ಮೈಸೂರು

ಸೆ.27ರಂದು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಚಾರ ಸಂಕಿರಣ

ಮೈಸೂರು,ಸೆ.25- ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಸೆ.27ರಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಬಗ್ಗೆ ಅರಿವು ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಕೂಲವಾಗುವ ಉದ್ದೇಶದಿಂದ ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಿದೆ.

ಕಾಲೇಜಿನ ಕ್ರೀಡಾ ಸಂಕೀರ್ಣದಲ್ಲಿ ಅಂದು ಬೆಳಿಗ್ಗೆ 10.30ಕ್ಕೆ ವಿಚಾರ ಸಂಕಿರಣವನ್ನು ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ ಉದ್ಘಾಟಿಸಲಿದ್ದಾರೆ. ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ಬೆಳಗಾವಿಯ ವಿಟಿಯು ಉಪಕುಲಪತಿ ಡಾ.ಕರಿಸಿದ್ದಪ್ಪ, ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಮತ್ತು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾವರ್ಧಕ ಸಂಘ (ವಿವಿಎಸ್)ದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಸದಾಶಿವೇಗೌಡ ಹಾಗೂ ಬೋಧಕ-ಬೋಧಕೇತರ ವೃಂದ ಭಾಗವಹಿಸಲಿದೆ.

ಇದೇ ವೇಳೆ ವಿವಿಸಿಇ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಹಾಸ್ಟೆಲ್ ಬ್ಲಾಕ್ ಅನ್ನು ಗಣ್ಯರು ಉದ್ಘಾಟಿಸಲಿದ್ದಾರೆ. ‘ನಮ್ಮೂರು, ನಮ್ಮ ಹೆಮ್ಮೆ ಕುಂಬಾರಕೊಪ್ಪಲು’ ಕುರಿತು ಶ್ರೀಯುತ ಗುಂಡಪ್ಪ ಗೌಡರು ಬರೆದ ಪುಸ್ತಕವನ್ನು ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಮಧ್ಯಾಹ್ನ ‘ಸ್ವಾಯತ್ತ ಮತ್ತು ಸ್ವಾಯತ್ತವಲ್ಲದ ಸಂಸ್ಥೆಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನ’ ಎಂಬ ವಿಷಯದ ಬಗ್ಗೆ ಚರ್ಚಿಸಲು ಯೋಚಿಸಿದೆ. ಈ ಚರ್ಚೆಯು ನೂತನ ಪಾಲಿಸಿ ಅನುಷ್ಠಾನದಲ್ಲಿರುವ ಪ್ರಮುಖ ಸವಾಲುಗಳು, ಸಮಸ್ಯೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಪ್ರಸ್ತುತ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿನ ಮೂಲ ನೈಜತೆ ಮತ್ತು ಉದ್ದೇಶಿತ ನೀತಿಯ ಪರಿಣಾಮಗಳನ್ನು ಅರಿಯಲು ಈ ಗೋಷ್ಠಿ ಸಹಾಯ ಮಾಡಲಿದೆ.

ಬೆಳಗಾವಿಯ ವಿಟಿಯು  ಕುಲಪತಿ ಪ್ರೊ.ಕರಿಸಿದ್ದಪ್ಪ, ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಭೈರಪ್ಪ, ಕರಡು ಸಮಿತಿ ಸದಸ್ಯರಾದ ಪ್ರೊ.ಎಂ.ಕೆ.ಶ್ರೀಧರ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್, ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಲಿಂಗರಾಜ್ ಗಾಂಧಿ ಸೇರಿದಂತೆ ಇತರರು ಮಧ್ಯಾಹ್ನದ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: