ಮೈಸೂರು

ಕೊರೋನಾ ಹಿನ್ನೆಲೆ : ದಸರಾ ಮಹೋತ್ಸವದಲ್ಲಿ ಈ ಬಾರಿಯೂ ಜಟ್ಟಿ ಕಾಳಗಕ್ಕೆ ಬ್ರೇಕ್

ಮೈಸೂರು,ಸೆ.25:-  ಇನ್ನು ಎರಡೇ ವಾರಗಳಲ್ಲಿ ಆರಂಭವಾಗಲಿರುವ  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021 ಅಂಗವಾಗಿ ಪಾರಂಪರಿಕ ಕಾರ್ಯಕ್ರಮಗಳು ನಿಗದಿಯಾಗಿವೆ. ಅರಮನೆಯಲ್ಲಿ ಪಾರಂಪರಿಕ ದಸರಾ ಕಾರ್ಯಕ್ರಮ ನಿಗದಿಯಾಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿಯೂ  ಜಟ್ಟಿ‌ ಕಾಳಗಕ್ಕೆ ಬ್ರೇಕ್ ಹಾಕಲಾಗಿದೆ.

ಅಕ್ಟೋಬರ್ 1ರಂದು ರತ್ನ ಖಚಿತ ಸಿಂಹಾಸನ ಜೋಡಣೆ ಮಾಡಲಾಗುತ್ತಿದೆ. ಹಾಗಾಗಿ ಅ. 1ರಂದು ಅರಮನೆಗೆ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿದೆ.   ಅಕ್ಟೋಬರ್ 7 ರಿಂದ 14ರವರೆಗೂ ಅರಮನೆಯಲ್ಲಿ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಅಕ್ಟೋಬರ್ 7ರಂದು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ. ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನ ಏರಿ ಔಪಚಾರಿಕವಾಗಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.   ಕಳೆದ ಬಾರಿ ಕೂಡ ಕೊರೋನಾ ಹಿನ್ನೆಲೆಯಲ್ಲಿ ಸರಳ ಮತ್ತು ಸಾಂಪ್ರದಾಯಿಕ ದಸರಾವನ್ನು ಆಚರಣೆ ಮಾಡಲಾಗಿತ್ತು.   ಖ್ಯಾತ ವೈದ್ಯರಾದ ಡಾ. ಸಿ.ಎನ್. ಮಂಜುನಾಥ್​ ಅವರಿಂದ ದಸರಾ ಮಹೋತ್ಸವ ಉದ್ಘಾಟನೆಗೊಂಡಿತ್ತು. ಆದರೆ ಈ ಬಾರಿ ಉದ್ಘಾಟಕರ ಹೆಸರು ಇನ್ನೂ ಅಂತಿಮಗೊಂಡಿಲ್ಲ.

ಅಕ್ಟೋಬರ್ 14ರಂದು ಅರಮನೆಯಲ್ಲಿ ಆಯುಧ ಪೂಜೆ ಏರ್ಪಡಿಸಲಾಗಿದೆ. ಬೆಳಿಗ್ಗೆ 5.30ರಿಂದ ಪೂಜಾ ವಿಧಿ ವಿಧಾನ ಆರಂಭಗೊಳ್ಳಲಿದೆ. 7.45ಕ್ಕೆ ರಾಜರ ಆಯುಧಗಳನ್ನು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಮಾಡಲಾಗುತ್ತಿದೆ. ಪೂಜೆ ಸಲ್ಲಿಸಿ ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆ ಕಲ್ಯಾಣ ಮಂಟಪಕ್ಕೆ ತರಲಾಗುವುದು. 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ಪೂಜೆ ನೆರವೇರಿಸಲಾಗುವುದು. ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ ಅವರು ಪೂಜೆ ನೆರವೇರಿಸಲಿದ್ದಾರೆ.

ಅಕ್ಟೋಬರ್ 15ರಂದು ಅರಮನೆಯಲ್ಲಿ ವಿಜಯ ದಶಮಿ ಆಚರಿಸಲಾಗುತ್ತಿದ್ದು, 5.45ಕ್ಕೆ ಆನೆ, ಕುದುರೆ, ಹಸುಗಳ ಆಗಮನವಾಗಲಿದೆ. 6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯ ನಡೆಯಲಿದೆ. 7.20ರಿಂದ 7.40ರವರೆಗೆ ವಿಜಯದಶಮಿ‌ ಮೆರವಣಿಗೆ ನಡೆಯಲಿದೆ. ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನಡೆಯಲಿದೆ. ದೇಗುಲದ ಬನ್ನಿ ಮರಕ್ಕೆ ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ ಪೂಜೆ ನಡೆಸಲಿದ್ದಾರೆ. ಪೂಜೆಯ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸ್ಸಾಗಲಿದ್ದಾರೆ.

ಅಕ್ಟೋಬರ್ 31ರಂದು ಸಿಂಹಾಸನ ವಿಂಗಡಿಸಿ ಖಜಾನೆಗೆ ವಾಪಸ್ ರವಾನೆ ಮಾಡಲಾಗುತ್ತಿದ್ದು, ಅಂದೂ ಸಹ ಮಧ್ಯಾಹ್ನ 1.30ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವಿರಲಿದೆ.

ಮೈಸೂರು ಅರಮನೆ ಪ್ರವೇಶ ದರ ಏರಿಕೆ

ಮೈಸೂರು ಅರಮನೆ ಪ್ರವೇಶ ದರ ಏರಿಕೆ ಮಾಡಲಾಗಿದ್ದು, ಅರಮನೆ ಮಂಡಳಿಯು ಹೊಸ ದರ ನಿಗದಿ ಮಾಡಿದೆ. ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿವೆ. ಹಳೆಯ ಪ್ರವೇಶ ದರ 70 ರೂ ಇತ್ತು.  ಈಗ ಹೊಸ ಪ್ರವೇಶದ ದರ 100 ರೂಪಾಯಿಗೆ ಏರಿಸಲಾಗಿದೆ. ಪೋಷಕರ ಜೊತೆ ಬರುವ ಮಕ್ಕಳಿಗೆ ಹಳೆಯ ದರ 30 ರೂ ಇದ್ದರೆ, ಈಗ ಮಕ್ಕಳಿಗೆ ಹೊಸ ದರ 50 ರೂ ನಿಗದಿಪಡಿಸಲಾಗಿದೆ. ಶಾಲಾ ಮಕ್ಕಳಿಗೆ ಹಳೆಯ ದರ 20 ರೂ ಹೊಸ ದರ 50 ರೂ ಮಾತ್ರವೇ ಇದೆ.

ಕನ್ನಡದ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ದರದಲ್ಲಿ ಯಾವುದೇ ಏರಿಕೆ ಇಲ್ಲ. ಇಂಗ್ಲಿಷ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ದರ 120 ರೂ ಇದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: