ಕರ್ನಾಟಕಪ್ರಮುಖ ಸುದ್ದಿ

ಅಧಿವೇಶನ ವಿಸ್ತರಣೆಗೆ ಆಗ್ರಹಿಸಿ ಸದನದ ಬಾವಿಗಿಳಿದು ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು,ಸೆ.24-ಅಧಿವೇಶನದ ಕೊನೆಯ ದಿನವಾದ ಇಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಅಧಿವೇಶನವನ್ನು ಒಂದು ವಾರ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಇತರ ವಿಚಾರಗಳ ಕುರಿತಾಗಿ ಚರ್ಚೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಿದ ಕಾಂಗ್ರೆಸ್ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಜನರ ಸಮಸ್ಯೆ ಚರ್ಚೆ ಮಾಡಬೇಕಿದೆ. ನಮ್ಮ‌ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗದ ಕಾರಣ ಕಾಂಗ್ರೆಸ್ ಸದಸ್ಯರು ಧರಣಿ ಮಾಡುತ್ತಿದ್ದಾರೆ. ಜನರ ಸಮಸ್ಯೆಗಳು ಚರ್ಚೆಯಾಗುತ್ತಿಲ್ಲ ಈ ನಿಟ್ಟಿನಲ್ಲಿ ಒಂದು ವಾರ ಸದನ ವಿಸ್ತರಣೆ ಮಾಡಿ ಎಂದು ಆಗ್ರಹ ಮಾಡಿದರು.

ಆರು ತಿಂಗಳ ಬಳಿಕ ಸದನ‌ ಸೇರಿದೆ. ಜನರ ಸಮಸ್ಯೆಯ ಬಗ್ಗೆ ಚರ್ಚೆ ನಡೆಯಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚೆ ಮಾಡಬೇಕು ಸಮಯ ಎಲ್ಲಿದೆ? ಎಂದು ಪ್ರಶ್ನಿಸಿದರು.‌ ಎನ್ ಇ ಪಿಯನ್ನು ನಾಗಪುರ ಎಜುಕೇಶನ್ ಪಾಲಿಸಿ ಎಂದು ಕರೆದ ಸಿದ್ದರಾಮಯ್ಯ ಈ ಬಗ್ಗೆ ಚರ್ಚೆ ಆಗಬೇಕು ಎಂದು ಆಗ್ರಹ ಮಾಡಿದರು. ಎನ್ ಇಪಿಯನ್ನು ನಾಗಪುರ ಶಿಕ್ಷಣ ನೀತಿ ಎಂದಿದ್ದಕ್ಕೆ ನಾಗ್ಪುರ ಎಜುಕೇಶನ್ ಪಾಲಿಸಿ ಆದರೆ ತಪ್ಪೇನು? ಸ್ಪೀಕರ್ ಪ್ರಶ್ನಿಸಿದರು.

ಗದ್ದಲದ ಮಧ್ಯೆ ಪ್ರತಿಕ್ರಿಯಿಸಿದ ಸಿಎಂ, ರಾಷ್ಟ್ರೀಯ ಶಿಕ್ಷಣ ನೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನಡೆಸುವಾಗಿನ, ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಣ ನೀತಿಯಾಗಿದೆ ಎಂದು ಸಮರ್ಥಿಸಿಕೊಂಡರು.

ಆರ್ ಎಸ್ಎಸ್ ಎಜುಕೇಷನ್ ಪಾಲಿಸಿ ಎಂದೇ ಕರೆಯಿರಿ ನಾವೇನು ಚಿಂತೆ ಮಾಡಲ್ಲ. ಬದಲಾವಣೆಗೆ ನೀವು ತಯಾರಿಲ್ಲ. ಇದೊಂದು ಉತ್ತಮ ನೀತಿಯಾಗಿದೆ. ಭಾರತೀಯರಿಗಾಗಿ, ಭಾರತೀಯರಿಗೋಸ್ಕರ, ಭಾರತೀಯ ಭವಿಷ್ಯಕ್ಕಾಗಿ, ಭಾರತೀಯ ಮಕ್ಕಳ ಭವಿಷ್ಯಕ್ಕಾಗಿ ಮಾಡಿದ ನೀತಿ ಇದಾಗಿದೆ. ಕಾಂಗ್ರೆಸ್ ದು ವಿದೇಶಿ ಪ್ರೇರಿತ ಶಿಕ್ಷಣ ನೀತಿಯಾಗಿದೆ. ಕಾಂಗ್ರೆಸ್ ನದ್ದು ಗುಲಾಮಗಿರಿಯ ಶಿಕ್ಷಣ ನೀತಿಯಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಭಿತ್ತಿಪತ್ರ ಪ್ರದರ್ಶನ ಮಾಡಿದರೆ ಬಿಜೆಪಿ ಸದಸ್ಯರು ಆರ್.‌ಎಸ್.‌ಎಸ್ ಜಿಂದಾಬಾದ್ ಎಂದು ಘೋಷಣೆ ಹಾಕಿದರು.‌ ಈ ಘೋಷಣೆ ಹಾಗೂ ಗದ್ದಲಗಳ ನಡುವೆಯೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೋವಿಡ್ ನಿರ್ವಹಣೆ ಕುರಿತಾದ ಕಾಂಗ್ರೆಸ್ ಆರೋಪಗಳಿಗೆ ಉತ್ತರ ನೀಡಿದರು.

Leave a Reply

comments

Related Articles

error: