ಕರ್ನಾಟಕಪ್ರಮುಖ ಸುದ್ದಿ

 ಯುವಜನತೆ ದೇಶಪ್ರೇಮ ಮೈಗೂಡಿಸಿಕೊಳ್ಳಿ : ಜಿಲ್ಲಾಧಿಕಾರಿ ಎಸ್.ಅಶ್ವತಿ

ರಾಜ್ಯ(ಮಂಡ್ಯ)ಸೆ.25:-  ಇಂದಿನ ಮಕ್ಕಳು ಹಾಗೂ ಯುವಜನತೆ ನಮ್ಮ ದೇಶದ ಚರಿತ್ರೆ ಅರಿತು ,  ಸ್ವಾತಂತ್ರ್ಯ ಹೋರಾಟಗಾರರ, ಸಮಾಜ ಸುಧಾರಕರ ತತ್ವಾದರ್ಶಗಳನ್ನು  ಅಳವಡಿಸಿಕೊಂಡು, ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಿ ಎಂದು  ಜಿಲ್ಲಾಧಿಕಾರಿ ಎಸ್. ಅಶ್ವತಿ ಕರೆ ನೀಡಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಆವರಣದಲ್ಲಿ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ 105ನೇ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ ಅಂಗವಾಗಿ ನಡೆದ ಫಿಟ್ ಇಂಡಿಯಾ ಫ್ರೀಡಂ ರನ್, ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು. ಪೋಷಕರು ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮ್ಮ ದೇಶದ ಚರಿತ್ರೆಯ ಬಗ್ಗೆ  ಮಾಹಿತಿ ನೀಡಿ ರಾಷ್ಟ್ರಾಭಿಮಾನವನ್ನು ಬೆಳೆಸಬೇಕು ಎಂದರು.

ಮಕ್ಕಳು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೆ ರಾಷ್ಟ್ರನಾಯಕರ ಜೀವನವನ್ನು ಅರಿತು ಅವರ ಮೌಲ್ಯಯುತವಾದ ಅಂಶಗಳನ್ನು ಅಳವಡಿಸಿಕೊಂಡು ನಿಮಗೆ ಸಾಧ್ಯವಾದಷ್ಟು ಈ ದೇಶಕ್ಕೆ ಸೇವೆಯನ್ನು ಸಲ್ಲಿಸಿ ಎಂದರು. ದೇಶ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ, ನಾವು ದೇಶಕ್ಕೆ ಏನನ್ನು ಕೊಟ್ಟಿದ್ದೇವೆ ಎಂಬ ಎ.ಪಿ.ಜೆ ಅಬ್ದುಲ್ ಕಲಾಂರವರ ವಾಣಿಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಅಜಾದಿ ಕಾ ಅಮೃತ ಮಹೋತ್ಸವ-ಪಿಟ್ ಇಂಡಿಯಾ ಫ್ರೀಡಂ ರನ್ 2.0 ರ ರಾಷ್ಟ್ರಾಭಿಮಾನ ಮೂಡಿಸುವ ಪ್ರತಿಜ್ಞಾ ವಿಧಿಯನ್ನು ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಬೋಧಿಸಿದರು.

ಈ ಜಾಥಾವು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಾರಂಭವಾಗಿ ಡಿ.ಸಿ ನಿವಾಸ ರಸ್ತೆ -ಎಸ್.ಪಿ ಕಚೇರಿ ಮಾರ್ಗ ಅರಣ್ಯ ಕಚೇರಿ ರಸ್ತೆ- ಡಿ.ಡಿ.ಪಿ.ಐ ಕಚೇರಿ ರಸ್ತೆ- ಗಾಂಧಿ ಭವನ ರಸ್ತೆ -ಬಾಲಭವನ ರಸ್ತೆ – ನಿವೇದಿತಾ ನರ್ಸಿಂಗ್ ಹೋಂ ರಸ್ತೆ-ನೂರಡಿ ರಸ್ತೆ- ಹೊಸಳ್ಳಿ ಸರ್ಕಲ್- ಕರ್ನಾಟಕ ಬಾರ್ ಸರ್ಕಲ್- ಕನ್ನಿಕ ಪರಮೇಶ್ವರಿ ದೇವಸ್ಥಾನ ರಸ್ತೆ- ಆರ್.ಟಿ.ಓ ರಸ್ತೆ – ಜಿಲ್ಲಾ ಪಂಚಾಯಿತಿ ರಸ್ತೆ- ಎನ್.ವೈ.ಕೆ ಕಚೇರಿಯವರೆಗೆ ನಡೆಯಿತು.

ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಗ್ರೇಡ್-1 ಎನ್.ಡಿ ಪ್ರಕಾಶ್, ಜಿಲ್ಲಾ ಯುವ ಸಮನ್ವಯ ಅಧಿಕಾರಿ ವಿನಯ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜು ಮೂರ್ತಿ, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಬಸವರಾಜು, ಯುವಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ಎನ್.ಎಸ್.ಎಸ್, ಎನ್ .ಸಿ.ಸಿ ಎನ್.ಜಿ.ಓ ಸೇವಾ ದಳ, ಸ್ಕೌಟ್ ಮತ್ತು ಗೈಡ್ಸ್ ಹಾಗೂ ಜಿಲ್ಲೆಯ ವಿವಿಧ ಯುವ ಸಂಘ ಸಂಸ್ಥೆಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: