಭದಲ್ಲಿ ಕೋವಿಡ್-19 ಬಾದಿತ, ಮಕ್ಕಳ ಪಾಲನೆ ಮತ್ತು ರಕ್ಷಣೆಗೆ ವಿವಿಧ ಇಲಾಖೆಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜೊತೆ ಕೈಜೋಡಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಜಿ.ಪಂ., ತಾ.ಪಂ.ಗ್ರಾ.ಪಂ., ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅಧಿಕಾರಿ ಸಿಬ್ಬಂದಿಗಳು ಚೈಲ್ಡ್ ಲೈನ್ 1098 ಮತ್ತು ಆಪ್ತ ಸಮಾಲೋಚನೆಗಾಗಿ 14499 ರ ಬಗ್ಗೆ ಅರಿವು ಮೂಡಿಸುವುದು, ಫಲಕ ಪ್ರದರ್ಶಿಸಲು ಕ್ರಮವಹಿಸುವುದು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಸಮಿತಿ ಮೂಲಕ ಮಾಹಿತಿ ಪಡೆದು ಅಗತ್ಯ ಕ್ರಮವಹಿಸುವಂತೆ ರಾಜು ಮೊಗವೀರ ಅವರು ಹೇಳಿದರು.
ಕೋವಿಡ್-19 ಸಾಂಕ್ರಾಮಿಕದಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಆಸ್ಪತ್ರೆಗೆ ದಾಖಲಾದಾಗ ತಾತ್ಕಾಲಿಕ ಆಶ್ರಯ ಕಲ್ಪಿಸುವುದು, ಜೊತೆಗೆ ಬಿಕ್ಷಾಟನೆಯಲ್ಲಿ ಸಂಕಷ್ಟದಲ್ಲಿರುವ ಮಕ್ಕಳು ಕಂಡುಬಂದಲ್ಲಿ ಚೈಲ್ಡ್‍ಲೈನ್‍ಗೆ ಮಾಹಿತಿ ನೀಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಮಕ್ಕಳಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ, ಚಿಕಿತ್ಸೆಗೆ ಪ್ರತ್ಯೇಕ ವೈದ್ಯಕೀಯ ತಂಡ ನಿಯೋಜಿಸುವುದು, ಕೋವಿಡ್-19 ನಿಂದ ಅನಾಥ ಮಕ್ಕಳು, ನವಜಾತ ಶಿಶುಗಳು ಕಂಡುಬಂದಲ್ಲಿ ಆಶಾ ಕಾರ್ಯಕರ್ತರು ತಕ್ಷಣವೇ ಚೈಲ್ಡ್‍ಲೈನ್ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಕೋವಿಡ್-19 ಸಾಂಕ್ರಾಮಿಕದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳು, ಬಾಲನ್ಯಾಯ ಕಾಯ್ದೆ ಪ್ರಕಾರ ಪಾಲನೆ ಮತ್ತು ರಕ್ಷಣೆಗೆ ಗಮನಹರಿಸುವುದು. ಬಾಲ ಕಾರ್ಮಿಕ ಪದ್ಧತಿ ತಡೆಯುವಲ್ಲಿ ಅಗತ್ಯ ಮಾಹಿತಿ ನೀಡುವುದು. ಮಕ್ಕಳ ರಕ್ಷಣಾ ಕಾರ್ಯದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದೊಂದಿಗೆ ಸಮನ್ವಯತೆ ಸಾಧಿಸುವುದು, ಚೈಲ್ಡ್‍ಲೈನ್‍ಗೆ ಸ್ವೀಕೃತವಾದ ಮಾಹಿತಿಯನ್ನು ಕಾರ್ಯಪಡೆಗೆ ತಿಳಿಸುವಂತೆ ಚೈಲ್‍ಲೈನ್ ಸಮಾಲೋಚಕರಿಗೆ ಹೇಳಿದರು.
ವಿವಿಧ ಸಂಘ ಸಂಸ್ಥೆಗಳ ಸಹಕಾರ ಬೇಕಿದ್ದಲ್ಲಿ ಪಡೆಯುವುದು, ಕೋವಿಡ್-19 ಕಾರಣದಿಂದ ಪೋಷಕರು ಆಸ್ಪತ್ರೆಗೆ ದಾಖಲಾದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ನುರಿತ ಸೇವಾ ಸಿಬ್ಬಂದಿಯನ್ನು ನೀಡಲು ಸಹಕರಿಸುವುದು, ಕೋವಿಡ್-19 ಬಾದಿತ ಮಕ್ಕಳು ಹಾಗೂ ಪಾಲನೆ ಮತ್ತು ರಕ್ಷಣೆಗೆ ಅಗತ್ಯವಿರುವ ಎಲ್ಲಾ ಮಕ್ಕಳ ರಕ್ಷಣೆ ಹಾಗೂ ಪುನರ್ವಸತಿ ಬಗ್ಗೆ ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರು ಮುಂದಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಕೆ.ವಿ.ಸುರೇಶ್ ಅವರು ಕಾರ್ಯಪಡೆಯ ಎಲ್ಲಾ ಸದಸ್ಯರೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯಪಡೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಕೋವಿಡ್-19 ನಿಂದಾಗಿ ಪೋಷಕರು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಎಎನ್‍ಎಂ ಮತ್ತು ಆಶಾ ಕಾರ್ಯಕರ್ತರಿಗೆ ಮಕ್ಕಳ ರಕ್ಷಣೆ ಗಮನಹರಿಸುವಂತೆ ತಿಳಿಸಲಾಗುವುದು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ಯೋಜನಾ ಸಮನ್ವಯಾಧಿಕಾರಿ ಎಂ.ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ್, ಚೈಲ್ಡ್‍ಲೈನ್ ಜಿಲ್ಲಾ ಸಂಯೋಜಕರಾದ ನವೀನ್ ಕುಮಾರ್ ಇತರರು ಹಲವು ಮಾಹಿತಿ ನೀಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: