ಪ್ರಮುಖ ಸುದ್ದಿಮೈಸೂರು

ಎಲ್ಲೇ ಮತಾಂತರ ನಡೆದರೂ ಅದನ್ನು ಮಟ್ಟ ಹಾಕುವ ಕೆಲಸ ಮಾಡುತ್ತೇವೆ : ಸಂಸದ ಪ್ರತಾಪ್ ಸಿಂಹ

ದೇವಾಲಯಗಳು ಉಳಿಯಬೇಕೆಂಬ ಕೋರಿಕೆಯನ್ನು ನೆರವೇರಿಸಿದ್ದಕ್ಕೆ ಪೂಜೆ ಸಲ್ಲಿಕೆ

ಮೈಸೂರು,ಸೆ.24:- ದೇವಾಲಯಗಳು ಉಳಿಯಬೇಕೆಂಬ  ಕೋರಿಕೆಯನ್ನು ನೆರವೇರಿಸಿದ್ದಕ್ಕೆ  101 ಗಣಪತಿಗೆ ಸಂಸದ ಪ್ರತಾಪ್ ಸಿಂಹ ಇಂದು ಪೂಜೆ ಸಲ್ಲಿಸಿದರು.

ನಂತರ ದೇವಸ್ಥಾನದಲ್ಲೇ ಸಂಸದ ಪ್ರತಾಪ್ ಸಿಂಹ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭ ಮಾತನಾಡಿ ಗಣೇಶ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದೇನೆ. ದೇವಾಲಯಗಳು ಉಳಿಯಬೇಕೆಂಬ ನಮ್ಮ ಕೋರಿಕೆಯನ್ನು ನೆರವೇರಿಸಿದ್ದಕ್ಕೆ ಪೂಜೆ ಸಲ್ಲಿಸಿ ಕೃತಜ್ಞತೆ ಸಲ್ಲಿಸಿದ್ದೇನೆ ಎಂದರು. ನಮಗೆ ಒಳ್ಳೆಯ ಸಿಎಂ ಸಿಕ್ಕಿದ್ದಾರೆ. ನಮ್ಮ ಭಾವನೆ ಆರ್ಥ ಮಾಡಿಕೊಂಡು ದೇವಸ್ಥಾನ ಉಳಿಸುವ ಬಿಲ್ ಮಂಡಿಸಿ ಪಾಸ್ ಮಾಡಿದ್ದಾರೆ. ಕೇವಲ 10 ದಿನದಲ್ಲಿ ಕಾಯ್ದೆ ಮೂಲಕ‌ ದೇವಸ್ಥಾನ ರಕ್ಷಣೆ ಮಾಡುವ ಕೆಲಸವನ್ನು ಸಿಎಂ ಮಾಡಿದ್ದಾರೆ. ಉಚ್ಚಗಣ್ಣಿ ದೇವಸ್ಥಾನವನ್ನು ಅಲ್ಲಿಂದ ಸ್ಪಲ್ಪ ದೂರದಲ್ಲೇ ಮರು ಸ್ಥಾಪನೆ ಮಾಡುತ್ತೇವೆ. ಇದೆಲ್ಲಾ ಸಾಧ್ಯವಾಗಿದ್ದು ಗಣಪತಿ ಕೃಪೆಯಿಂದ ಎಂದರು. ಉಚ್ಚಗಣಿ ದೇಗುಲದ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಬೇಕಿದೆ. ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಕೂಡ ಬರುತ್ತಾರೆ. ಜನರು ಹಾಗೂ ಸರ್ಕಾರ ದೇಣಿಗೆ ನೀಡಿದರೆ ದೇಗುಲ ಕಟ್ಟಲು ಅನುಕೂಲ ಆಗಲಿದೆ ಎಂದರು.

ಗೂಳಿಹಟ್ಟಿ ಶೇಖರ್ ರಂತಹ ಜನಪ್ರತಿನಿಧಿಯೇ ಮತಾಂತರದ ಬಗ್ಗೆ ತಮ್ಮ ನೋವು ತೋಡಿಕೊಂಡಿದ್ದಾರೆ. ನಾನು ಮೊದಲಿಂದಲೂ ಮತಾಂತರದ  ವಿರುದ್ಧ ಇದ್ದೇನೆ. ಮತಾಂತರ ನಿಷೇಧ ಮಸೂದೆ ತರುವ ಬಗ್ಗೆ ಬಿಷಪ್ ಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಸೂದೆ ವಿಚಾರದಲ್ಲಿ ಬಾಲ‌ ಸುಟ್ಟ ಬೆಕ್ಕು ಥರ ಯಾಕೆ ಬಿಷಪ್ ಗಳು ಚಡಪಡಿಸುತ್ತಿದ್ದಾರೆ. ನೀವು ಮತಾಂತರವನ್ನು ಮಾಡದೇ ಇದ್ದರೆ ಮಸೂದೆ ಬಂದರೆ ನಿಮಗೆ ಯಾಕೆ ಭಯ? ಮತಾಂತರ ಮಾಡದೇ ಇದ್ದರೆ ನೀವು ಸುಮ್ಮನೆ ಇರಿ. ಮತಾಂತರ ಮಾಡುವವರಿಗೆ ಮಸೂದೆ ಬಿಸಿ ತಟ್ಟುತ್ತದೆ. ಕೇರಿ, ಕಾಲೋನಿಗಳಿಗೆ ಹೋಗಿ ಕೆಲವರು ಮತಾಂತರ ಮಾಡುತ್ತಾರೆ. ಕೇರಿ ಕಾಲೋನಿಗೆ ಹೋಗಿ ಕೆಲವರು ಹೆಲ್ತ್ ಸೆಂಟರ್ ಓಪನ್ ಮಾಡಿ ಆ ಮೂಲಕ ಮತಾಂತರಕ್ಕೆ ಸೆಳೆಯುತ್ತಾರೆ ಎಂದು ಆರೋಪಿಸಿದರು.

ಹಿಂದೂ ಧರ್ಮ‌ದ ಶ್ರೇಷ್ಠತೆಯಲ್ಲಿ ನಂಬಿಕೆ ಇಟ್ಟಿದ್ದೇವೆ. ಇಸ್ಲಾಂ, ಕ್ರೈಸ್ತರು ಸಂಖ್ಯೆಯ ಹೆಚ್ಚಳವನ್ನೇ ಶ್ರೇಷ್ಠತೆ ಅಂದು ಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ಭಾಗದಲ್ಲಿ ಮತಾಂತರ ನಡೆಯುತ್ತಿದೆ. ಮೈಸೂರು ಭಾಗದಲ್ಲಿ ಮಾತ್ರವಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲೂ ಮತಾಂತರ ನಡೆಯುತ್ತಿದೆ. ನಮ್ಮ ಧರ್ಮದ ಮಠಾಧೀಶರು ಈ ಬಗ್ಗೆ ಗಮನಹರಿಸಿ ಮತಾಂತರಕ್ಕೆ ಜ‌ನ ಒಳಗಾಗದಂತೆ ತಡೆಯಬೇಕು ಎಂದರು.

ಕಾಳ ಸಂತೆಯಲ್ಲಿ ಕಳ್ಳತನದ ಮಾಲು ಸೇಲ್ ಆಗುತ್ತೆ. ನೀವ್ಯಾಕೆ ಕೇರಿಗಳಿಗೆ ಹೋಗಿ ಗಿಫ್ಟ್ ಕೊಡ್ತಿರಾ.! ಜನರನ್ನ ಯಾಕೆ ಮರಳು ಮಾಡುವ ಕೆಲಸ ಮಾಡುತ್ತೀರಾ. ನೀವೂ ಚಿಕಿತ್ಸೆ ಕೊಡಿ, ಅದು ಬಿಟ್ಟು ಮ್ಯಾಜಿಕ್ ಮಾಡಬೇಡಿ. ಚಿಕಿತ್ಸೆ ಕೊಡಬೇಕು ಅಂದ್ರೆ ಮೊದಲು ಏಸು ಸ್ವಾಮಿಗೆ ಪೂಜೆ ಮಾಡಿ ಅಂತಾರೆ. ಬಳಿಕ ಚಿಕಿತ್ಸೆ ಕೊಟ್ಟು ಏಸು ಸ್ವಾಮಿಯೇ ಕಾಪಾಡಿದ್ದು ಅಂತೀರಾ. ಹೀಗೆ ಮರಳು ಮಾಡಿ ಮತಾಂತರ ಮಾಡುವುದು ನಡೆದಿದೆ. ಇದು ಸರಿಯಾದ ಕ್ರಮ ಅಲ್ಲ. ಇದೆಲ್ಲವನ್ನು ನಾವು ಕೂಡ ನೋಡಿದ್ದೇವೆ ಎಂದರು.  ಗೂಳಿಹಟ್ಟಿ ಶೇಖರ್ ಒಬ್ಬ ಜನಪ್ರತಿನಿಧಿ. ಅವರ ತಾಯಿಯೇ ಮತಾಂತರಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ. ಜನರನ್ನು ಮೋಸ ಮಾಡಿ‌, ಮರಳು ಮಾಡಿ ಮತಾಂತರ ಮಾಡೋದು ತಪ್ಪು. ನಾನು ಪತ್ರಕರ್ತನಾಗಿದ್ದ ವೇಳೆಯೇ ಈ ಬಗ್ಗೆ ಬರೆದಿದ್ದೆ. ಮತಾಂತರ ಮಾಡುತ್ತಿದ್ದವರಿಗೆ ಆತಂಕ ಇರುತ್ತೆ. ಪಾದ್ರಿಗಳಿಗೇ ಏಕೆ ಈ ಚಡಪಡಿಕೆ, ಆತಂಕ. ಯಾಕೆ ಏಕಾಏಕಿ ಹೋಗಿ ಸಿಎಂಗೆ ಮನವಿ ಮಾಡಿದ್ದಾರೆ. ಮರುಳು ಮಾಡುವಂತ ಈ‌ ಮತಾಂತರ ನಿಷೇಧ ಆಗಬೇಕು. ಲಾರಿಯಲ್ಲಿ ತುಂಬಿಕೊಂಡು ಹೋಗಿ ಗಿಫ್ಟ್ ಕೊಡ್ತಾರೆ. ಯಾಕೆ ಇದೆಲ್ಲ ಮಾಡಬೇಕು? ಮೊದಲು ಮತಾಂತರ ನಿಲ್ಲಬೇಕು ಎಂದು ಆಗ್ರಹಿಸಿದರು.

ಮದರ್ ತೆರೇಸಾ ಅವರನ್ನು ಸಂತ ಪದವಿಗೆ ಹೋಗುವ ಮೊದಲು ಮ್ಯಾಜಿಕ್ ಮಾಡಲು ಹೇಳಲಾಗಿತ್ತು. ನಮ್ಮಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ನಾವು ಬೆಲೆ ಕೊಡುತ್ತೇವೆ. ಆದರೆ ಮದರ್ ತೆರೇಸಾ ಅವರಿಂದ ಮ್ಯಾಜಿಕ್ ಮಾಡಿ ಸಂತರನ್ನಾಗಿ ಮಾಡಲಾಯ್ತು. ಇದು ಮಂದಿಯನ್ನು ಮಂಗ್ಯಾ ಮಾಡುವ ತಂತ್ರ. ಈಗಲೂ ಅದನ್ನೇ ಮತಾಂತರಕ್ಕೆ ಬಳಸಲಾಗುತ್ತಿದೆ. ನಮ್ಮ ಧರ್ಮ ಶ್ರೇಷ್ಠತೆಯನ್ನು ನಂಬಿದವರು. ನಾವು ಆಕ್ರಮಣ ಪ್ರಹಾರ ಮಾಡುವುದಿಲ್ಲ. ಆದರೆ ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮಗೆ ಇದೆ. ರಾಜ್ಯದ ಯತಿಗಳು ಮತಾಂತರದ ವಿರುದ್ದ ಹೋರಾಟವನ್ನು ಮಾಡಬೇಕು ಎಂದರು.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮತಾಂತರ ನಡೆದರೂ ನಾವು ಬಿಡಲ್ಲ. ಎಲ್ಲೇ ಮತಾಂತರ ನಡೆದರೂ ಅದನ್ನು ಮಟ್ಟ ಹಾಕುವ ಕೆಲಸ ಮಾಡುತ್ತೇವೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: