ಮೈಸೂರು

ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿ : ಸಂದೇಶ್ ಸ್ವಾಮಿ

ಮೈಸೂರು, ಸೆ.25:- ಸಮಾಜ ಜಾಗೃತಗೊಳಿಸುವ ನಿಟ್ಟಿನಲ್ಲಿ ಸ್ವಹಿತ ತ್ಯಾಗ ಮಾಡಿ ದೇಶಕ್ಕಾಗಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರ ಬದುಕು ನಮ್ಮೆಲ್ಲರಿಗೂ ಮಾದರಿಯಾಗಬೇಕು’ ಎಂದು ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಅಭಿಪ್ರಾಯಪಟ್ಟರು.

ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರ 105ನೇ ಜಯಂತೋತ್ಸವ ಪ್ರಯುಕ್ತ ನಗರದ ಇಟ್ಟಿಗೆ ಗೂಡಿನ ಕಚೇರಿಯ ಆವರಣದಲ್ಲಿ ಶನಿವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಸಮರ್ಪಣಾ ದಿನ’ ಕಾರ್ಯಕ್ರಮದಲ್ಲಿ ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

‘ಕಡುಬಡತನದ ಕುಟುಂಬದಲ್ಲಿ ಜನಿಸಿ, ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಸೋದರ ಮಾವನ ಆಶ್ರಯದಲ್ಲಿ ಬೆಳೆದ ದೀನ್‌ ದಯಾಳ್‌ ಅವರು ತಾವು ಪಡೆದ ಶಿಕ್ಷಣದ ಆಧಾರದಲ್ಲಿ ಉತ್ತಮ ರೀತಿಯ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬಹುದಿತ್ತು ಆದರೆ, ಆರ್‌ಎಸ್‌ಎಸ್‌ ಸಂಪರ್ಕಕ್ಕೆ ಬರುತ್ತಿದ್ದಂತೆ ಅವರ ಬದುಕಿನ ದಿಕ್ಕೇ ಬದಲಾಯಿತು. ಸಮಾಜ ಗಟ್ಟಿಗೊಳಿಸುವ, ಜಾಗೃತಿ ಮತ್ತು ಸಂಘಟನೆ ಮಾಡುವ ಸಂಕಲ್ಪದಿಂದ ಅವರು ಬ್ರಹ್ಮಚಾರಿಯಾಗಿಯೇ ಬಾಳಿದರು’ ಎಂದರು.

ದೊಡ್ಡಸ್ತಿಕೆ ಬಯಸದೆ ಸ್ವಭಾತಃ ಸರಳತೆ ಬದುಕನ್ನು ಮೈಗೂಡಿಸಿಕೊಂಡಿದ್ದ ದೀನ್‌ ದಯಾಳ್‌ ಅವರು ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿಯುವ ಜತೆಗೆ ಶ್ಯಾಮಪ್ರಕಾಶ್‌ ಮುಖರ್ಜಿ ಅವರು ಭಾರತೀಯ ಜನಸಂಘದ ಕಟ್ಟಿದ ಬಳಿಕ ಆರ್‌ಎಸ್‌ಎಸ್‌ ಸರಸಂಘಚಾಲಕ ಮಾಧವ ಸದಾಶಿವ ಗೋಳವಲ್ಕರ್‌ ಅವರ ನಿರ್ದೇಶನದಂತೆ ಉತ್ತರಪ್ರದೇಶದ ಸಹ ಪ್ರಾಂತ್ಯ ಪ್ರಚಾರಕರಾಗಿ ಸಂಘಟನೆಯಲ್ಲಿ ತೊಡಗಿಕೊಂಡು ಸಂಘಟನೆಯಲ್ಲಿಯೂ ಸರಳತೆ ತಂದರು’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯೆ ಲಕ್ಷ್ಮೀದೇವಿ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮ ರಾಜ್ಯ ನಿರ್ದೇಶಕಿ ರೇಣುಕಾ ರಾಜ್ ,ನಗರಪಾಲಿಕೆ ಸದಸ್ಯ ಸಾತ್ವಿಕ್ ಸಂದೇಶ್ ,ಮೈಸೂರು ನಗರ ಪಾಲಿಕೆ ನಾಮ ನಿರ್ದೇಶನ ಸದಸ್ಯ ಜಗದೀಶ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಬಿಜೆಪಿ ಮುಖಂಡರಾದ ಮುರಳಿ ,ಮಂಜು ಸಿ ಗೌಡ ,ವೇಲು ,ಜಯಕುಮಾರ್ ,ಇನ್ನಿತರರು ಹಾಜರಿದ್ದರು (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: